ADVERTISEMENT

ರೊಟ್ಟಿ, ಮುದ್ದೆ ಸಂಗಮ ದಾವಣಗೆರೆ – ಪಿ.ಜಿ.ಆರ್‌.ಸಿಂಧ್ಯಾ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2018, 19:45 IST
Last Updated 5 ಅಕ್ಟೋಬರ್ 2018, 19:45 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ದಾವಣಗೆರೆ: ಉತ್ತರ–ದಕ್ಷಿಣ ಕರ್ನಾಟಕದ ಸಂಗಮವಾದ ದಾವಣಗೆರೆಯಲ್ಲಿ ರೊಟ್ಟಿ ತಿನ್ನುವವರು, ಮುದ್ದೆ ಉಣ್ಣುವವರೂ ಇದ್ದಾರೆ. ಮೆಣಸಿನಕಾಯಿ, ಅಕ್ಕಿ ಸವಿಯುವವರೂ ನೆಲೆ ಕಂಡುಕೊಂಡಿದ್ದಾರೆ. ಸಂಸ್ಕೃತಿಗಳ ಸಮ್ಮಿಲನವಾಗಿರುವ ಈ ಜಿಲ್ಲೆಗೆ ವಿಶೇಷ ಸೊಗಡು ಇದೆ ಎಂದು ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯ ಆಯುಕ್ತ ಪಿ.ಜಿ.ಆರ್‌. ಸಿಂಧ್ಯಾ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ‘ದಾವಣಗೆರೆ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ’ ಕುರಿತು ಹಮ್ಮಿಕೊಂಡಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ದಾವಣಗೆರೆಯ ಒಂದೊಂದು ತಾಲ್ಲೂಕುಗಳಿಗೂ ಒಂದೊಂದು ವಿಶಿಷ್ಟ ಶಕ್ತಿ ಇದೆ. ಸಾಂಸ್ಕೃತಿಕ ಲಕ್ಷಣ ಇದೆ. ಜೆ.ಎಚ್‌. ಪಟೇಲ್‌ ಅವರ ದೂರದೃಷ್ಟಿಯಿಂದ ಹುಟ್ಟಿಕೊಂಡ ದಾವಣಗೆರೆಯ ಜಿಲ್ಲೆಯ ರಾಜಕೀಯ ಇತಿಹಾಸ ಈಚಿನದು. ಆದರೆ, ಈ ಪ್ರದೇಶಕ್ಕೆ ಸಾವಿರಾರು ವರ್ಷಗಳ ಪರಂಪರೆ ಇದೆ. ಆದರೆ, ಈ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಬೇಕು ಎಂದರು.

ADVERTISEMENT

ಬಳ್ಳಾರಿಯಲ್ಲಿ ಬ್ರಿಟಿಷರು ಏಕೆ ವಿಮಾನ ನಿಲ್ದಾಣ ಕಟ್ಟಿದ್ದರು ಎಂದು ಇತಿಹಾಸ ಕೆದಕಿದಾಗ ಅಲ್ಲಿನ ದರ್ಜಿಗಳ ಕೌಶಲದ ಮಹತ್ವ ಗೊತ್ತಾಯಿತು. ಆಗ ಅಲ್ಲಿ ಗಾರ್ಮೆಂಟ್ಸ್‌ ಕ್ಲಸ್ಟರ್‌ ಆರಂಭಿಸಿದೆವು. ಈಗ ಬಳ್ಳಾರಿಯ ಉತ್ಕೃಷ್ಟ ಗುಣಮಟ್ಟದ ಜೀನ್ಸ್‌ ಬಟ್ಟೆ ವಿಶ್ವದ ಎಲ್ಲೆಡೆಗೆ ರಫ್ತಾಗುತ್ತಿದೆ. ಹಾಗೆಯೇ ದಾವಣಗೆರೆಯ ಹತ್ತಿ ಬಟ್ಟೆಗೂ ಒಳ್ಳೆಯ ಹೆಸರಿತ್ತು. ಈಗ ಕಾರ್ಖಾನೆಗಳು ಇಲ್ಲವಾಗಿವೆ. ಮತ್ತೆ ಕೈಗಾರಿಕೆಯನ್ನು ಹೇಗೆ ಸ್ಥಾಪಿಸಿ, ಬೆಳೆಸಬಹುದು ಎಂಬುದಕ್ಕೆ ಇತಿಹಾಸ ಉತ್ತರ ನೀಡುತ್ತದೆ. ಇಂಥ ದೃಷ್ಟಿ ಇತಿಹಾಸಕಾರನಿಗೆ ಇರಬೇಕಿದೆ ಎಂದು ತಿಳಿಸಿದರು.

ಸಂಸ್ಕೃತಿಗಳ ಕೊಂಡಿ:

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಸ್‌.ಎ. ರವೀಂದ್ರನಾಥ್‌ ಮಾತನಾಡಿ, ‘ಕೃಷಿ ಹಿನ್ನೆಲೆಯಲ್ಲೂ ದಾವಣಗೆರೆಗೆ ದೊಡ್ಡ ಪರಂಪರೆ ಇದೆ. ಹಳೇ ಮೈಸೂರು ಮತ್ತು ಉತ್ತರ ಕರ್ನಾಟಕ ಭಾಗದ ರೈತರು ಜಾನುವಾರು ಕೊಂಡೊಯ್ಯುವಾಗ ದಾವಣಗೆರೆಯಲ್ಲಿ ತಂಗುತ್ತಿದ್ದರಂತೆ. ಜಾನುವಾರಿಗೆ ಉತ್ತಮ ಮಾರುಕಟ್ಟೆಯೂ ಆಗಿತ್ತು. ಈಗ ದಾವಣಗೆರೆ ಸುಸಂಸ್ಕೃತ ನಗರವಾಗಿ ಬೆಳೆಯುತ್ತಿದೆ. ಶೈಕ್ಷಣಿಕ ನಗರಿಯಾಗಿಯೂ ಹೆಸರು ಪಡೆಯುತ್ತಿದೆ. ಇಲ್ಲಿ ಓದಿದ ವೈದ್ಯರು ವಿಶ್ವದ ಮೂಲೆ ಮೂಲೆಯಲ್ಲೂ ಸಿಗುತ್ತಾರೆ’ ಎಂದರು.

ಇತಿಹಾಸ ತಿರುಚಬಾರದು. ಸಂಶೋಧಕರು ಒಳ್ಳೆಯದಕ್ಕಿಂತ ಕೆಟ್ಟ ವಿಚಾರಗಳಿಗೆ ಆದ್ಯತೆ ನೀಡಬಾರದು. ವಿಚಾರ ಮಂಥನ ಮಾಡಿ, ಸತ್ಯವನ್ನೇ ಬರೆಯಬೇಕು ಎಂದು ಸಲಹೆ ನೀಡಿದರು.

ಪತ್ರಗಾರ ಇಲಾಖೆಯಲ್ಲಿ 1799ರಿಂದ ಇಲ್ಲಿಯವರೆಗಿನ ದಾಖಲೆಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಲಾಗಿದೆ. ಹಾಗೆಯೇ ಎಲ್ಲಾ ದಾಖಲೆಗಳ ಡಿಜಿಟಲೀಕರಣವನ್ನೂ ಮಾಡಲಾಗಿದೆ. ಇತಿಹಾಸ ಸಂಶೋಧಕರು ಇವುಗಳನ್ನು ಬಳಸಿಕೊಂಡು ಅಧ್ಯಯನ ಮಾಡಬಹುದು ಎಂದು ಇಲಾಖೆಯ ನಿರ್ದೇಶಕಿ ಡಾ. ಎಸ್. ಅಂಬುಜಾಕ್ಷಿ ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ ವಿ. ಶರಣಪ್ಪ ಹಲಸೆ, ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಕೆ. ಪ್ರಸಾದ್‌, ದಾವಣಗೆರೆ ವಿಶ್ವವಿದ್ಯಾಲಯದ ಇತಿಹಾಸ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಬಿ.ಪಿ. ಕುಮಾರ್‌ ಮಾತನಾಡಿದರು.

‍ಪ್ರಾಂಶುಪಾಲ ಡಾ. ದಾದಾಪೀರ್‌ ನವಿಲೇಹಾಳ್ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥೆ ಡಾ. ಎನ್‌. ಶಕುಂತಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ತೊಪ್ಪಲು ಕೆ. ಮಲ್ಲಿಕಾರ್ಜುನಗೌಡ ನಿರೂಪಿಸಿದರು.

* * *

‘ಬರವಣಿಗೆ ಬಳಸಿದ್ದೇ ಅಶೋಕ’

ನಿತ್ಯ ಜೀವನದಲ್ಲಿ ಬರವಣಿಗೆ ಆರಂಭಿಸಿದ್ದು ಅಶೋಕ ಚಕ್ರವರ್ತಿ. ಹೀಗಾಗಿ, ಅಶೋಕನ ನಂತರದ ಭಾರತದ ಇತಿಹಾಸಕ್ಕೆ ಲಿಖಿತ ದಾಖಲೆಗಳು ಸಿಗುತ್ತವೆ. ಬರವಣಿಗೆ ಬಳಕೆಯಿಂದ ದೇಶದಲ್ಲಿ ಗಣಿತ ಬೆಳೆಯಿತು. ಗಣಿತದಿಂದ ವಿಜ್ಞಾನ, ಖಗೋಳವಿಜ್ಞಾನ ರೂಪುಗೊಂಡವು. ನಾಗರಿಕತೆಯೂ ವಿಕಾಸವಾಯಿತು ಎಂದು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ದೇವರಕೊಂಡಾ ರೆಡ್ಡಿ ಹೇಳಿದರು.

ಅಶೋಕನ ಹೆಸರು ಇರುವ ಶಾಸನ ಸಿಕ್ಕಿರುವುದೂ ಚಿತ್ರದುರ್ಗ ಜಿಲ್ಲೆಯಲ್ಲೇ. ದಾವಣಗೆರೆ ಈ ಮೊದಲು ಇದ್ದದ್ದು ಚಿತ್ರದುರ್ಗ ವ್ಯಾಪ್ತಿಯಲ್ಲೇ. ಹೀಗಾಗಿ, ದಾವಣಗೆರೆಯ ಪ್ರಾಗಿತಿಹಾಸ ಹಲವು ದಿಕ್ಕುಗಳಿಂದ ಪ್ರಮುಖವಾದದ್ದು. ಹೀಗಾಗಿ, ಇಲ್ಲಿನ ಇತಿಹಾಸ ಅಧ್ಯಯನಕ್ಕೆ ಅತ್ಯಂತ ಯೋಗ್ಯ ಎಂದರು.

* * *

ಪಟೇಲರ ನೆನೆದ ಸಿಂಧ್ಯಾ

‘ಜೆ.ಎಚ್‌. ಪಟೇಲರಂಥ ಹಾಸ್ಯಪ್ರಜ್ಞೆಯ ರಾಜಕಾರಣಿಯನ್ನು ನಾನು ನೋಡಿಲ್ಲ’ ಎಂದ ಪಿ.ಜಿ.ಆರ್‌. ಸಿಂಧ್ಯಾ, ಅವರೊಟ್ಟಿಗಿನ ಒಡನಾಟದ ನೆನಪುಗಳನ್ನು ಮೆಲುಕು ಹಾಕಿದರು.

‘ಆರೋಗ್ಯ ಹದಗೆಟ್ಟು ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದ ಪಟೇಲರನ್ನು ನೋಡಲು ನಾನು, ಶಂಕರ್‌ನಾಗ್‌ ಹೋಗಿದ್ದೆವು. ಆಗ ಕಾಗದ ತುಂಡು ತೆಗೆದುಕೊಂಡ ಪಟೇಲರು, ಇಲ್ಲಿ ನನ್ನ ಆಟ ಮುಗಿಯಿತು. ಅಲ್ಲಿ ಆಟ ಶುರುವಾಯಿತು. ನೀನು ತಕ್ಷಣ ಬರಬೇಡ ಎಂದು ಶಂಕರ್‌ನಾಗ್‌ಗೆ ಬರೆದುಕೊಟ್ಟಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.