ADVERTISEMENT

ಒಲಿಂಪಿಕ್ಸ್‌: ಸೈಕ್ಲಿಂಗ್‌ನಲ್ಲಿ ಕ್ರೈಟೀರಿಯಂ ಮಾತ್ರ

ಫೆಬ್ರುವರಿ 4, 5ರಂದು ಸ್ಪರ್ಧೆ; ಪುರುಷರಿಗೆ 60 ಕಿಮೀ, ಮಹಿಳೆಯರಿಗೆ 40 ಕಿಮೀ ರೇಸ್‌

ವಿಕ್ರಂ ಕಾಂತಿಕೆರೆ
Published 10 ಜನವರಿ 2017, 6:41 IST
Last Updated 10 ಜನವರಿ 2017, 6:41 IST
ಹುಬ್ಬಳ್ಳಿ: ಮುಂದಿನ ತಿಂಗಳು ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ನಡೆಯ­ಲಿರುವ ರಾಜ್ಯ ಒಲಿಂಪಿಕ್ಸ್‌ನ ಒಟ್ಟು 25 ಸ್ಪರ್ಧೆಗಳಲ್ಲಿ ಸೈಕ್ಲಿಂಗ್ ಕೂಡ ಒಂದು. ಆದರೆ ಸೈಕ್ಲಿಂಗ್‌ನ ಎಲ್ಲ ಪ್ರಕಾರಗಳನ್ನು ನೋಡಲು ಅವಳಿ ನಗರದ ಕ್ರೀಡಾ­ಪ್ರಿಯರಿಗೆ ಈ ಸಂದರ್ಭದಲ್ಲಿ ಅವಕಾಶ ಇಲ್ಲ. ರೋಡ್ ರೇಸ್‌ನ ಒಂದು ಅಂಗ­ವಾದ ಕ್ರೈಟೀರಿಯಂ ಮಾತ್ರ ಒಲಿಂಪಿಕ್ಸ್‌ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
 
ಎಂಟು ವರ್ಷಗಳ ನಂತರ ರಾಜ್ಯ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಯುತ್ತಿದೆ. ಸ್ಪರ್ಧೆಗಳು ಮತ್ತು ಮೈದಾನಗಳನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ. ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ನಡೆದ ಎಲ್ಲ ಕ್ರೀಡಾ ಸಂಸ್ಥೆಗಳ ಕಾರ್ಯ­ದರ್ಶಿಗಳು ಮತ್ತು ಉನ್ನತ ಅಧಿಕಾರಿಗಳ ಸಭೆಯೊಂದಿಗೆ ಒಲಿಂಪಿಕ್ಸ್‌ ಸಿದ್ಧತೆಗಳಿಗೆ ಅಂತಿಮ ಮೊಹರು ಬಿದ್ದಿದೆ.
 
ಟ್ರ್ಯಾಕ್‌ ರೇಸ್ ಕೈಬಿಟ್ಟರು... ಎಂಟು ವರ್ಷಗಳ ಹಿಂದೆ ಮೈಸೂರಿನಲ್ಲಿ ರಾಜ್ಯ ಒಲಿಂಪಿಕ್ಸ್ ನಡೆದಾಗ ಟ್ರ್ಯಾಕ್ ಸೈಕ್ಲಿಂಗ್ ಆಯೋಜಿಸಲಾಗಿತ್ತು. ಈ ಬಾರಿಯೂ ಅದನ್ನೇ ಹಮ್ಮಿಕೊಳ್ಳಲು ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆ ಆಸಕ್ತಿ ತೋರಿತ್ತು. ರೋಡ್ ಸೈಕ್ಲಿಂಗ್ ಆಯೋಜಿಸಲು ಸಂಸ್ಥೆಗೆ ಆಸಕ್ತಿ ಇರಲಿಲ್ಲ. ಆದರೆ ರಾಜ್ಯ ಒಲಿಂಪಿಕ್ಸ್ ಸಂಸ್ಥೆ ಇವೆರಡಕ್ಕೂ ಅವಕಾಶ ನೀಡದೆ ಕ್ರೈಟೀರಿಯಂ ಕಡೆಗೆ ಒಲವು ತೋರಿಸಿತು. ಇದಕ್ಕೆ ಸೈಕ್ಲಿಂಗ್ ಸಂಸ್ಥೆ ಒಪ್ಪಿಕೊಂಡಿತು. 
 
‘ಸದ್ಯದ ಪರಿಸ್ಥಿತಿಯಲ್ಲಿ ರೋಡ್ ಸೈಕ್ಲಿಂಗ್‌ ನಡೆಸುವುದು ಕಷ್ಟ. ಆದ್ದರಿಂದ ಟ್ರ್ಯಾಕ್‌ ಸ್ಪರ್ಧೆಗಳನ್ನು ಆಯೋಜಿಸಲು ಮುಂದಾಗಿದ್ದೆವು. ಕೊನೆಗೆ ಕ್ರೈಟೀರಿಯಂ ನಡೆಸಲು ಒಪ್ಪಿಗೆ ಲಭಿಸಿದೆ’ ಎಂದು ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಶೈಲ ಕುರಣಿ ‘ಪ್ರಜಾವಾಣಿ’ಗೆ ತಿಳಿಸಿದರು.
 
‘ಸೈಕ್ಲಿಂಗ್ ಕ್ರೀಡೆಯನ್ನು ಜನಪ್ರಿಯ­ಗೊಳಿಸಲು ಕ್ರೈಟೀರಿಯಂ ಸಹಕಾರಿ­ಯಾಗಲಿದೆ. ಆದ್ದರಿಂದ ಒಲಿಂಪಿಕ್ಸ್ ಸಂಸ್ಥೆಯ ನಿರ್ದೇಶನಕ್ಕೆ ನಾವು ಒಪ್ಪಿಕೊಂಡಿದ್ದೇವೆ. ಪುರುಷರಿಗೆ 60 ಕಿಮೀ ಮತ್ತು ಮಹಿಳೆಯರಿಗೆ 40 ಕಿಮೀ ಅಂತರದ ಸ್ಪರ್ಧೆ ನಡೆಯಲಿದೆ’ ಎಂದು ಕುರಣಿ ವಿವರಿಸಿದರು.
 
ಫೆಬ್ರುವರಿ 4 ಮತ್ತು 5ರಂದು ಸೈಕ್ಲಿಂಗ್ ಆಯೋಜಿಸಲು ನಿರ್ಧರಿಸಲಾಗಿದೆ. ಮೊದಲ ದಿನ ಮಹಿಳೆಯರ ಸ್ಪರ್ಧೆ ನಡೆಯಲಿದೆ. ಮುಂಜಾನೆ 7 ಗಂಟೆಯಿಂದ 9 ಗಂಟೆಯ ವರೆಗೆ ಸ್ಪರ್ಧೆಗಳು ಇರುತ್ತವೆ. ಸೈಕ್ಲಿಂಗ್‌ಗಾಗಿ ಮಾರ್ಗ ಗುರುತಿಸುವ ಕಾರ್ಯ ಶೀಘ್ರ ನಡೆಯಲಿದೆ.  
 
**
ಕ್ರೈಟೀರಿಯಂ ಹೇಗಿರುತ್ತದೆ?
ಟ್ರ್ಯಾಕ್ ಸೈಕ್ಲಿಂಗ್‌ನಲ್ಲಿ ಪಾಯಿಂಟ್ ರೇಸ್ ಇದ್ದಂತೆ ರೋಡ್ ರೇಸ್‌ನಲ್ಲಿ ಕ್ರೈಟೀರಿಯಂ ಇರುತ್ತದೆ. ಇದರಲ್ಲಿ ಐದರಿಂದ ಆರು ಅಂತಿಮ ಗೆರೆಗಳನ್ನು (ಫಿನಿಷಿಂಗ್ ಪಾಯಿಂಟ್‌) ನಿಗದಿ ಮಾಡಿರುತ್ತಾರೆ. ಪ್ರತಿ ಬಾರಿ ಅಂತಿಮ ಗೆರೆಯನ್ನು ದಾಟಿದ ಮೊದಲಿಗರಿಗೆ ಪಾಯಿಂಟ್ ನೀಡಲಾಗುತ್ತದೆ. ಎಲ್ಲ ಅಂತಿಮ ಗೆರೆಗಳಲ್ಲಿ ಸೈಕ್ಲಿಸ್ಟ್‌ ಗಳಿಸಿದ ಪಾಯಿಂಟ್‌ಗಳನ್ನು ಒಟ್ಟು ಮಾಡಿ ಬಹುಮಾನ ನಿಗದಿ ಮಾಡಲಾಗುತ್ತದೆ. ರೋಡ್ ಸೈಕ್ಲಿಂಗ್ ಸಾಮಾನ್ಯವಾಗಿ ನಗರ ಅಥವಾ ಪಟ್ಟಣದ ಹೊರವಲಯದಲ್ಲಿ ನಡೆದರೆ ಕ್ರೈಟೀರಿಯಂ ನಗರ ಮಧ್ಯದಲ್ಲಿ ರೋಮಾಂಚನ ನೀಡುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.