ADVERTISEMENT

ವೆಂಕಯ್ಯನಾಯ್ಡು ಆಯ್ಕೆ ಬೇಡ

ಕನ್ನಡಿಗರನ್ನೇ ಆಯ್ಕೆ ಮಾಡಲು ನವನಿರ್ಮಾಣ ಸೇನೆ ಕಾರ್ಯಕರ್ತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಮೇ 2016, 5:53 IST
Last Updated 24 ಮೇ 2016, 5:53 IST

ಧಾರವಾಡ: ಮುಂಬರುವ ರಾಜ್ಯಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ ಪಕ್ಷಗಳು ಕರ್ನಾಟಕದಿಂದ ಕನ್ನಡಿಗರನ್ನೆ ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯ­ಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು. ಒತ್ತಾಯಿಸಿದರು.

‘ಮೂರು ಸಲ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದರೂ ಕರ್ನಾಟಕಕ್ಕೆ ಏನೂ ಮಾಡದ ಆಂಧ್ರದ ವೆಂಕಯ್ಯ ನಾಯ್ಡು ಅವರನ್ನು ಬಿಜೆಪಿ ಮುಖಂಡರು ಮತ್ತೊಮ್ಮೆ ರಾಜ್ಯಸಭೆಗೆ ಆರಿಸಿ ಕಳುಹಿಸುತ್ತಿರುವುದು ಸರಿಯಲ್ಲ. ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆ ಬಯಸುವವರು ಕನ್ನಡಿಗರೆ ಆಗಿರಬೇಕು. ಅವರಿಗೆ ನಾಡು, ನುಡಿ, ಗಡಿ, ಜಲದ ಬಗ್ಗೆ -ಕಾಳಜಿ ಇರುವಂಥವರನ್ನು ಪಕ್ಷಗಳು ಆಯ್ಕೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ವೇಳೆ ಮಾತನಾಡಿದ ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಗಿರೀಶ್ ಪೂಜಾರ್, ‘ರಾಜ್ಯದ ಬಗ್ಗೆ ಕನಿಷ್ಠ ಜ್ಞಾನವಿಲ್ಲದವರು ರಾಜ್ಯವನ್ನು ಪ್ರತಿನಿಧಿಸುತ್ತಾರೆ.  ಬಿ.ಜೆ.ಪಿ ಪಕ್ಷದಿಂದ ಕಳೆದ ೩ ಅವಧಿಗೆ ರಾಜ್ಯದಿಂದ ಆಯ್ಕೆಯಾದ ವೆಂಕಯ್ಯ ನಾಯ್ಡು ಕರ್ನಾಟಕದ ಪರವಾಗಿ ಮಾತನಾಡಿದ್ದೇ ಕಡಿಮೆ.

ಸಂಸದರ ಆದರ್ಶ ಗ್ರಾಮಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ಆಂದ್ರಪ್ರದೇಶದ ಹಳ್ಳಿಯೊಂದನ್ನು ಎನ್ನುವದನ್ನು ಆಯ್ಕೆ ಮಾಡಿರುವ ಪಕ್ಷದವರು ತಿಳಿದುಕೊಳ್ಳಬೇಕು. ತಮ್ಮ ಪ್ರತಿಷ್ಠೆಗಾಗಿ ರಾಜಕೀಯ ಪಕ್ಷಗಳು ರಾಜ್ಯದ ಹಿತವನ್ನು ಬಲಿ ಕೊಡುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

‘ಒಂದು ವೇಳೆ ಅನ್ಯ ಭಾಷಿಕರಿಗೆ ಮಣೆ ಹಾಕಿದ್ದೆ ಆದರೆ ರಾಜಕೀಯ ಪಕ್ಷಗಳ ಕನ್ನಡ ವಿರೋಧಿ ನೀತಿಯನ್ನು ಖಂಡಿಸಿ ಪಕ್ಷದ ಎಲ್ಲ ಕಾರ್ಯಕ್ರಮಗಳಲ್ಲಿ ಕರ್ನಾಟಕ ನವನಿರ್ಮಾಣ ಸೇನೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು. 

ಯಾಸೀನ್ ಕೆ.ಕೆ, ರಮೇಶ ಬಡಿಗೇರ, ಶಿವಾನಂದ ಬಳ್ಳೂರ, ಕೃಷ್ನಾ ಸಂಕೋಜಿ, ವಿನಯ ಹಿರೇಮಠ, ವಿನಯ ಬಾಬರ, ಮಹಾಂತೇಶ ಪಟ್ಟಣಶೆಟ್ಟಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.