ADVERTISEMENT

ಕೇಂದ್ರ ಸರ್ಕಾರದ ಅಧಿಕಾರಿಗಳ ನಡೆಗೆ ಅತೃಪ್ತಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 7:22 IST
Last Updated 22 ನವೆಂಬರ್ 2017, 7:22 IST

ಧಾರವಾಡ: ಖುದ್ದು ಹಾಜರಿಗೆ ವಿನಾಯಿತಿ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಕೇಂದ್ರ ಸರ್ಕಾರದ ಅಧಿಕಾರಿಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಇಲ್ಲಿನ ಹೈಕೋರ್ಟ್‌ ವಿಭಾಗೀಯ ಪೀಠ, ಸರ್ಕಾರದ ಹಿರಿಯ ಅಧಿಕಾರಿಗಳು ನ್ಯಾಯಾಲಯದ ಆದೇಶ ಗೌರವಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಮಂಗಳವಾರ ಸಲಹೆ ನೀಡಿದೆ.

ಸುಪ್ರೀಂಕೋರ್ಟ್‌ ಸೂಚನೆ ಬಳಿಕವಷ್ಟೇ, ನ್ಯಾಯಪೀಠದ ಮುಂದೆ ಹಾಜರಾಗಿದ್ದ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕಾರ್ಯದರ್ಶಿ ಅನಿಲ್‌ ಸ್ವರೂಪ್‌ ಅವರನ್ನು ಉದ್ದೇಶಿಸಿ ನ್ಯಾಯಪೀಠ ಈ ಸಲಹೆ ನೀಡಿತು.

ನ್ಯಾಯಾಂಗ ನಿಂದನಾ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌.ಸುಜಾತಾ ಮತ್ತು ಎಚ್‌.ಬಿ.ಪ್ರಭಾಕರಶಾಸ್ತ್ರಿ ಅವರಿದ್ದ ಪೀಠ, ‘ಖುದ್ದು ಹಾಜರಾತಿಗೆ ವಿನಾಯಿತಿ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು ಎಷ್ಟು ಸರಿ? ಇದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ’ ಎಂದು ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರನ್ನು ಖಾರವಾಗಿ ಪ್ರಶ್ನಿಸಿತು. ಜತೆಗೆ, ನ್ಯಾಯಾಲಯದ ಆದೇಶ ಗೌರವಿಸುವ ಮನಸ್ಥಿತಿ ರೂಢಿಸಿಕೊಳ್ಳುವಂತೆ ಅನಿಲ್‌ ಸ್ವರೂಪ್‌ ಅವರಿಗೆ ಕಿವಿಮಾತು ಹೇಳಿತು. ಬಳಿಕ, ಸರ್ಕಾರಿ ವಕೀಲರ ಮನವಿ ಮೇರೆಗೆ ವಿಚಾರಣೆಯನ್ನು ಮುಂದೂಡಿತು.

ADVERTISEMENT

ಏನಿದು ಪ್ರಕರಣ: 1982ರ ಅಧಿಸೂಚನೆ ಅನ್ವಯ ದೊರೆಯುವ ಸೌಲಭ್ಯಗಳನ್ನು ಒದಗಿಸುವಂತೆ ಕೋರಿ ಕಾರವಾರದ ಜೆಎಸ್‌ಎಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆಯ ರಮೇಶ ಭಂಡಾರಿ ಮತ್ತು ಇತರರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು.

ನಿಯಮಾನುಸಾರ ಅರ್ಜಿ ಪರಿಗಣಿಸುವಂತೆ ಸೂಚಿಸಿ ಏಕ ಸದಸ್ಯ ಪೀಠ ಅರ್ಜಿ ಇತ್ಯರ್ಥಗೊಳಿಸಿತ್ತು. ಇದನ್ನು ಪ್ರಶ್ನಿಸಿ, ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿರಲಿಲ್ಲ. ಈ ನಡುವೆ ನ್ಯಾಯಾಲಯದ ಆದೇಶ ಪಾಲನೆ ಮಾಡಿಲ್ಲ ಎಂದು ಅರ್ಜಿದಾರರು ನ್ಯಾಯಾಂಗ ನಿಂದನಾ ದೂರು ಸಲ್ಲಿಸಿದ್ದರು.

ದೂರಿನ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ, 2017ರ ಜನವರಿ 30ರಂದು ಕೇಂದ್ರ ಸರ್ಕಾರದ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಖುದ್ದು ಹಾಜರಿಗೆ ಆದೇಶಿಸಿತ್ತು. ಅಧಿಕಾರಿಗಳು ಖುದ್ದು ಹಾಜರಾತಿಗೆ ವಿನಾಯಿತಿ ಕೋರಿ ಸುಪ್ರೀಂಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ತಿರಸ್ಕರಿಸಿದ್ದ ಸುಪ್ರೀಂಕೋರ್ಟ್‌, ವಿಭಾಗೀಯ ಪೀಠದ ಆದೇಶ ಪಾಲಿಸುವಂತೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.