ADVERTISEMENT

ಇವರು ಶ್ರೀರಾಮನಗರದ ಕುಂತಿ ಪುತ್ರರು...

ಮಾಜಿ ಮೇಯರ್ ಶಿವು ಹಿರೇಮಠ ಪ್ರತಿನಿಧಿಸುವ 17ನೇ ವಾರ್ಡ್‌; 42 ಬಡಾವಣೆ, 22 ಕಾರ್ಮಿಕರು!

ಮನೋಜ ಕುಮಾರ್ ಗುದ್ದಿ
Published 12 ಜನವರಿ 2017, 9:26 IST
Last Updated 12 ಜನವರಿ 2017, 9:26 IST
ಹುಬ್ಬಳ್ಳಿ: ಧಾರವಾಡದ ಸ್ಟೇಷನ್‌ ರಸ್ತೆಯಿಂದ ಟೈವಾಕ್‌ ಕಡೆ ಹೋಗುವ ರಸ್ತೆಯಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಭಾರಿ ಮನೆಗಳು, ಸುಂದರ ಪರಿಸರ ಕಣ್ಣಿಗೆ ರಾಚುತ್ತದೆ. ಅಲ್ಲಿಂದ ಎಡಕ್ಕೆ ತೆರಳಿ ಇಳಿಜಾರಿನಲ್ಲಿ ಇಳಿದು ನೋಡಿದರೆ ಇಂದಿಗೂ ಕೊಳೆಗೇರಿಯಂತೆಯೇ ಉಳಿ­­ದಿ­ರುವ ಶ್ರೀರಾಮನಗರ ಕಾಣಿಸುತ್ತದೆ.
 
‘ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ’ ಎಂಬುದು ಮಹಾಭಾರತ ಮಹಾಕಾವ್ಯದಿಂದ ಹೊರಹೊಮ್ಮಿದ ಗಾದೆ ಮಾತು. 
 
ಕೌರವರು ಸಂಚು ನಡೆಸಿ ಪಾಂಡವ­ರನ್ನು ವನವಾಸಕ್ಕೆ ಕಳಿಸುವ ಸನ್ನಿವೇಶದಿಂದ ಈ ಮಾತು ಚಾಲ್ತಿಗೆ ಬಂದಿರುವುದು ಎಲ್ಲರಿಗೂ ತಿಳಿದ ಸಂಗತಿ. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಹೆಸರನ್ನು ಇರಿಸಿಕೊಂಡ ಈ ಬಡಾವಣೆಯ ಜನರೂ ಒಂದರ್ಥದಲ್ಲಿ ಕುಂತಿ ಪುತ್ರರೇ! ಪಾಂಡವರಿಗೆ ರಾಜ್ಯ ಸಿಗಲಿಲ್ಲ. ಶ್ರೀರಾಮನಗರದ ನಾಗರಿಕರಿಗೆ ಮಹಾನಗರ ಪಾಲಿಕೆ­ಯಿಂದ ಮೂಲಸೌಕರ್ಯಗಳು ಸಿಕ್ಕಿಲ್ಲ. 
 
ಬೆಟ್ಟದ ಅಡಿಯಲ್ಲಿ ಪುಟ್ಟ ಹೆಂಚಿನ ಮನೆಗಳು ಒತ್ತೊತ್ತಾಗಿ ಇರುವ ಈ ಬಡಾವಣೆಯಲ್ಲಿ ಇಂದಿಗೂ ಸುವ್ಯವಸ್ಥಿತ ರಸ್ತೆಗಳಿಲ್ಲ. ಒಳಚರಂಡಿ ವ್ಯವಸ್ಥೆ ಹೋಗಲಿ, ಸರಿಯಾದ ಚರಂಡಿಗಳೂ ಇಲ್ಲ. ಹೀಗಾಗಿ, ದೀಪದ ಬುಡದಲ್ಲಿ ಕತ್ತಲೆ ಎಂಬಂತೆ ಪಕ್ಕದಲ್ಲೇ ಕಲ್ಯಾಣ ನಗರದಂತಹ ಮುಂದುವರಿದ ಬಡಾವಣೆ ಇದ್ದರೂ, ಶ್ರೀರಾಮನಗರದ ನಿವಾಸಿಗಳು ಇಂದಿಗೂ ಮೂಲ­ಸೌಕರ್ಯ ಬೇಕೆಂದು ಕೇಳಬೇಕಿದೆ. ಸ್ವಚ್ಛತೆ ಕೆಲಸವೂ ಅಷ್ಟಕ್ಕಷ್ಟೇ ನಡೆಯುತ್ತಿದೆ ಎಂಬುದು ಇಲ್ಲಿನ ನಿವಾಸಿಗಳ ಆರೋಪ.
 
ಮನೆ ಮನೆಗೆ ಬಂದು ಕಸ ಒಯ್ಯುವುದು ದೂರದ ಮಾತು. ಇಲ್ಲಿ ಬಂದು ರಸ್ತೆಯ ಕಸವನ್ನೂ ಸ್ವಚ್ಛಗೊಳಿಸುವುದೂ ಇಲ್ಲ. ನಾವು ಪಾಲಿಕೆಗೆ ಎಲ್ಲ ರೀತಿಯ ತೆರಿಗೆಯನ್ನೂ ಪಾವತಿಸಿದ್ದೇವೆ. ಅಕ್ರಮ ಸಕ್ರಮ ಇದ್ದ ಬಡಾವಣೆ ಪಾಲಿಕೆಗೂ ಹಸ್ತಾಂತರ­ವಾಗಿದೆ. ಆದರೂ, ಸ್ವಚ್ಛ ರಸ್ತೆ, ಸ್ವಚ್ಛ ಚರಂಡಿ, ಉತ್ತಮ ರಸ್ತೆಗಾಗಿ ನಾವಿನ್ನೂ ಕಾಯಬೇಕಿದೆ ಎನ್ನುತ್ತಾರೆ ಇಲ್ಲಿನ ನಿವಾಸಿ ಆದಮ್‌.
 
‘ಹೆಸರಿಗೆ ಬಸ್ ನಿಲ್ದಾಣವಿದೆ. ಆದರೆ, ಬಸ್‌ ತಂಗುದಾಣವೇ ಇಲ್ಲ. ಮುಖ್ಯ ರಸ್ತೆಗೂ ಸರಿಯಾಗಿ ಡಾಂಬರ್ ಹಾಕಿಲ್ಲ. ರಸ್ತೆ ದುರಸ್ತಿ ಮಾಡಿ ಎಷ್ಟೋ ಕಾಲವಾಯಿತು’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
 
ಬಸ್‌ ನಿಲ್ಲುವ ರಸ್ತೆಯಿಂದ ಕೆಳಕ್ಕಿ­ಳಿದು ಎಡಕ್ಕೆ ತಿರುಗಿದರೆ ಇಕ್ಕಟ್ಟಾದ ರಸ್ತೆಯ ಪಕ್ಕದಲ್ಲೇ ಭಾರಿ ದೊಡ್ಡ ಚರಂಡಿ ಇದೆ. ಇದರಲ್ಲಿನ ಹೂಳನ್ನು ಕಾಲಕಾಲಕ್ಕೆ ಎತ್ತದೇ ಇರುವುದರಿಂದ ಚರಂಡಿ ನೀರು ನಿಂತಲ್ಲೇ ನಿಂತು ರೋಗ ತರಿಸುವ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ ಎಂದು ಇಲ್ಲಿನ ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಾರೆ. 
 
***
‘ಬಡಾವಣೆ ಜಾಸ್ತಿ, ಸಿಬ್ಬಂದಿ ಕಡಿಮೆ’
ನನ್ನ ವಾರ್ಡ್‌ನಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಇರುವ ಪಾವಟೆ ನಗರ, ಕಲ್ಯಾಣ ನಗರ, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರ ಮನೆ ಇರುವ ಬಾರಾಕೊಟ್ರಿ, ಶಿವಗಿರಿ, ಶ್ರೀನಗರ, ಹೊಯ್ಸಳ ನಗರ, ಶ್ರೀರಾಮನಗರ, ಹನುಮಂತನಗರ ಸೇರಿದಂತೆ 42 ಬಡಾವಣೆಗಳು ಬರುತ್ತವೆ. ಇಲ್ಲಿ ಅಂದಾಜು 35 ಸಾವಿರ ಜನಸಂಖ್ಯೆ ಇದೆ. ಆದರೆ, ಪೌರಕಾರ್ಮಿಕರ ಸಂಖ್ಯೆ ಮಾತ್ರ ಕೇವಲ 22 ಇದೆ. ಇಷ್ಟು ಜನರಿಂದ ಬಡಾವಣೆ ಸ್ವಚ್ಛತೆ ಹೇಗೆ ಸಾಧ್ಯ ಎನ್ನುತ್ತಾರೆ 17ನೇ ವಾರ್ಡ್‌ ಸದಸ್ಯ, ಮಾಜಿ ಮೇಯರ್‌ ಶಿವು ಹಿರೇಮಠ.
 
1986ರಲ್ಲಿ 32 ಕಾರ್ಮಿಕರು ನೇಮಕವಾಗಿದ್ದರು. ಆಗ ಬಡಾವಣೆಗಳ ಸಂಖ್ಯೆಯೂ ಕಡಿಮೆ ಇತ್ತು. ಕಾಯಂ ಪೌರಕಾರ್ಮಿಕರಿರುವ ಈ ವಾರ್ಡ್‌ನಲ್ಲಿ ಹಲವು ಜನ ನಿವೃತ್ತಿಯಾದ ಬಳಿಕ 22 ಜನ ಮಾತ್ರ ಇದ್ದಾರೆ. ಅವರಲ್ಲಿ ಬಹುತೇಕರಿಗೆ ವಯಸ್ಸಾಗಿರುವುದರಿಂದ ಹೆಚ್ಚು ಕೆಲಸ ನಿರೀಕ್ಷಿಸಲಾಗುವುದಿಲ್ಲ. ಈಗಿನ ಜನಸಂಖ್ಯೆಗೆ ಕನಿಷ್ಠ ಎಂದರೂ 80 ಕಾರ್ಮಿಕರು ಬೇಕು. ಹೆಚ್ಚುವರಿ ಸಿಬ್ಬಂದಿ ಕೊಡುವಂತೆ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದೇನೆ. ಆದರೂ, ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಇದರ ಹೊರತಾಗಿ ಜಯನಗರ ಕೆರೆ ಸುತ್ತ ಉದ್ಯಾನ, ನವೋದಯ ನಗರದ ಉದ್ಯಾನಗಳನ್ನು ಲಭ್ಯ ಅನುದಾನದಲ್ಲಿ ಅಭಿವೃದ್ಧಿಪಡಿಸಿದ್ದೇನೆ. ಜನಸಂಪರ್ಕ ಕಚೇರಿ ತೆರೆದು ಬಡಾವಣೆ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ ಎಂದರು.
 
ನಮ್ಮದು ಮೂಲತಃ ಗೋವಾ. ಇಲ್ಲಿಗೆ ಬಂದು ಮೂರು ತಿಂಗಳಾಯಿತು. ಒಮ್ಮೆಯೂ ಕಸ ಸಂಗ್ರಹಿಸಲು ಪಾಲಿಕೆ ಸಿಬ್ಬಂದಿ ಬಂದಿಲ್ಲ. ಇಲ್ಲಿನ ಚರಂಡಿಯನ್ನೂ ಸ್ವಚ್ಛಗೊಳಿಸಿಲ್ಲ.
-ಮಾರಿಯಾ ಮೆನೇಜಸ್‌
ಶ್ರೀರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.