ADVERTISEMENT

ಪೈಪ್‌ ಅಡುಗೆ ಅನಿಲ: ಸಾರ್ಜನಿಕರ ನಿರಾಸಕ್ತಿ...

ಎಸ್‌.ಎಸ್‌.ಬಡಾವಣೆ, ಸಿದ್ಧವೀರಪ್ಪ ಬಡಾವಣೆಗಳಲ್ಲಿ ಪ್ರಗತಿಯಲ್ಲಿದೆ ಪಿಎನ್‌ಜಿ ಅಳವಡಿಕೆ ಕಾರ್ಯ

ಸುಮಾ ಬಿ.
Published 20 ಅಕ್ಟೋಬರ್ 2023, 5:35 IST
Last Updated 20 ಅಕ್ಟೋಬರ್ 2023, 5:35 IST
ದಾವಣಗೆರೆಯ ಎಸ್.ಎಸ್ ಬಡಾವಣೆಯಲ್ಲಿ ಮನೆಯೊಂದಕ್ಕೆ ಗ್ಯಾಸ್‌ ಪೈಪ್‌ಲೈನ್‌ ಸಂಪರ್ಕ ಅಳವಡಿಸುತ್ತಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಎಸ್.ಎಸ್ ಬಡಾವಣೆಯಲ್ಲಿ ಮನೆಯೊಂದಕ್ಕೆ ಗ್ಯಾಸ್‌ ಪೈಪ್‌ಲೈನ್‌ ಸಂಪರ್ಕ ಅಳವಡಿಸುತ್ತಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ‘ನಲ್ಲಿಯಲ್ಲಿ ನೀರು ಬರುವಂತೆ ಗ್ಯಾಸ್‌ ಕೂಡ ಬರುತ್ತದೆ ಎಂದು ಊಹಿಸಿಯೂ ಇರಲಿಲ್ಲ. ಮನೆಗೆ ಗ್ಯಾಸ್‌ ಪೈಪ್‌ಲೈನ್‌ ಕನೆಕ್ಷನ್‌ ಕೊಡಲು ವರ್ಷದ ಹಿಂದೆ ಸಿಬ್ಬಂದಿಯೊಬ್ಬರು ಅನುಮತಿ ಕೇಳಲು ಬಂದಾಗ ಒಲ್ಲದ ಮನಸಿನಿಂದಲೇ ಸಮ್ಮತಿ ಸೂಚಿಸಿದ್ದೆವು. ನಾಲ್ಕು ತಿಂಗಳಿಂದ ಪೈಪ್‌ಲೈನ್‌ ಮೂಲಕ ಬರುವ ಗ್ಯಾಸ್‌ ಬಳಸುತ್ತಿದ್ದೇವೆ. ಎರಡು ತಿಂಗಳ ಬಿಲ್‌ ಬಂದಿದೆ. ಸಿಲಿಂಡರ್‌ ಗ್ಯಾಸ್‌ಗೆ ಹೋಲಿಸಿದರೆ ಬಿಲ್‌ ಅರ್ಧದಷ್ಟು ಕಡಿಮೆ ಎಂದೆನಿಸುತ್ತಿದೆ. ಮುಂದೆ ನೋಡಬೇಕು...’

ಗ್ಯಾಸ್‌ ಪೈಪ್‌ಲೈನ್‌ ಬಗ್ಗೆ ನಗರದ ಸಿದ್ಧವೀರಪ್ಪ ಬಡಾವಣೆಯ ನಿವಾಸಿ ಎಂ.ಎನ್‌. ಜಯಂತಿ ಅವರ ಅಚ್ಚರಿ ಬೆರೆತ ಮಾತುಗಳಿವು.

ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಯೋಜನೆಯಡಿ ನಗರದಲ್ಲಿ ಪೈಪ್‌ಲೈನ್‌ ಮೂಲಕ ಮನೆ ಮನೆಗಳಿಗೆ ಅಡುಗೆ ಅನಿಲ ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ. ಆರಂಭಿಕ ಹಂತವಾಗಿ ನಗರದ ರಿಂಗ್‌ ರಸ್ತೆ ಬಳಿಯ ಸಿದ್ಧವೀರಪ್ಪ ಬಡಾವಣೆ ಹಾಗೂ ಎಸ್‌.ಎಸ್‌. ಬಡಾವಣೆಗಳ ಹಲವು ನಿವಾಸಿಗಳು ಈ ಯೋಜನೆಯ ಪ್ರಯೋಜನ ಪಡೆಯುತ್ತಿವೆ.

ADVERTISEMENT

‘ಯುನಿಸನ್‌ ಎನ್ವಿರೊ ಪ್ರೈವೇಟ್‌ ಲಿಮಿಟೆಡ್‌’ ಸಂಸ್ಥೆ ಈ ಸಂಪರ್ಕ ಕಾಮಗಾರಿ ಕೈಗೆತ್ತಿಕೊಂಡಿದ್ದು, ‘ಅಶೋಕ ಗ್ಯಾಸ್‌’ ಹೆಸರಿನಡಿ ಒಂದೂವರೆ ವರ್ಷದಿಂದ ಎರಡು ಬಡಾವಣೆಗಳಲ್ಲಿ ಮನೆಮನೆಗೆ ಪೈಪ್‌ಲೈನ್‌ ಎಳೆಯುವ, ಗ್ಯಾಸ್‌ ಸಂಪರ್ಕದ ನೋಂದಣಿ ಕಾರ್ಯ ಮಾಡಲಾಗುತ್ತಿದೆ.

ಆದರೆ, ಸಾರ್ವಜನಿಕರು ಪೈಪ್‌ಲೈನ್‌ ಅಳವಡಿಕೆಗೆ ನಿರಾಸಕ್ತಿ ತೋರುತ್ತಿದ್ದಾರೆ. ಎರಡೂ ಬಡಾವಣೆಗಳಲ್ಲಿ 24.85 ಕಿ.ಮೀ ಪೈಪ್‌ಲೈನ್‌ ಕಾರ್ಯ ಪೂರ್ಣಗೊಂಡಿದೆ. ಎಸ್‌.ಎಸ್‌.ಲೇಔಟ್‌ ‘ಎ’ ಬ್ಲಾಕ್‌ನಲ್ಲಿರುವ 904 ಮನೆಗಳಲ್ಲಿ 290 ಮನೆಗಳು, ಸಿದ್ಧವೀರಪ್ಪ ಬಡಾವಣೆಯ 1998 ಮನೆಗಳ ಪೈಕಿ ಕೇವಲ 117 ಮನೆಗಳು ಗ್ಯಾಸ್‌ ಪೈಪ್‌ಲೈನ್‌ ಸಂಪರ್ಕ ಪಡೆದುಕೊಂಡಿವೆ. ಈ ಎರಡೂ ಬಡಾವಣೆಗಳ 1,244 ಮನೆಗಳಿಗೆ ಪೈಪ್‌ಲೈನ್‌ ಎಳೆಯುವ ಕಾರ್ಯ ಪ್ರಗತಿಯಲ್ಲಿದೆ. ಎಸ್‌.ಎಸ್‌.ಬಡಾವಣೆಯ ‘ಬಿ’ ಬ್ಲಾಕ್‌ನಲ್ಲಿ ಕಾಮಗಾರಿ ನಡೆಸಲು ಈಚೆಗಷ್ಟೇ ಪಾಲಿಕೆಯಿಂದ ಅನುಮತಿ ದೊರೆತಿದ್ದು, ಅಲ್ಲಿಯೂ ಕಾಮಗಾರಿ ಆರಂಭಗೊಳ್ಳಲಿದೆ.

‘ನಗರದ ಎಸ್‌.ಎಸ್‌.ಲೇಔಟ್‌ ‘ಎ’ ಮತ್ತು ‘ಬಿ’ ಬ್ಲಾಕ್‌, ಸಿದ್ಧವೀರಪ್ಪ ಬಡಾವಣೆ ಮತ್ತು ಕವೆಂಪು ನಗರ, ವಿನಾಯಕ ನಗರ, ಸ್ವಾಮಿ ವಿವೇಕಾನಂದ ಬಡಾವಣೆ, ಆಂಜನೇಯ ಬಡಾವಣೆ, ಎಂಸಿಸಿ ‘ಬಿ’ ಬ್ಲಾಕ್‌ ಬಡಾವಣೆಗಳಲ್ಲಿನ ಒಟ್ಟು 7,598 ಮನೆಗಳಿಗೆ ಗ್ಯಾಸ್‌ ಪೈಪ್‌ಲೈನ್‌ ಸಂಪರ್ಕ ನೀಡುವ ಯೋಜನೆಯನ್ನು ರೂಪಿಸಲಾಗಿದೆ. ಇಷ್ಟು ಬಡಾವಣೆಗಳಲ್ಲಿ ಒಟ್ಟು 64.66 ಕಿ.ಮೀ ಪೈಪ್‌ಲೈನ್‌ ಕಾಮಗಾರಿ ನಡೆಯಲಿದೆ’ ಎಂದು ಯುನಿಸನ್‌ ಎನ್ವಿರೊ ಪ್ರೈವೆಟ್‌ ಲಿಮಿಟೆಡ್‌ನ (ಅಶೋಕ ಗ್ಯಾಸ್‌) ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನೀಲ್‌ ಪೂಜಾರಿ ‘ಪ್ರಜಾವಾಣಿ’ಗೆ ತಿಳಿಸಿದರು.   

‘ಅಪಾರ್ಟ್‌ಮೆಂಟ್‌ ಇರುವಂಥಹ ನಗರಗಳಲ್ಲಿ ಗ್ಯಾಸ್‌ ಪೈಪ್‌ಲೈನ್‌ ಅಳವಡಿಕೆ ಸುಲಭ. ಅಲ್ಲಿ 100– 150 ಮೀಟರ್‌ ಪೈಪ್‌ಲೈನ್‌ ಅಳವಡಿಸಿದರೆ ನೂರಾರು ಮನೆಗಳಿಗೆ ಸಂಪರ್ಕ ನೀಡಬಹುದು. ಆದರೆ, ದಾವಣಗೆರೆಯಲ್ಲಿ ಒಂಟಿ ಮನೆಗಳೇ ಹೆಚ್ಚು. 100 ಮೀಟರ್‌ ಪೈಪ್‌ಲೈನ್‌ಗೆ 4ರಿಂದ 5 ಮನೆಗಳಿಗಷ್ಟೇ ಸಂಪರ್ಕ ನೀಡಲು ಸಾಧ್ಯ. ಈ ಕಾರಣದಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ’ ಎಂದು ವಿವರಿಸಿದರು.

‘ಗ್ಯಾಸ್‌ ಸಂಪರ್ಕ ಪಡೆಯಲು ಪ್ರತಿ ಮನೆಗೆ ₹ 6,000 ಠೇವಣಿ ಇರಿಸಬೇಕು. ಇದನ್ನು ಒಮ್ಮೆಲೆ ಕಟ್ಟಬೇಕು ಎನ್ನುವ ನಿಯಮವಿಲ್ಲ. ಎರಡು ತಿಂಗಳಿಗೊಮ್ಮೆ ಬರುವ ಗ್ಯಾಸ್‌ ಬಿಲ್‌ನೊಂದಿಗೆ ₹ 500ರಂತೆ ಪಾವತಿಸಬಹುದು. ಈ ಬಗ್ಗೆ ನೋಂದಣಿ ಮಾಡಿಸುವಾಗಲೇ ಗ್ರಾಹಕರಿಗೆ ತಿಳಿಸಲಾಗುತ್ತದೆ. ತಮಗೆ ಅನುಕೂಲ ಆಗುವಾಗುವಂತೆ ಗ್ರಾಹಕರು ಆಯ್ಕೆ ಮಾಡಿಕೊಳ್ಳುತ್ತಾರೆ’ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

ಪೈಪ್ಡ್‌ ನ್ಯಾಚುರಲ್‌ ಗ್ಯಾಸ್‌ (ಪಿಎನ್‌ಜಿ) ಮನೆಗಳಿಗೆ ಸಂಪರ್ಕ ನೀಡುವಂಥದ್ದು. ಕಂಪ್ರೆಸ್ಡ್‌ ನ್ಯಾಚುರಲ್‌ ಗ್ಯಾಸ್‌ (ಸಿಎನ್‌ಜಿ) ವಾಹನಗಳಿಗೆ ಗ್ಯಾಸ್‌ ಪೂರೈಕೆ ಮಾಡುವ ಲೈನ್‌ ಆಗಿದೆ. ಸದ್ಯ ದಾವಣಗೆರೆಯ ಮೂರು ಪೆಟ್ರೋಲ್‌ ಬಂಕ್‌ಗಳಿಗೆ ಸಿಎನ್‌ಜಿ ಸಂಪರ್ಕ ನೀಡಲಾಗಿದೆ. ಹಾಗೆಯೇ ಹರಿಹರದಲ್ಲಿ ಎರಡು ಹಾಗೂ ಜಗಳೂರಿನಲ್ಲಿ ಒಂದು ಪೆಟ್ರೋಲ್‌ ಬಂಕ್‌ಗಳಲ್ಲಿ ಸಿಎನ್‌ಜಿ ಸಂಪರ್ಕ ನೀಡಲಾಗಿದೆ.

ದಾವಣಗೆರೆಯ ಎಸ್.ಎಸ್ ಬಡಾವಣೆಯ ಮನೆಗಳಿಗೆ ಗ್ಯಾಸ್‌ ಪೈಪ್‌ಲೈನ್ ಸಂಪರ್ಕ ಅಳವಡಿಸಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಎಸ್.ಎಸ್ ಬಡಾವಣೆಯ ಮನೆಗಳಿಗೆ ಗ್ಯಾಸ್‌ ಪೈಪ್‌ಲೈನ್ ಸಂಪರ್ಕ ಅಳವಡಿಸಿರುವುದು –ಪ್ರಜಾವಾಣಿ ಚಿತ್ರ
ಎಂ.ಗಿರಿಜಮ್ಮ
ಪಾಲಿಕೆ ಆಯುಕ್ತೆ ರೇಣುಕಾ

ಮಿಶ್ರ ಪ್ರತಿಕ್ರಿಯೆ

ಗ್ಯಾಸ್‌ ಪೈಪ್‌ಲೈನ್‌ ಬಳಕೆ ಬಗ್ಗೆ ಎರಡೂ ಬಡಾವಣೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಗ್ಯಾಸ್‌ ಖಾಲಿಯಾದಾಗ ಬುಕ್‌ ಮಾಡುವ ಕೆಲಸ ಇರುವುದಿಲ್ಲ. ಇನ್ನೊಂದು ಸಿಲಿಂಡರ್‌ ಅಳವಡಿಸಲು ಮನೆಯವರನ್ನೇ ಕಾಯಬೇಕಾದ ಅಗತ್ಯ ಇಲ್ಲ. ನಲ್ಲಿ ಚಾಲೂ ಮಾಡಿಕೊಂಡು ಗ್ಯಾಸ್‌ ಬಳಸಬಹುದು. ಅಲ್ಲದೇ ಈ ಗ್ಯಾಸ್‌ ಸುರಕ್ಷತೆಯಿಂದ ಕೂಡಿದೆ’ ಎಂದು ಕೆಲ ಬಳಕೆದಾರರು ಹೇಳಿದರೆ ‘ಸಿಲಿಂಡರ್‌ ಗ್ಯಾಸ್‌ ನೀಡುವಷ್ಟು ಶಾಖ ಈ ಗ್ಯಾಸ್‌ನಿಂದ ಬರುವುದಿಲ್ಲ. ಅಡುಗೆ ಕೊಂಚ ನಿಧಾನವಾಗುತ್ತದೆ’ ಎಂಬ ಅಭಿಪ್ರಾಯ ಇನ್ನು ಕೆಲವರದ್ದು. ಗ್ಯಾಸ್‌ ಸಂಪರ್ಕ ಪಡೆಯಲು ಪ್ರತಿ ಮನೆಗೆ ₹ 6000 ಠೇವಣಿ ಇಡಬೇಕು. ಈ ಕಾರಣದಿಂದಲೂ ಮೂರ್ನಾಲ್ಕು ಮನೆಗಳಿರುವ ಮಾಲೀಕರು ಪೈಪ್‌ಲೈನ್‌ನ ಸಂಪರ್ಕ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಇವರು ಏನಂತಾರೆ?

ಕೇಂದ್ರ ಸರ್ಕಾರದ ಯೋಜನೆಯಂತೆ ನಗರದಲ್ಲಿ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿದೆ. ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ಕಂಪನಿಯಿಂದ ಪ್ರಸ್ತಾವ ಬರುತ್ತದೆ. ಪಾಲಿಕೆ ಎಂಜಿನಿಯರ್‌ ಪರಿಶೀಲನೆ ಮಾಡಿ ಅನುಮತಿ ನೀಡುತ್ತಾರೆ. – ರೇಣುಕಾ ಪಾಲಿಕೆ ಆಯುಕ್ತೆ ನಾಲ್ಕು ತಿಂಗಳಿಂದ ಪೈಪ್‌ಲೈನ್‌ ಗ್ಯಾಸ್‌ ಬಳಸುತ್ತಿದ್ದೇವೆ. ಎರಡು ತಿಂಗಳಲ್ಲಿ ಸಿಲಿಂಡರ್‌ ಗ್ಯಾಸ್‌ಗಿಂತಲೂ ಕಡಿಮೆ ಬಿಲ್‌ ಬಂದಿದೆ. ‍ಪ್ರತಿ ತಿಂಗಳು ಗ್ಯಾಸ್‌ ಬುಕ್‌ ಮಾಡುವುದು ಖಾಲಿಯಾದಾಗ ಜೋಡಿಸುವ ಕೆಲಸ ಇಲ್ಲಿಲ್ಲ. ಇದೇ ಉಪಯುಕ್ತ ಎಂದೆನಿಸುತ್ತದೆ. – ನಮಿತಾ ಕೆ.ಎಂ ಎಸ್‌.ಎಸ್‌.ಬಡಾವಣೆ ನಿವಾಸಿ ಅಡುಗೆ ಮನೆಗೆ ಹತ್ತಿರವಾಗುವಂತೆ ಪೈಪ್‌ಲೈನ್‌ ಎಳೆಯಲು ಸಿಬ್ಬಂದಿ ಒಪ್ಪಲಿಲ್ಲ. ಬಲಭಾಗದಲ್ಲಿರುವ ಅಡುಗೆ ಮನೆಗೆ ಎಡಭಾಗದಿಂದ ಪೈಪ್‌ಲೈನ್‌ ಎಳೆಯುತ್ತೇವೆ ಎನ್ನುವರು. ಇಡೀ ಮನೆಯ ಸುತ್ತ ಪೈಪ್‌ ಸುತ್ತುವರಿಯುತ್ತದೆ. ಹಾಗಾಗಿ ಸಂಪರ್ಕ ಪಡೆದುಕೊಳ್ಳಲಿಲ್ಲ. ಅಲ್ಲದೇ ಠೇವಣಿ ದರವೂ ಅಧಿಕವಾಯಿತು. – ಎಂ.ಗಿರಿಜಮ್ಮ ಎಸ್‌.ಎಸ್‌.ಬಡಾವಣೆ ನಿವಾಸಿ ಗ್ಯಾಸ್‌ ಪೈಪ್‌ಲೈನ್‌ ಬಗ್ಗೆ ಜನರಲ್ಲಿ ಅರಿವು ಮೂಡಬೇಕಿದೆ. ಹೊಸ ಯೋಜನೆಯನ್ನು ಅಷ್ಟು ಸುಲಭಕ್ಕೆ ಜನ ಸ್ವೀಕರಿಸುವುದಿಲ್ಲ. ಪಕ್ಕದ ಮನೆಯವರು ಬಳಕೆ ಮಾಡುತ್ತಿದ್ದರೆ ಅವರ ಅಭಿಪ್ರಾಯ ಪಡೆದು ಇನ್ನೊಬ್ಬರು ಸಂಪರ್ಕದ ಬಗ್ಗೆ ಆಲೋಚಿಸುತ್ತಾರೆ. ಈಗೀಗ ಸಂಪರ್ಕ ಪಡೆದುಕೊಳ್ಳಲು ಸಾರ್ವಜನಿಕರು ಮುಂದೆ ಬರುತ್ತಿದ್ದಾರೆ.  – ಸುನಿಲ್‌ ಪೂಜಾರಿ ಯುನಿಸನ್‌ ಎನ್ವಿರೊ ಪ್ರೈವೆಟ್‌ ಲಿಮಿಟೆಡ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ

‘ಸಿಲಿಂಡರ್‌ ಅಡುಗೆ ಅನಿಲ ಬಂದ್‌ ಆಗದು’

ಇಡೀ ನಗರಕ್ಕೆ ಗ್ಯಾಸ್‌ ಪೈಪ್‌ಲೈನ್‌ ಅಳವಡಿಸಿದರೆ ಸಿಲಿಂಡರ್‌ ಅಡುಗೆ ಅನಿಲ (ಎಲ್‌ಪಿಜಿ) ಪೂರೈಸುವ ಏಜೆನ್ಸಿಗಳು ಬಂದ್‌ ಆಗುತ್ತವೆ. ಆಗ ಪೈಪ್‌ಲೈನ್‌ ಅನಿಲವನ್ನೇ (ಪಿಎನ್‌ಜಿ) ಅವಲಂಬಿಸಬೇಕಾಗುತ್ತದೆ ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಆದರೆ ಈ ಮಾತನ್ನು ತಳ್ಳಿ ಹಾಕುತ್ತಾರೆ ಸಿಲಿಂಡರ್‌ ಪೂರೈಸುವ ಏಜೆನ್ಸಿ ಮಾಲೀಕರು. ‘ಒಂದು ಸಿಲಿಂಡರ್‌ ಇರುವವರೆಗೂ ನಮ್ಮ ಏಜೆನ್ಸಿ ಇರುತ್ತವೆ. ಸಿಲಿಂಡರ್‌ ಅಡುಗೆ ಅನಿಲ ಪೂರೈಕೆ ಮಾಡುವ ಐಒಸಿ ಬಿಪಿಸಿ ಎಚ್‌ಪಿಸಿ ಈ ಮೂರೂ ಸರ್ಕಾರದ ಕಂಪನಿಗಳು. ಶುಲ್ಕ ನಿಯಂತ್ರಣವು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ. ಆದರೆ ಪೈಪ್‌ಲೈನ್‌ ಗ್ಯಾಸ್‌ ಖಾಸಗಿ ಕಂಪನಿಯದ್ದು. ಬೆಲೆಯ ಏರಿಳಿತ ಇದ್ದೇ ಇರುತ್ತದೆ. ಅದಲ್ಲದೇ ಗ್ರಾಹಕರಿಗೆ ಇದು ಕಡ್ಡಾಯವಲ್ಲ. ಅವರಿಗೆ ಯಾವ ಸಂಪರ್ಕ ಅನುಕೂಲವೋ ಅದನ್ನು ಪಡೆದುಕೊಳ್ಳಲು ಅವಕಾಶ ಇರುತ್ತದೆ. ನಗರಪ್ರದೇಶದಲ್ಲಿ ಸಿಎನ್‌ಜಿ ಗ್ಯಾಸ್‌ ಸಂಪರ್ಕ ಸುಲಭವೆನಿಸಿದರೂ ಗ್ರಾಮೀಣ ಪ್ರದೇಶದ ಮಟ್ಟಿಗೆ ಈ ಮಾತು ದೂರವೇ ಸರಿ’ ಎಂದು ಹೇಳುವರು ಜ್ಯೋತಿ ಗ್ಯಾಸ್‌ ಏಜೆನ್ಸಿ ಮಾಲೀಕ ಆನಂದಕುಮಾರ್‌ ಅಂದನೂರು.        

‘ಸಿದ್ಧವೀರಪ್ಪ ಬಡಾವಣೆ ಹಾಗೂ ಎಸ್‌.ಎಸ್‌.ಬಡಾವಣೆಯಲ್ಲಿ ಗ್ಯಾಸ್‌ ಪೈಪ್‌ಲೈನ್‌ ಬಂದ ಮೇಲೆ ಎಲ್‌ಪಿಜಿ ಬಳಸುವವರ ಪ್ರಮಾಣ ಶೇ 30ರಷ್ಟು ಕಡಿಮೆಯಾಗಿದೆ. ಇದೇ ರೀತಿ ಬೇರೆ ಬೇರೆ ಏಜೆನ್ಸಿಗಳಿಗೂ ಈ ಪರಿಣಾಮ ಬೀರಿದೆ. ಆದರೆ ಯಾವ ಗ್ರಾಹಕರೂ ನಮ್ಮ ಏಜೆನ್ಸಿಯ ನೋಂದಣಿಯನ್ನು ಹಿಂಪಡೆದಿಲ್ಲ. ಅಡುಗೆಗೆ ಪಿಎನ್‌ಜಿ ಗೀಸರ್‌ಗೆ ಎಲ್‌ಪಿಜಿ ಬಳಕೆ ಮಾಡುತ್ತಿದ್ದಾರೆ. ಆದರೆ ಪಿಎನ್‌ಜಿ ಶಾಶ್ವತವಲ್ಲ. ಗ್ರಾಹಕರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಅವರಿಗೆ ಅನುಕೂಲವಾಗುವ ಸಂಪರ್ಕವನ್ನು ಪಡೆದುಕೊಳ್ಳುತ್ತಾರೆ’ ಎಂದು ಹೇಳಿದರು ಶ್ರೀ ಸಾಯಿ ಗ್ಯಾಸ್‌ ಏಜೆನ್ಸಿ ಮಾಲೀಕ ಹರೀಶ್‌ ಅಂಬರ್‌ಕರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.