ADVERTISEMENT

ಪಾಕ್‌ನಿಂದ ಬಂದ ಪತ್ನಿ : ಸಂಭ್ರಮ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 6:51 IST
Last Updated 29 ಏಪ್ರಿಲ್ 2017, 6:51 IST
ಪಾಕ್‌ನಿಂದ ಬಂದ  ಪತ್ನಿ : ಸಂಭ್ರಮ
ಪಾಕ್‌ನಿಂದ ಬಂದ ಪತ್ನಿ : ಸಂಭ್ರಮ   

ಹುಬ್ಬಳ್ಳಿ: ತಿಂಗಳುಗಳ ಕಾಲ ನಡೆಸಿದ ಶ್ರಮಕ್ಕೆ ಸಿಕ್ಕ ಪ್ರತಿಫಲದ ಸಂಭ್ರಮ ಇಲ್ಲಿನ ಹೆಗ್ಗೇರಿ ಗುಡಿ ಪ್ಲಾಟ್‌ನ ಡ್ಯಾನಿಯಲ್‌ ಮನೆಯಲ್ಲಿ ತುಂಬಿದೆ. ಪಾಕಿಸ್ತಾನದಲ್ಲಿ ಮದುವೆಯಾದ ಪತ್ನಿಯನ್ನು ಭಾರತಕ್ಕೆ ಕರೆತಂದ ಅವರ ಸಂತಸದಲ್ಲಿ ತಂದೆ ಸೈಮನ್ ದೇವನೂರ ಮತ್ತು ತಾಯಿ ಜೆನಿಫರ್‌ ಕೂಡ ಭಾಗಿಯಾಗಿದ್ದಾರೆ.

ದೂರದ ಸಂಬಂಧಿಯಾದ ಲಾಹೋರ್‌ನ ಸಿಲ್ವಿಯಾ ಅವರನ್ನು ಪ್ರೀತಿಸಿ 2016ರ ಜೂನ್‌ 25ರಂದು ಮದುವೆಯಾದ ಡ್ಯಾನಿಯಲ್‌ ಅವರಿಗೆ ವೀಸಾ ಸಮಸ್ಯೆಯಿಂದಾಗಿ ಪತ್ನಿಯನ್ನು ಸ್ವದೇಶಕ್ಕೆ ಕರೆತರಲು ಸಾಧ್ಯವಾಗಲಿಲ್ಲ.ಪತ್ನಿಯನ್ನು ಭಾರತಕ್ಕೆ ಕರೆತರಲು ನಡೆಸಿದ ಪ್ರಯತ್ನಕ್ಕೆ ಫಲ ಸಿಗದಿದ್ದಾಗ ಆ ಸಂಕಷ್ಟವನ್ನು ಟ್ವೀಟರ್‌ ಮೂಲಕ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರ ಗಮನಕ್ಕೆ ತಂದಿದ್ದರು.

ಮನವಿಗೆ ಸ್ಪಂದಿಸಿದ ಸುಷ್ಮಾ, ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಗಮನಕ್ಕೆ ತಂದಿದ್ದರು. ಹೀಗಾಗಿ ಸಿಲ್ವಿಯಾಗೆ ವೀಸಾ ಮತ್ತು ಪಾಸ್‌ಪೋರ್ಟ್‌ ದೊರಕಿತ್ತು.ಡ್ಯಾನಿಯಲ್‌ ಹಾಗೂ ಸಿಲ್ವಿಯಾ ಏಪ್ರಿಲ್‌ 19ರಂದು ನವದೆಹಲಿಯಲ್ಲಿ ಒಂದುಗೂಡುವ ಮೂಲಕ ಒಂಬತ್ತು ತಿಂಗಳ ವಿರಹ ವೇದನೆ ಸುಖಾಂತ್ಯಗೊಂಡಿತ್ತು. ಕೆಲವು ದಿನ ದೆಹಲಿಯಲ್ಲಿದ್ದ ದಂಪತಿ ಗೋವಾ ಮೂಲಕ ರೈಲಿನಲ್ಲಿ ಏಪ್ರಿಲ್‌ 27ರಂದು ಹುಬ್ಬಳ್ಳಿ ತಲುಪಿದ್ದರು.

ADVERTISEMENT

‘ಹುಬ್ಬಳ್ಳಿ ತಲುಪಿದಾಗ ಸಂತಸವನ್ನು ಹೇಗೆ ಪ್ರಕಟಪಡಿಸಬೇಕೆಂಬುದೇ ತಿಳಿಯಲಿಲ್ಲ. ಕಳೆದುಕೊಂಡ ಮುತ್ತನ್ನು ಮನೆಗೆ ತೆಗೆದುಕೊಂಡು ಬಂದ ಅನುಭವವಾಯಿತು. ಸಿಲ್ವಿಯಾ ಕೂಡ ತುಂಬ ಭಾವುಕರಾಗಿದ್ದಾರೆ. ಭಾರತಕ್ಕೆ ಮೊದಲ ಬಾರಿ ಬಂದ ಅವರು ಇಲ್ಲಿನ ಸಂಸ್ಕೃತಿ, ಆಚಾರ ಕಂಡು ಮುದಗೊಂಡಿದ್ದಾರೆ’ ಎಂದು ‘ಪ್ರಜಾವಾಣಿ’ ಜೊತೆ ಮಾತನಾಡಿದ ಡ್ಯಾನಿಯಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.