ADVERTISEMENT

ಸೇವಾಲಾಲ್ ಜಯಂತಿ ಸಿದ್ಧತೆಗೆ ಸೂಚನೆ

ಫೆಬ್ರುವರಿ 14, 15ರಂದು ಹೊನ್ನಾಳಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಉತ್ಸವ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 6:00 IST
Last Updated 19 ಜನವರಿ 2017, 6:00 IST
ಸೇವಾಲಾಲ್ ಜಯಂತಿ ಸಿದ್ಧತೆಗೆ ಸೂಚನೆ
ಸೇವಾಲಾಲ್ ಜಯಂತಿ ಸಿದ್ಧತೆಗೆ ಸೂಚನೆ   

ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಸೂರಗೊಂಡನಕೊಪ್ಪ ಗ್ರಾಮದಲ್ಲಿ ಫೆ. 14 ಮತ್ತು 15ರಂದು ನಡೆಯಲಿರುವ ಸಂತ ಸೇವಾಲಾಲ್ ಮಹಾರಾಜರ 278ನೇ ಜನ್ಮದಿನಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರಲಿದ್ದು, ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಸಂತ ಸೇವಾಲಾಲ್ ಮಹಾರಾಜರ 278ನೇ ಜನ್ಮ ದಿನಾಚರಣೆ ಸಂಬಂಧ ಬುಧವಾರ ನಡೆದ  ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಈ ಉತ್ಸವಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇದ್ದು, ಊಟ ಮತ್ತು ನೀರಿಗೆ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಫೆ. 13ರಿಂದಲೇ ಉತ್ಸವಕ್ಕೆ ಜನರು ಬರಲಿದ್ದು ಮೂರೂ ದಿನ ಊಟದ ವ್ಯವಸ್ಥೆ ಆಗಬೇಕು. ಗುಣಮಟ್ಟದ ಹಾಗೂ ರುಚಿಯಾದ ಪ್ರಸಾದವನ್ನು ತಯಾರಿಸಿ ಬಡಿಸಬೇಕು. ಜನಸಂದಣಿ ಹೆಚ್ಚಿರುವ ಕಾರಣ ಹಲವು ಊಟದ ಕೌಂಟರ್ ತೆರೆದು ಉದ್ದವಾದ ಬ್ಯಾರಿಕೇಡ್ ನಿರ್ಮಿಸಿ, ನೂಕುನುಗ್ಗಲು ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಬರದ ಹಿನ್ನೆಲೆಯಲ್ಲಿ ಸಮರ್ಪಕ ನೀರು ಸರಬರಾಜಿಗೆ 30 ಟ್ಯಾಂಕರ್ ಮೂಲಕ ನೀರನ್ನು ಒದಗಿಸಲು ಹಾಗೂ 23 ಸ್ಥಿರ ಟ್ಯಾಂಕರ್ ವ್ಯವಸ್ಥೆ ಮಾಡಬೇಕು. ಬೋರ್‌ವೆಲ್‌ಗಳಿಂದ ನೀರು ಸರಬರಾಜು ಹಾಗೂ ಸುಮಾರು 5ಸಾವಿರ ಕುಡಿಯುವ ನೀರಿನ ಬಾಟಲ್‌ ಗಳ ವ್ಯವಸ್ಥೆ ಮಾಡುವಂತೆ ನೀರು ಸರಬರಾಜು ಇಲಾಖೆಯ ಅಧಿಕಾರಿ ರಾಜಶೇಖರ್‌ ಅವರಿಗೆ ತಿಳಿಸಿದರು.

ಡಿವೈಎಸ್‌ಪಿ ನೇಮಗೌಡ ಮಾತನಾಡಿ, ಸುಮಾರು 25 ಸಾವಿರ ವಾಹನ ಬರಬಹುದು. ಇದಕ್ಕೆ ಸೂಕ್ತ ನಿಲುಗಡೆ ವ್ಯವಸ್ಥೆ ಆಗಬೇಕು. ಕಳೆದ ಬಾರಿ 20 ಸಿಸಿಟಿವಿ ಕ್ಯಾಮೆರಾಗಳನ್ನು ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ಅಳವಡಿಸಲಾಗಿತ್ತು. ಈ ಬಾರಿಯೂ ಇದೇ ಮುಂದುವರಿಯಲಿದೆ ಎಂದರು.
ಪಾರ್ಕಿಂಗ್ ಸ್ಥಳಗಳಲ್ಲಿ ದೀಪಗಳು ಮತ್ತು ಒಂದೆರಡು ಫೋಕಸ್ ಲೈಟ್‌ಗಳನ್ನು ಅಳವಡಿಸಿ, ವಿದ್ಯುತ್ ವ್ಯತ್ಯಯವಾಗದಂತೆ ಜಾಗ್ರತೆ ವಹಿಸಲು ಜಿಲ್ಲಾಧಿಕಾರಿ ಸೂಚಿಸಿದರು.

ಆರೋಗ್ಯ ಇಲಾಖೆ ಮತ್ತು ಆಯುಷ್ ಇಲಾಖೆಗಳು ಆ ದಿನಗಳಂದು 108 ಆಂಬುಲೆನ್ಸ್ ಹಾಗೂ ಎರಡು 24X7 ತಾತ್ಕಾಲಿಕ ಆರೋಗ್ಯ ತಪಾಸಣಾ ಕೌಂಟರ್‌ಗಳನ್ನು ತೆರೆಯಬೇಕು. ಹೆಲಿಪ್ಯಾಡ್ ಮತ್ತು ಮುಖ್ಯ ವೇದಿಕೆ ಸೇರಿದಂತೆ 34 ಕಡೆಗಳಲ್ಲಿ ಅಗ್ನಿಶಾಮಕ ದಳ ನಿಯೋಜಿಸುವಂತೆ ತಿಳಿಸಿದರು.
ನೆರೆದ ಜನರಿಗೆ ಮಹಿಳಾ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ತಲಾ 25 ಮೊಬೈಲ್ ಶೌಚಾಲಯ ವ್ಯವಸ್ಥೆ ಮಾಡುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು.

ಸಂತ ಸೇವಾಲಾಲ್ ದೇವಸ್ಥಾನ ಮಹಾಮಠ ಸಮಿತಿಯ ಕಾರ್ಯದರ್ಶಿ ರಾಘವೇಂದ್ರ ನಾಯಕ ಮಾತನಾಡಿ, ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಸಮಾರಂಭದ ಎಲ್ಲ ವ್ಯವಸ್ಥೆಗಳನ್ನು ನೋಡಿಕೊಳ್ಳಲು 20 ಸಮಿತಿಗಳನ್ನು ರಚಿಸಲಾಗಿದೆ ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಅಶ್ವತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ಎಸ್. ವಂಟಗೋಡಿ, ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ, ಮಹಾನಗರ ಪಾಲಿಕೆ ಆಯುಕ್ತ ಬಿ.ಎಚ್.ನಾರಾಯಣಪ್ಪ, ಡಿವೈಎಸ್‌ಪಿ ನೇಮಗೌಡ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕುಮಾರ್ ಹನುಮಂತಪ್ಪ, ಹೊನ್ನಾಳಿ ತಹಶೀಲ್ದಾರ್ ಹೀರಾನಾಯ್ಕ, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.