ADVERTISEMENT

‘ಮಹದಾಯಿ ನೀರ್‌ ಕೊಡ್ಸೋ ಯಪ್ಪಾ...’

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 6:11 IST
Last Updated 17 ಜುಲೈ 2017, 6:11 IST

ಹುಬ್ಬಳ್ಳಿ: ರೈತ ಮಹಿಳೆಯೊಬ್ಬರು ಬಿಜೆಪಿ ವಿಭಾಗ ಪ್ರಭಾರಿ ಮಹೇಶ ಟೆಂಗಿನಕಾಯಿ ಅವರ ಕಾಲಿಗೆ ಬಿದ್ದು ‘ನೀರ್‌ ಕೊಡ್ಸೋ ಯಪ್ಪಾ..’ ಎಂದು ಬೇಡಿಕೊಂಡ ಪ್ರಸಂಗ ಭಾನುವಾರ ಇಲ್ಲಿ ನಡೆಯಿತು. ಮಹದಾಯಿ ಯೋಜನೆ ಜಾರಿಗಾಗಿ ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡ ಹಾಕುವಲ್ಲಿ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಆರೋಪಿಸಿ, ನಗರದ ಲ್ಯಾಮಿಂಗ್ಟನ್‌ ರಸ್ತೆಯ ಸಂಸದ ಪ್ರಹ್ಲಾದ ಜೋಶಿ ಅವರ ಕಚೇರಿಗೆ ಮುತ್ತಿಗೆ ಹಾಕಲು ನರಗುಂದದಿಂದ 200ಕ್ಕೂ ಹೆಚ್ಚು ರೈತರು ಬಂದಿದ್ದರು. ಈ ವೇಳೆ ಸಂಸದ ಜೋಶಿ ನಗರದಲ್ಲಿ ಇರಲಿಲ್ಲವಾದ್ದರಿಂದ ಸ್ಥಳಕ್ಕೆ ಬಿಜೆಪಿ ಮುಖಂಡ ಮಹೇಶ ಟೆಂಗಿನಕಾಯಿ ಬಂದಿದ್ದರು.

ಈ ವೇಳೆ ರೈತ ಮಹಿಳೆ­ಯೊಬ್ಬರು ನೋಡನೋಡುತ್ತಿದ್ದಂತೆಯೇ ಟೆಂಗಿನಕಾಯಿ ಅವರ ಕಾಲಿಗೆ ಬಿದ್ದು ನ್ಯಾಯ ಕೊಡಿಸುವಂತೆ ಅಲವತ್ತು­ಕೊಂಡರು. ಇದರಿಂದ ಸ್ಥಳದಲ್ಲಿದ್ದ ಬಿಜೆಪಿ ಮುಖಂಡರು ವಿಚಲಿತರಾದರು. ಅಷ್ಟರಲ್ಲಿ ಜೊತೆಗಿದ್ದ ಪ್ರತಿಭಟನಾಕಾರರು ಮಹಿಳೆಯನ್ನು ಸಮಾಧಾನ ಮಾಡಿದರು.

‘ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳ­ದಿದ್ದರೆ ಸಮಸ್ಯೆ ಜಟಿಲವಾಗಲಿದೆ. ಅದಕ್ಕೆ ಅವಕಾಶ  ಮಾಡಿಕೊಡಬಾರದು. ರಾಜ್ಯದ ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕದೇ ಇದ್ದಲ್ಲಿ ಅದರ ಪರಿಣಾಮವನ್ನು ಮುಂದೆ ಎದುರಿಸಲಿದ್ದಾರೆ. ಮುಂದೆ ಎಲ್ಲ ಹಳ್ಳಿಗಳಲ್ಲೂ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ’ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಮುಖಂಡ ಗುರುರಾಯನಗೌಡ ಎಚ್ಚರಿಕೆ ನೀಡಿದರು.

ADVERTISEMENT

‘ಪ್ರಹ್ಲಾದ ಜೋಶಿ ಮತ್ತು ಜಗದೀಶ ಶೆಟ್ಟರ್‌ ಅವರು ಊರಿನಲ್ಲಿ ಇಲ್ಲ. ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ನಾಯಕರಿಗೆ ಮನವರಿಕೆ ಮಾಡಿಕೊಡ­ಲಾಗುವುದು. ರೈತ ಕರ್ನಾಟಕ ಸೇನೆ ರಾಜ್ಯ ಘಟಕ ಅಧ್ಯಕ್ಷ ವೀರೇಶ ಸೊಬರದಮಠ ಅವರು ನರಗುಂದದಲ್ಲಿ ಕೈಗೊಂಡಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಬಿಡಬೇಕು. ಸಮಸ್ಯೆ ಇತ್ಯರ್ಥ್ಯಪಡಿಸಲು ಬಿಜೆಪಿ ನಾಯಕರು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದಾರೆ’ ಎಂದು ಮಹೇಶ ಟೆಂಗಿನಕಾಯಿ ಭರವಸೆ ನೀಡಿದರು.

ಬಳಿಕ ಪ್ರತಿಭಟನೆಯನ್ನು ಕೈಬಿಡ­ಲಾಯಿತು. ಸಂಸದರ ಕಚೇರಿಗೆ ಮುತ್ತಿಗೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಹಾಕಲಾಗಿತ್ತು. ಪೊಲೀಸ್‌ ಕಮಿಷನರ್‌ ಪಾಂಡುರಂಗ ರಾಣೆ, ಎಸಿಪಿ ದಾವೂದ್‌ ಖಾನ್‌ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.