ADVERTISEMENT

ಶಾಸಕರ ಪುಕ್ಕಟ್ಟೆ ಪ್ರಚಾರ: ಗ್ರಾಮಸ್ಥರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2017, 9:09 IST
Last Updated 12 ಸೆಪ್ಟೆಂಬರ್ 2017, 9:09 IST

ನ್ಯಾಮತಿ: ಗ್ರಾಮಸ್ಥರು ಮಾಡಿದ ಯೋಜನೆಯನ್ನು ತಮ್ಮ ಸಾಧನೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಪುಕ್ಕಟ್ಟೆ ಪ್ರಚಾರ ಪಡೆಯುತ್ತಿದ್ದಾರೆ ಎಂದು ಕುಂಕುವ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಸಮೀಪದ ಕೂಗನಹಳ್ಳಿ ತಾಂಡಾ, ಒಡೆಯರಹತ್ತೂರು ಗ್ರಾಮಸ್ಥರು ಸೇರಿ ಕುಂಕುವ ಗ್ರಾಮದಲ್ಲಿರುವ ದೊಡ್ಡಕೆರೆ (ಗೌಡನಕೆರೆ) ತುಂಬಿಸಲು 3 ಕಿ.ಮೀ. ದೂರವಿರುವ ತುಂಗಾ ಮೇಲ್ದಂಡೆ ಚಾನಲ್‌ನಿಂದ ಸುಮಾರು ₹ 15 ಲಕ್ಷ ಖರ್ಚು ಮಾಡಿ ಕೆರೆಗೆ ನೀರು ತುಂಬಿಸುತ್ತಿದ್ದಾರೆ. ರೈತರೇ ಸ್ವಂತ ದೇಣಿಗೆ ಸಂಗ್ರಹಿಸಿ ಮಾಡಿರುವ ಯೋಜನೆ ಇದು.

ಆದರೆ ಶಾಸಕ ಡಿ.ಜಿ.ಶಾಂತನಗೌಡ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಭಗೀರಥ ಪ್ರಯತ್ನದಿಂದ ಕೆರೆಗೆ ನೀರು ತುಂಬಿಸಲಾಗಿದೆ ಎಂದು ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ ಎಂದು ಕುಂಕುವ ಗ್ರಾಮಸ್ಥರಾದ ಜಿ. ಬಸವರಾಜಪ್ಪ, ಎಪಿಎಂಸಿ ಸದಸ್ಯ ಹನುಮಂತಪ್ಪ, ಸದಸ್ಯ ರುದ್ರೇಶ್, ಬಿ.ಜಿ. ಮಹೇಶ ಹಾಗೂ ಗ್ರಾಮಸ್ಥರು ಭಾನುವಾರ ದೂರಿದರು.

ADVERTISEMENT

‘ಸುಮಾರು 48 ಎಕರೆ ಪ್ರದೇಶದಲ್ಲಿರುವ ಗೌಡನಕರೆ ಮೂರರಿಂದ ನಾಲ್ಕು ಗ್ರಾಮಗಳ ಜಾನುವಾರಿಗೆ ಕುಡಿಯುವ ನೀರಿನ ಅವಶ್ಯಕತೆ ನೀಗಿಸಬೇಕು. ಕೆರೆ ಬರಿದಾಗಿದ್ದರಿಂದ ಅಕ್ಕಪಕ್ಕದ ಬೋರ್‌ವೆಲ್‌ಗಳಲ್ಲಿಯೂ ಅಂತರ್ಜಲ ಮಟ್ಟ ಕುಸಿದಿತ್ತು. ಡಜಮೀನುಗಳು ಒಣಗಿದ್ದವು. ಇದನ್ನು ಮನಗಂಡ ಕೂಗನಹಳ್ಳಿ ತಾಂಡಾದ ಚಂದ್ರನಾಯ್ಕ್ ಮೂರೂ ಗ್ರಾಮಸ್ಥರ ಜೊತೆ ಚರ್ಚಿಸಿ, ಕೆರೆಗೆ ನೀರು ತುಂಬಿಸುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡರು. ದೇಣಿಗೆಯನ್ನು ಗ್ರಾಮಸ್ಥರಿಂದ ಸಂಗ್ರಹಿಸಿ ಕೆರೆಗೆ ನೀರು ತುಂಬಿಸುತ್ತಿದ್ದೇವೆ’ ಎಂದರು.

ಈಚೆಗೆ ಸೊರಟೂರು ಗ್ರಾಮ ಪಂಚಾಯ್ತಿ ನೂತನ ಕಚೇರಿಯನ್ನು ಗ್ರಾ.ಪಂ. ಅನುದಾನದಲ್ಲಿ ನಿರ್ಮಿಸಿದ್ದು, ಅದು ಸಹ ತಮ್ಮದೇ ಅನುದಾನದ ಕಾಮಗಾರಿ ಎಂದು ಶಾಸಕರು ಹೇಳಿರುವುದಕ್ಕೂ ಗ್ರಾಮಸ್ಥರು ಲೇವಡಿ ಮಾಡಿದರು.

ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಪುಷ್ಪಾ, ಛಾಯಾ ಅರಸ್ ಕೂಡ ತಮ್ಮ ಅನುದಾನದಲ್ಲಿ ಸ್ವಲ್ಪ ಭಾಗವನ್ನು ಕೊಡಲು ಒಪ್ಪಿದ್ದಾರೆ ಎಂದು ಹೇಳಿದರು.
ಗ್ರಾಮಸ್ಥರಾದ ಸುನಿಲ್, ರಾಜು, ಹರೀಶ್, ಬಸವರಾಜ್, ಬಸವರಾಜಪ್ಪ. ಫಾಲಾಕ್ಷಪ್ಪ, ಪ್ರದೀಪ, ಸುದೀಪ, ಕುಮಾರ, ಶಿವು ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.