ADVERTISEMENT

ಸಚಿವರ ಮನೆ ಎದುರು ಬಿಜೆಪಿ ಧರಣಿ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪಿಂಚಣಿ ಹಣ ಬಿಡುಗಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2017, 5:51 IST
Last Updated 7 ಸೆಪ್ಟೆಂಬರ್ 2017, 5:51 IST

ಧಾರವಾಡ: ರಾಜ್ಯ ಸರ್ಕಾರದಿಂದ ಹುಬ್ಬಳ್ಳಿ-–ಧಾರವಾಡ ಮಹಾನಗರ ಪಾಲಿಕೆಗೆ ಬರಬೇಕಾದ ಪಿಂಚಣಿ ಹಣ ಬಿಡುಗಡೆ ಮಾಡಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಇಲ್ಲಿನ ಬಾರಾಕೊಟ್ರಿಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮನೆ ಎದರು ಬುಧವಾರ ಧರಣಿ ನಡೆಸಿದರು.

‘ರಾಜ್ಯದ ಕಾಂಗ್ರೆಸ್ ಸರ್ಕಾರ ಪಾಲಿಕೆಗೆ ಬರಬೇಕಿರುವ ಪಿಂಚಣಿ ಹಣ ನೀಡದೆ ವಂಚಿಸುತ್ತಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಆದರೂ ಅವರು ಹಣ ಬಿಡುಗಡೆಗೆ ಆಸಕ್ತಿ ತೋರುತ್ತಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.

‘ಸರ್ಕಾರ ಪಾಲಿಕೆಗೆ ನೀಡುವ ₹ 106 ಕೋಟಿ ಪಿಂಚಣಿ ಹಣ ಬಾಕಿ ಉಳಿಸಿಕೊಂಡಿದೆ. ಈ ಕಾರಣದಿಂದ ಪಿಂಚಣಿದಾರರಿಗೆ ಹಣ ವಿತರಿಸುವಲ್ಲಿ ವಿಳಂಬವಾಗುತ್ತಿದೆ. ಜತೆಗೆ ಸಾರ್ವಜನಿಕರಿಂದ ಅಪಮಾನ ಆಗುತ್ತಿದೆ. ಹೀಗಾಗಿ ಕೂಡಲೇ ಪಿಂಚಣಿ ಹಣ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಸಚಿವ ವಿನಯ್ ಕುಲಕರ್ಣಿ ಮನೆಯ ಸುತ್ತಮುತ್ತು ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮನೆಯಿಂದ ನೂರು ಮೀಟರ್ ದೂರದಲ್ಲಿ ಪೊಲೀಸ್ ಬ್ಯಾರಿಕೇಡ್ ಹಾಕಿ ಬಿಜೆಪಿ ಕಾರ್ಯಕರ್ತರನ್ನು ತಡೆಯಲಾಯಿತು.

ಪೊಲೀಸ್ ಭದ್ರತೆಯಲ್ಲಿ ಸ್ಥಳಕ್ಕೆ ಆಗಮಿಸಿ ಆಹ್ವಾಲು ಆಲಿಸಿದ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಸೆ. 12 ರಂದು ಪಾಲಿಕೆ ಸದಸ್ಯರ ಸಭೆ ಕರೆಯುವಂತೆ ಪಾಲಿಕೆ ಆಯುಕ್ತರಿಗೆ ಮೊಬೈಲ್ ಮೂಲಕ ಸೂಚನೆ ನೀಡಿದರು. ಸಭೆಯಲ್ಲಿ ಚರ್ಚಿಸಿದ ನಂತರ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸುವ ಭರವಸೆ ನೀಡಿದರು.

ಶಿವು ಹಿರೇಮಠ, ಪೂರ್ಣಾ ಪಾಟೀಲ, ಮಂಜುಳಾ ಅಕ್ಕೂರ, ಸದಸ್ಯರಾದ ವೀರಣ್ಣ ಸವಡಿ, ಶಂಕರ ಶೇಳಕೆ, ವಿಜಯಾನಂದ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.