ADVERTISEMENT

ನಡೆ, ನುಡಿಯ ಸಾಮರಸ್ಯವೇ ಧರ್ಮ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 10:17 IST
Last Updated 5 ಫೆಬ್ರುವರಿ 2018, 10:17 IST
ನಡೆ, ನುಡಿಯ ಸಾಮರಸ್ಯವೇ ಧರ್ಮ
ನಡೆ, ನುಡಿಯ ಸಾಮರಸ್ಯವೇ ಧರ್ಮ   

ಮಲೇಬೆನ್ನೂರು: ಕೌಟುಂಬಿಕ ಜೀವನದಿಂದ ದೂರವಿದ್ದು, ಜಗತ್ತಿನ ಹಿತಕ್ಕಾಗಿ ಶ್ರಮಿಸುತ್ತಿರುವ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಮಾಜಸೇವೆ ಎಲ್ಲರಿಗೂ ಮಾದರಿ ಎಂದು ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಹರಿಹರ ತಾಲ್ಲೂಕಿನ ಮಲೇಬೆನ್ನೂರಿನಲ್ಲಿ ಭಾನುವಾರ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗ ಭವನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಅಧ್ಯಾತ್ಮದ ನೆಲೆಗಟ್ಟಿನ ಮೇಲೆ ರೂಪಿತಗೊಂಡಿರುವ ಬ್ರಹ್ಮಕುಮಾರಿ ಸಂಸ್ಥೆ ಶಾಂತಿಯ ಸಂದೇಶಗಳನ್ನು ಪಸರಿಸುತ್ತಿದೆ. ಅನಾದಿಕಾಲದಿಂದ ವೇದೋಪನಿಷತ್‌ಗಳೂ ಶಾಂತಿ ಮಂತ್ರವನ್ನೇ ಜಪಿಸುತ್ತ ಬಂದಿವೆ. ಆದರೆ, ಪ್ರಸ್ತುತ ಶಾಂತಿ ಮೃಗ ಮರೀಚಿಕೆಯಾಗಿದ್ದು, ಮನುಷ್ಯನ ಕೈಗೆ ನಿಲುಕುತ್ತಿಲ್ಲ. ಕಾರಣ, ಮನುಷ್ಯನ ಚಂಚಲ ಮನಸ್ಸು’ ಎಂದರು.

ADVERTISEMENT

ಹಿಡಿತಕ್ಕೆ ಸಿಗದ ಮನಸ್ಸು ಬುದ್ಧಿಯನ್ನೇ ನಿಯಂತ್ರಿಸುತ್ತಿದೆ. ಪರಿಣಾಮ, ಸಮಾಜದಲ್ಲಿ ವಿಚಿತ್ರವಾಗಿ ವರ್ತಿಸುತ್ತಿರುವ ಮನುಷ್ಯ ಅವನತಿಯ ಹಾದಿಯತ್ತ ಸಾಗುತ್ತಿದ್ದಾನೆ.
ಮನಸ್ಸನ್ನು ಹತೋಟಿಯಲ್ಲಿಡಲು, ಸ್ಥಿರೀಕರಿಸಲು ಧ್ಯಾನ ಹಾಗೂ ಅಧ್ಯಾತ್ಮ ಮುಖ್ಯ ಎಂದರು.

ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯ. ಉತ್ತಮ ಬಟ್ಟೆ ಧರಿಸಿ, ಪ್ರಸಾಧನಗಳನ್ನು ಬಳಸಿ ಸುಂದರವಾಗಿ ಕಂಡರೆ ಸಾಲದು; ಉತ್ತಮವಾಗಿ ಜೀವಿಸುವುದನ್ನೂ ಕಲಿಯಬೇಕು. ಅಂತರಂಗದ ಸೌಂದರ್ಯ ಹೆಚ್ಚಿಸಿಕೊಳ್ಳಬೇಕು. ಸತ್ಯ, ಕರುಣೆ, ಅಂತಃಕರುಣೆ, ಪ್ರೀತಿ ಎಂಬ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ನಡೆ ನುಡಿಯ ಸಾಮರಸ್ಯವೇ ನಿಜವಾದ ಧರ್ಮ ಎಂದರು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಜನರ ಮನೆಗಳನ್ನು ಮಂದಿರವನ್ನಾಗಿಸುತ್ತಿದೆ. ಅಂತೆಯೇ ಬಸವಣ್ಣನವರು ಭಕ್ತರ ಮನೆಗಳೆಲ್ಲ ಮಠಗಳಾಗಬೇಕು ಎಂದು ಆಶಿಸಿದ್ದರು. ಮನಸ್ಸನ್ನು ಪವಿತ್ರವಾಗಿಡುವ
ಕೆಲಸ ನಿರಂತರವಾಗಿ ನಡೆಯಲಿ ಎಂದು ತರಳಬಾಳು ಶ್ರೀ ಆಶಿಸಿದರು.

ರಾಜ್ಯಪಾಲ ವಜುಭಾಯಿ ರೂಡಾಭಾಯಿ ವಾಲಾ ಮಾತನಾಡಿ, ‘ಎಷ್ಟೇ ಸಂಪತ್ತಿದ್ದರೂ, ಮಾನವೀಯತೆ ಇಲ್ಲದಿದ್ದರೆ ಎಲ್ಲವೂ ವ್ಯರ್ಥ. ಹಾಗೆಯೇ ಎಷ್ಟೇ ಜ್ಞಾನ ಇದ್ದರೂ ಹಂಚದಿದ್ದರೆ ಪ್ರಯೋಜನವಿಲ್ಲ’ ಎಂದರು.

ಭಾರತೀಯ ಸಂಸ್ಕೃತಿ, ಧರ್ಮ ಹಾಗೂ ಅಧ್ಯಾತ್ಮವನ್ನು ಕಡೆಗಣಿಸಲಾಗುತ್ತಿದೆ. ಸಮಾಜದಲ್ಲಿ ರಾವಣನಂತಹ ವ್ಯಕ್ತಿತ್ವದವರು ಹೆಚ್ಚಾಗಿದ್ದು, ದುಷ್ಟರ ಬೆನ್ನಿಗೆ ನಿಲ್ಲುವವರ ಸಂಖ್ಯೆಯೂ ಹೆಚ್ಚಾಗಿದೆ. ರಾಮನಂತಹ ಗುಣಗಳಿರುವ ವ್ಯಕ್ತಿಗಳು ಸಮಾಜಕ್ಕೆ ಅವಶ್ಯ ಎಂದರು.

ಮಹಿಳೆಯರು ಬುದ್ಧಿವಂತಿಕೆ ಹಾಗೂ ಎಂತಹ ಪರಿಸ್ಥಿತಿಯನ್ನೂ ನಿಭಾಯಿಸುವ ಛಾತಿ ಹೊಂದಿರುತ್ತಾರೆ. ಆದರೆ, ಸರಿಯಾದ ಅವಕಾಶಗಳು ಸಿಗುತ್ತಿಲ್ಲ. ಸಿಕ್ಕ ಅವಕಾಶಗಳನ್ನೇ ಬಳಸಿಕೊಂಡು ಯಶಸ್ವಿಯಾಗಿರುವ ನೂರಾರು ನಾರಿಯರು
ಕಣ್ಮುಂದೆ ನಿಲ್ಲುತ್ತಾರೆ. ಮಹಿಳೆಯರಿಗೆ ಹೆಚ್ಚು ಹೆಚ್ಚು ಅವಕಾಶಗಳು ಸಿಗಬೇಕು ಎಂದರು.

‘ಎಷ್ಟು ದಿನ ಬದುಕುತ್ತೇವೆ ಎಂಬುದು ಮುಖ್ಯವಲ್ಲ. ಬದುಕಿರುವಷ್ಟು ದಿನ ಕೆಡು ಬಯಸದೆ, ಧೈರ್ಯವಾಗಿ ಬದುಕಬೇಕು. ಸುಂದರವಾಗಿ ಕಾಣುವುದಕ್ಕಿಂತ ಸರಳವಾಗಿ ಜೀವಿಸುವುದನ್ನು ಕಲಿಯಬೇಕು’ ಎಂದರು.

ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ಉಪ ವಲಯದ ನಿರ್ದೇಶಕ ಡಾ.ಬಸವರಾಜ ರಾಜಋಷಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹರಿಹರ ಶಾಸಕ ಎಚ್‌.ಎಸ್.ಶಿವಶಂಕರ್, ಮಲೇಬೆನ್ನೂರು ಪುರಸಭಾ ಅಧ್ಯಕ್ಷೆ ಅಂಜಿನಮ್ಮ, ಎಸ್‌ಪಿ ಡಾ.ಭೀಮಾಶಂಕರ್ ಎಸ್.ಗುಳೇದ ಉಪಸ್ಥಿತರಿದ್ದರು. ನಿರ್ಮಲಾಜಿ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕರಾದ ವೀಣಾಜಿ, ಲೀಲಾಜಿ, ಮಂಜುಳಾಜಿ ಅವರೂ ಉಪಸ್ಥಿತರಿದ್ದರು..

ಸಂಘಟಿತ ಹೋರಾಟ ಅಗತ್ಯ

ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ ರಾಜಮಹಾರಾಜರ ಕಾಲದಲ್ಲೂ ಒಗ್ಗಟ್ಟು, ಸಂಘಟಿತ ಹೋರಾಟದ ಕೊರತೆ ಎದ್ದುಕಾಣುತ್ತದೆ. ಮೊಗಲ್‌ ದೊರೆ ಅಕ್ಬರ್ ದಂಡೆತ್ತಿ ಬಂದು ಮಹಾರಾಣಾ ಪ್ರತಾಪ್‌ ಹಾಗೂ ಮಾನ್‌ಸಿಂಗ್ ಅವರನ್ನು ಸೋಲಿಸಿದ. ಇಬ್ಬರೂ ಒಟ್ಟಾಗಿ ಯುದ್ಧ ಎದುರಿಸಿದ್ದರೆ ಗೆಲುವು ಸಾಧಿಸಬಹುದಿತ್ತು. ಪ್ರಸ್ತುತ ದೇಶದಲ್ಲೂ ಒಗ್ಗಟ್ಟಿನ ಕೊರತೆಯಿದೆ. ದೇಶದಲ್ಲಿರುವ ದುಷ್ಟ ಶಕ್ತಿಗಳು ಮುಗ್ಧಜನರ ಮೇಲೆ ಆಕ್ರಮಣ ಮಾಡುತ್ತಿವೆ. ಅಂಥವರನ್ನು ಸಂಘಟಿತರಾಗಿ ಎದುರಿಸಬೇಕಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.