ADVERTISEMENT

ಅನುದಾನ ಬಳಕೆ; ಜನಪ್ರತಿನಿಧಿಗಳ ನಿರಾಸಕ್ತಿ

ಬಸವರಾಜ ಹವಾಲ್ದಾರ
Published 5 ಸೆಪ್ಟೆಂಬರ್ 2017, 5:06 IST
Last Updated 5 ಸೆಪ್ಟೆಂಬರ್ 2017, 5:06 IST
ಹುಬ್ಬಳ್ಳಿಯ ಲಿಂಗರಾಜನಗರದ ಉದ್ಯಾನದಲ್ಲಿ ಶಾಸಕರ ಅನುದಾನದಲ್ಲಿ ಪೇವರ್ಸ್‌ಗಳನ್ನು ಅಳವಡಿಸಿರುವುದು
ಹುಬ್ಬಳ್ಳಿಯ ಲಿಂಗರಾಜನಗರದ ಉದ್ಯಾನದಲ್ಲಿ ಶಾಸಕರ ಅನುದಾನದಲ್ಲಿ ಪೇವರ್ಸ್‌ಗಳನ್ನು ಅಳವಡಿಸಿರುವುದು   

ಹುಬ್ಬಳ್ಳಿ: ನಿಗದಿಪಡಿಸಿದಷ್ಟು ಅನುದಾನ ಬಿಡುಗಡೆಯಾಗಿಲ್ಲ. ಬಿಡುಗಡೆಯಾದ ಅನುದಾನವೂ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿಲ್ಲ. ಕೆಲವು ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದರೆ, ಇನ್ನೂ ಕೆಲವು ಕಾಮಗಾರಿಗಳು ಆರಂಭವಾಗಿಯೇ ಇಲ್ಲ. ಕೆಲವು ಕಾಮಗಾರಿಗಳಿಗೆ ಅನುಮತಿ ದೊರೆತು ನಾಲ್ಕು ವರ್ಷ ಕಳೆದಿದ್ದರೂ ಯೋಜನೆಗಳಿಗೆ ಅಂದಾಜು ಪತ್ರಿಕೆಯೇ ಸಲ್ಲಿಕೆಯಾಗಿಲ್ಲ.

ಇದು 2013ರಿಂದ 2018ರ ವರೆಗೆ ಶಾಸಕರಾಗಿ ಆಯ್ಕೆಯಾಗಿರುವ ಧಾರ ವಾಡ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಿಡುಗಡೆಯಾದ ಅನುದಾನ ಬಳಕೆಯ ಸ್ಥಿತಿ.

ಇಲ್ಲಿಯವರೆಗೆ ನಾಲ್ಕು ವರ್ಷಗಳ ಅನುದಾನ ಬಿಡುಗಡೆಯಾಗಿದೆ. ಈ ಅವಧಿಯ ಕೊನೆ ವರ್ಷದ ಅನುದಾನ ಇನ್ನಷ್ಟೇ ಬಿಡುಗಡೆಯಾಗಬೇಕಾಗಿದೆ. ನಾಲ್ಕು ವರ್ಷಗಳಲ್ಲಿ ಬಿಡುಗಡೆಯಾದ ಅನುದಾನವನ್ನು ಯಾವ ಶಾಸಕರೂ ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡಿಲ್ಲ. ಕೋಟಿಗೂ ಹೆಚ್ಚು ಮೊತ್ತಕ್ಕೆ ಮಂಜೂರಾತಿ ಪತ್ರವನ್ನೇ ನೀಡಿಲ್ಲ.

ADVERTISEMENT

ನಾಲ್ಕು ವರ್ಷಗಳ ಅನುದಾನದಲ್ಲಿ ಯಾವುದೇ ವರ್ಷದ ಅನುದಾನವೂ ಪೂರ್ಣ ಪ್ರಮಾಣದಲ್ಲಿ ಖರ್ಚಾಗಿಲ್ಲ. ಎಲ್ಲ ವರ್ಷಗಳಲ್ಲಿ ಕಾಮಗಾರಿಗಳೂ ಬಾಕಿ ಉಳಿದಿವೆ. ಕಳೆದ ಎರಡು ವರ್ಷಗಳಲ್ಲಿ ಮಂಜೂರಾತಿ ನೀಡಿರುವ ಬಹುತೇಕ ಕಾಮಗಾರಿಗಳು ಇನ್ನೂ ಆರಂಭವಾಗಿಯೇ ಇಲ್ಲ.

2013–14ನೇ ಸಾಲಿನಲ್ಲಿ ಬಿಡುಗಡೆ ಮಾಡಿದ ಅನುದಾನವನ್ನು ಜಿಲ್ಲೆಯ ಯಾವ ಶಾಸಕರೂ ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡಿಲ್ಲ. ಎಲ್ಲ ವರ್ಷಗಳ ಅನುದಾನ ಬಳಕೆಯೂ ಹೀಗೆಯೇ ಇದೆ ಎನ್ನುವುದು ಅಂಕಿ–ಅಂಶ ನೋಡಿದಾಗ ಗೊತ್ತಾಗುತ್ತದೆ.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಪ್ರತಿ ವರ್ಷ ₹ 2 ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಇಲ್ಲಿಯವರೆಗೆ ₹ 8 ಕೋಟಿ ಬಿಡುಗಡೆಯಾಗಿದೆ. ವಿಧಾನಸಭಾ ಕ್ಷೇತ್ರದಿಂದ ಕ್ಷೇತ್ರಕ್ಕೆ ಅನುದಾನ ಬಳಕೆಯಲ್ಲಿ ವ್ಯತ್ಯಾಸವಿದೆ. ಕೆಲವರು ಶೇ 70ಕ್ಕೂ ಹೆಚ್ಚು ಬಳಕೆ ಮಾಡಿಕೊಂಡಿದ್ದರೆ, ಇನ್ನು ಕೆಲವರು ಅದಕ್ಕಿಂತ ಕಡಿಮೆ ಬಳಕೆ ಮಾಡಿದ್ದಾರೆ.

ಅಂದಾಜು ಪತ್ರಿಕೆಯೇ ಸಲ್ಲಿಕೆಯಾಗಿಲ್ಲ: 2013–14ನೇ ಸಾಲಿನಲ್ಲಿ ಕೆಲ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಶಾಸಕರು ಸಂಬಂಧಿಸಿದ ಇಲಾಖೆಗೆ ಪತ್ರ ನೀಡಿದ್ದಾರೆ. ಪತ್ರ ನೀಡಿ ನಾಲ್ಕು ವರ್ಷಗಳು ಕಳೆದಿದ್ದರೂ ಇಲ್ಲಿಯವರೆಗೆ ಅಂದಾಜು ಪತ್ರಿಕೆಯನ್ನೇ ಸಲ್ಲಿಸಿಲ್ಲ.

ಅಪೂರ್ಣವಾಗಿರುವ ಕಾಮಗಾರಿಗಳು: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಪೈಕಿ ಅರ್ಧದಷ್ಟು ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. ಸಾಕಷ್ಟು ಕಾಮಗಾರಿಗಳಲ್ಲಿ ಶಾಸಕರು ಮಂಜೂರು ಮಾಡಿರುವ ಅನುದಾನ ಪೂರ್ಣಪ್ರಮಾಣದಲ್ಲಿ ಬಳಕೆಯಾಗಿದೆ.

ಆದರೆ, ಕಾಮಗಾರಿ ಪೂರ್ಣಗೊಂಡಿಲ್ಲ. ₹ 10 ಲಕ್ಷ ಮೊತ್ತದ ಕಾಮಗಾರಿ ಶಾಸಕರು ಹಿಂಬಾಲರಕ ಒತ್ತಡಕ್ಕೆ ಮಣಿಸು ₹ 3 ರಿಂದ 4 ಲಕ್ಷ ಬಿಡುಗಡೆ ಮಾಡುತ್ತಾರೆ. ಅಷ್ಟು ಮಾತ್ರ ಕಾಮಗಾರಿ ಪೂರ್ಣಗೊಳ್ಳುತ್ತದೆ. ಉಳಿದ ಅನುದಾನಕ್ಕಾಗಿ ಮತ್ತೆ ಮುಂದಿನ ವರ್ಷದವರೆಗೆ ಕಾಯಬೇಕು.

ವಿಧಾನಸಭಾ ಸದಸ್ಯರ ಅಧಿಕಾರಾವಧಿ ಪೂರ್ಣ ಗೊಳ್ಳಲು ಎಂಟು ತಿಂಗಳು ಬಾಕಿ ಇದೆ. ಹೀಗಾಗಿ ಅವರ ನಾಲ್ಕು ವರ್ಷ ನಾಲ್ಕು ತಿಂಗಳ ಅಧಿಕಾರಾವಧಿಯಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಿಡುಗಡೆ ಯಾದ ಅನುದಾನ ಎಷ್ಟು? ಅದನ್ನು ಯಾವ ರೀತಿ ಬಳಕೆ ಮಾಡಿದ್ದಾರೆ ಎಂಬುದರ ಕುರಿತು ಬೆಳಕು ಚೆಲ್ಲುವ ಸರಣಿ ಲೇಖನ ಇಂದಿನಿಂದ ಆರಂಭವಾಗುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.