ADVERTISEMENT

13ನೇ ವಾರ್ಡ್ ಎಲ್ಲ ಸೌಕರ್ಯ ಇದ್ದರೂ ಸ್ವಚ್ಛತೆ ಮರೀಚಿಕೆ

ವಾರ್ಡ್ ಬೀಟ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2015, 9:03 IST
Last Updated 26 ಜನವರಿ 2015, 9:03 IST

ಶಿವಮೊಗ್ಗ: ಉತ್ತಮ ರಸ್ತೆ ಇದೆ. ರಸ್ತೆ ಬದಿ ಸ್ವಚ್ಛತೆ ಇಲ್ಲ. ಚರಂಡಿಗಳಿವೆ. ಚರಂಡಿಗಳ ಹೂಳು ಕಾಲಕಾಲಕ್ಕೆ ತೆಗೆದಿಲ್ಲ. ಅಲ್ಲಿ ತುಂಗಾ ಉಪ ನಾಲೆಯ ಹರಿಯುತ್ತದೆ. ಅದು ಚರಂಡಿಯೋ, ನಾಲೆಯೋ ಎನ್ನುವ ಅನುಮಾನ ಮೂಡಿಸುತ್ತದೆ.

–ಇದು ವಿದ್ಯಾನಗರ, ಚಿಕ್ಕಲ್‌, ಶಾಂತಮ್ಮ ಲೇಔಟ್‌ ಸೇರಿದಂತೆ ಚಿಕ್ಕಪುಟ್ಟ ಪ್ರದೇಶಗಳನ್ನು ಒಳಗೊಂಡ 13ನೇ ವಾರ್ಡ್‌ನ ಸಂಕ್ಷಿಪ್ತ ಚಿತ್ರಣ.

ಮಹಾದೇವಿ ಚಿತ್ರಮಂದಿರದ ಪಕ್ಕದಲ್ಲೇ ಇರುವ ಬಡಾವಣೆಯಲ್ಲಿ ನೌಕರರೂ ಸೇರಿದಂತೆ ಮಧ್ಯಮ ವರ್ಗದ ಜನರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ರಸ್ತೆ ಇಲ್ಲ. ಚರಂಡಿ ನೀರು ಸರಾಗವಾಗಿ ಹರಿಯುವುದಿಲ್ಲ. ರೈಲು ಮಾರ್ಗದ ಸಮೀಪವೇ ಇರುವ ಕಾರಣ ಎಲ್ಲೆಂದರಲ್ಲಿ ಜಾಲಿಕಂಟಿಗಳು ಬೆಳೆದಿದ್ದು, ಸಮಸ್ಯೆಯ ತಾಣವಾಗಿದೆ. ರಸ್ತೆ ಬದಿಯಲ್ಲೇ ಸಿಮೆಂಟ್‌ ಸಾಮಗ್ರಿ ತಯಾರಿಸಲಾಗುತ್ತಿದ್ದು, ಅದರ ದೂಳು ಅಲ್ಲಿನ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.

‘ಪಾಲಿಕೆ ವತಿಯಿಂದ ಇದುವರೆಗೂ ರಸ್ತೆಯನ್ನೇ ಮಾಡಿಲ್ಲ. ಚರಂಡಿ ನೀರು ಮುಂದೆ ಹೋಗದ ಕಾರಣ ಸಮಸ್ಯೆಯಾಗಿದೆ’ ಎಂದರು ಉಪನ್ಯಾಸಕ ಶ್ರವಣಕುಮಾರ್‌.

ಮುಖ್ಯ ರಸ್ತೆಯಲ್ಲಿ ನೀರಿನ ಪೈಪ್‌ ಒಡೆದು 7–8 ತಿಂಗಳಾದರೂ ಸರಿಪ ಡಿಸಿಲ್ಲ. ನೀರಿನ ಸಮಸ್ಯೆ ತೀವ್ರವಾಗಿತ್ತು. ಚರಂಡಿ ಸ್ವಚ್ಛಗೊಳಿಸದ ಕಾರಣ ಮಳೆಗಾ ಲದಲ್ಲಿ ನೀರು ಬಂದರೆ ನೀರಿನ ತೊಟ್ಟಿಯಲ್ಲೆಲ್ಲ ಚರಂಡಿ ನೀರು ತುಂಬುತ್ತದೆ. ಅದನ್ನೆಲ್ಲ ಹೊರಗೆ ಹಾಕಿ ಮಳೆ ನಿಂತ ಬಳಿಕ ಮತ್ತೆ ನೀರು ತುಂಬಿಸಿಕೊಳ್ಳಬೇಕಿದೆ’ ಎಂದು ಸಮಸ್ಯೆ ಬಿಚ್ಚಿಟ್ಟರು ವಿದ್ಯಾ ನಗರದ ಗೃಹಿಣಿ ವಿಜಯಾ ಅಡಿಗ.

‘ಸ್ವಚ್ಛತೆಗೆ ಆದ್ಯತೆ ನೀಡಬೇಕು. ರಸ್ತೆ ಯಲ್ಲೇ ಕಸ ಗುಡ್ಡೆ ಹಾಕುವ ಪರಿಪಾಠ ಕೈಬಿಡಬೇಕು. ದೊಡ್ಡ ವಾಹನಗಳ ಸಂಚಾರ ನಿಷೇಧಿಸಬೇಕು’ ಎಂದು ಯುವತಿ ಸರಿತಾ ಅವರ ದೂರು.

ಸಹ್ಯಾದ್ರಿ ಕಾಲೇಜು ರಸ್ತೆಗೆ ಬೆದರುವ ನಾಗರಿಕರು ವಾರ್ಡ್ ವ್ಯಾಪ್ತಿಯಲ್ಲಿ ಬರುವ ಸಹ್ಯಾದ್ರಿ ಕಾಲೇಜು ರಸ್ತೆ ಎಂದರೆ ಸಾಕು ಅದರ ಪಕ್ಕದ ಬಡಾವಣೆಗಳ ನಿವಾಸಿಗಳು ಬೆಚ್ಚಿಬೀಳುತ್ತಾರೆ. ಕಾರಣ ಕಿರಿದಾದ ಆ ದಾರಿಯಲ್ಲಿ ನಿತ್ಯವೂ ಸಂಚಾರ ದಟ್ಟಣೆ ಇರುತ್ತದೆ. ಭದ್ರಾವತಿ ಮಾರ್ಗದ ಎಲ್ಲ ವಾಹನಗಳು ಹೆಚ್ಚಾಗಿ ಈ ಮಾರ್ಗದ ಮೂಲಕವೇ ಸಾಗುತ್ತದೆ. ಅಲ್ಲದೇ,  ಸಾವಿರಾರು ವಿದ್ಯಾರ್ಥಿಗಳು ಕಾಲೇಜಿಗೆ ನಿತ್ಯವೂ ಈ ಮಾರ್ಗದ ಮೂಲಕವೇ ತೆರಳುತ್ತಾರೆ. ವಾಹನ ದಟ್ಟಣೆ, ಅತಿವೇಗದ ಪರಿಣಾಮ ಅಪಘಾತ ಸಾಮಾನ್ಯ. ಇದು ಅಲ್ಲಿನ ಜನರ ಭೀತಿಗೆ ಕಾರಣವಾಗಿದೆ.

‘ರಸ್ತೆ ಹತ್ತಿರವೇ ಇರುವ ಕಾರಣ ಮಕ್ಕಳನ್ನು ಹೊರಗೆ ಬಿಡಲು ಭಯವಾಗುತ್ತದೆ. ಅಪಘಾತ ಇಲ್ಲಿ ಸಾಮಾನ್ಯ ಎನ್ನುವಂತಾಗಿದೆ’ ಎಂದರು ಉಚ್ಚಂಗ್ಯಮ್ಮ ಕೇರಿಯ ಭಾರತಿ.

ಭೋವಿ ಕಾಲೊನಿ, ಭಾನು (ಭಾನು ಯುವಕ ಸಂಘ) ಬೀದಿಯ ಸ್ಥಿತಿಯೂ ಇತರೆ ಬೀದಿಗಳಿಗಿಂತ  ಭಿನ್ನವಾಗಿಲ್ಲ.
‘ಹಂದಿಗಳ ಕಾಟ ವಿಪರೀತವಾಗಿದೆ. ಸಂಜೆಯಾದರೆ ಸೊಳ್ಳೆಗಳ ಕಾಟ. ಸಚ್ಛತೆಗೆ ಆದ್ಯತೆ ನೀಡಿದರೆ ಈ ಎಲ್ಲ ಸಮಸ್ಯೆಗೆ ಮುಕ್ತಿ ದೊರೆಯುತ್ತದೆ’ ಎಂದರು ಭೋವಿ ಕಾಲೊನಿಯ ಗಂಗಮ್ಮ.

ಸುಭಾಷ್‌ ನಗರದ ಒಂದು ಚರಂಡಿಯಲ್ಲಿ 2–3 ಅಡಿ ಹೂಳು ತುಂಬಿರುವುದು ಕಂಡು ಬಂತು. ಅಲ್ಲೇ ಮಗ್ಗುಲಲ್ಲಿ ಹರಿಯುವ ತುಂಗಾ ಉಪ ನಾಲೆ ನೋಡಿದ ತಕ್ಷಣ ದೊಡ್ಡ ಮೋರಿ ಎಂದೇ ಭಾಸವಾಗುತ್ತದೆ. ಏಕೆಂದರೆ ಅಲ್ಲಿನ ಎಲ್ಲ ಕಲ್ಮಶ ಅದರಲ್ಲೇ ಸಂಗ್ರಹವಾಗಿದೆ.

‘ಚರಂಡಿ ಸಮಸ್ಯೆ ಬಿಟ್ಟರೆ ಇಲ್ಲಿ ಯಾವ ಸಮಸ್ಯೆಯೂ ಇಲ್ಲ. ಸಮಯಕ್ಕೆ ಸರಿಯಾಗಿ ಚರಂಡಿ ಸ್ವಚ್ಛಗೊಳಿಸಿದರೆ ಅದು ಇಲ್ಲಿನ ನಿವಾಸಿಗಳಿಗೆ ಮಾಡುವ ದೊಡ್ಡ ಉಪಕಾರ’ ಎಂದು ಹೇಳಿದರು ಛಾಯಾಗ್ರಾಹಕ ಅಜಯ್‌.

ತುಂಗಾ ನಾಲೆಯ ಆಚೆ ಬದಿ ಇರುವ ಶ್ರೀಗಂಧ ನಗರದಲ್ಲೂ ಅದೇ ಸಮಸ್ಯೆ. ‘ಶಾಂತಮ್ಮ ಲೇಔಟ್‌ನಲ್ಲಿ ಸೊಳ್ಳೆಗಳ ಕಾಟ ಬಿಟ್ಟರೆ ಯಾವ ಸಮಸ್ಯೆಯೂ ಇಲ್ಲ. ರಸ್ತೆ, ಚರಂಡಿ ಕಾಮಗಾರಿಯೂ ಆರಂಭವಾಗಿದೆ’ ಎಂದರು ಅಲ್ಲಿನ ನಿವಾಸಿ ಇಲಾರಿ ಶರಾಮ್.
‘ಇಲ್ಲಿ ಎಲ್ಲ ಸೌಲಭ್ಯ ಇದೆ. ಆದರೆ, ಅನೇಕ ವರ್ಷಗಳಿಂದ ವಾಸಿಸುತ್ತಿರುವ ಬಡವರಿಗೆ ಹಕ್ಕುಪತ್ರವನ್ನೇ ನೀಡಿಲ್ಲ’ ಎಂದರು ಗಾರೆ ಕೆಲಸಗಾರ ಮಂಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.