ADVERTISEMENT

ಸಾಲ ಮನ್ನಾಕ್ಕಾಗಿ ರೈತರಿಂದ ಪಾದಯಾತ್ರೆ

ದೇಶಕ್ಕೆ ಅನ್ನ ನೀಡುವ ರೈತ ತುತ್ತಿನ ಅನ್ನಕ್ಕೆ ಭಿಕ್ಷೆ ಬೇಡಬೇಕಾದ ಪರಿಸ್ಥಿತಿ: ಲೋಕನಾಥ ಬೇಸರ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 10:45 IST
Last Updated 9 ಮಾರ್ಚ್ 2017, 10:45 IST
ನವಲಗುಂದ: ಕಳಸಾ– ಬಂಡೂರಿ ಹಾಗೂ ಮಹಾದಾಯಿ ಯೋಜನೆ ಅನುಷ್ಠಾನ, ಈ ಬಾರಿಯ ಬಜೆಟ್‌ನಲ್ಲಿ ರೈತರ ಸಾಲ ಸಂಪೂರ್ಣ ಮನ್ನಾ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಇಲ್ಲಿಯ ಮಹಾದಾಯಿ ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟ ಬುಧವಾರ ನವಲಗುಂದದಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ಆರಂಭಿಸಿದರು.
 
ಪಾದಯಾತ್ರೆ ಉದ್ಘಾಟನಾ ಸಮಾ­ರಂಭ­ದಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಲೋಕನಾಥ ಹೆಬಸೂರ, 588 ದಿನಗಳಿಂದ ನೀರು ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಿರಂತರ ಹೋರಾಟ ಮಾಡುತ್ತಿದ್ದೇವೆ. ಆದರೆ ನಮಗೆ ಸಿಕ್ಕಿದ್ದು ನೀರಿನ ಬದಲಾಗಿ ಪೊಲೀಸರ ಬೂಟಿನ ಏಟು, ಬಾಸುಂಡೆ ಭಾಗ್ಯ.  ದೇಶಕ್ಕೆ ಅನ್ನ ನೀಡುವ ರೈತ ತುತ್ತಿನ ಅನ್ನಕ್ಕೆ ಭಿಕ್ಷೆ ಬೇಡಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
 
ತೀವ್ರ ಬರಗಾಲದಿಂದಾಗಿ ಬೆಳೆಗಾಗಿ ಮಾಡಿದ ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಂತ ಹಂತವಾಗಿ ರೈತ ಕುಲ ನಶಿಸಿ ಹೋಗುತ್ತಿದೆ. ಕುಡಿಯುವ ನೀರು ಸಿಗದಂತಹ ಪರಿಸ್ಥಿತಿ ಎದುರಾಗಿದೆ. ಕಳಸಾ– ಬಂಡೂರಿಯನ್ನು ಮಲಪ್ರಭೆಗೆ ಜೋಡಿಸಲು ಇನ್ನೆಷ್ಟು ದಿನ ಹೋರಾಟ ಮಾಡಬೇಕಾಗಿದೆಯೋ ಗೊತ್ತಿಲ್ಲ. ಕನಿಷ್ಠ ರೈತರ ಸಾಲ ಮನ್ನಾ ಮಾಡುವಂತೆ ಅಂಗಲಾಚಲಾಗುತ್ತಿದೆ.

ಆದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ, ಕೃಷಿ ಕೂಲಿಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಹೊರದೇಶದಲ್ಲಿದೆ ಎಂಬಂತೆ ವರ್ತಿ­ಸುತ್ತಿದ್ದಾರೆ. ನ್ಯಾಯ ಮಂಡಳಿ­ಯಲ್ಲಿರುವ ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಬಗೆಹರಿಸುವಂತೆ ಮನವಿ ಮಾಡಿದ್ದರೂ ಗಮನ ನೀಡುತ್ತಿಲ್ಲ ಎಂದರು.
 
ಉತ್ತರ ಪ್ರದೇಶದ ಚುನಾವಣೆ ಪ್ರಚಾರ­ದಲ್ಲಿ ಪ್ರಧಾನಿ ಮೋದಿ ಮೌನ ವಹಿಸುವರು. ಈ ಭಾಗದ ಸಂಸದರೂ ಪ್ರಶ್ನಿಸದೇ ರಾಜ್ಯದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದರಿಂದ ನೊಂದಿರುವ ರೈತರು ರಾಜ್ಯ ಸರ್ಕಾರ­ವನ್ನು ಎಚ್ಚರಿಸಲು ನವಲಗುಂದ­ದಿಂದ - ಧಾರವಾಡ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ ಹಿತ ಕಾಪಾಡಬೇಕು ಎಂದು ಒತ್ತಾ­ಯಿಸಿದರು.
 
ರೈತ ಮುಖಂಡ ಸುಭಾಸ­ಚಂದ್ರ­ಗೌಡ, ಜೀವ ಹೋದರೂ ಹೋರಾ­ಟವನ್ನು ಕೈಬಿಡುವುದಿಲ್ಲ, ದೇಶಕ್ಕೆ ಅನ್ನ ಕೊಡುವ ರೈತರು ಹೊತ್ತಿನ ಊಟಕ್ಕೂ ಇನ್ನೊಬ್ಬರ ಬಳಿ ಭಿಕ್ಷೆ ಬೇಡುವ ಸ್ಥಿತಿ ಬಂದೊದಗಿದೆ.  ಆದರೆ ದಾರಿಯುದ್ದಕ್ಕೂ ರೈತರ ಸಂಕಷ್ಟ ಅರಿತ ಜನರು ಅನ್ನ ದಾಸೋಹದ ವ್ಯವಸ್ಥೆ ಮಾಡಿದ್ದಾರೆ. ಅಗತ್ಯವಿದ್ದರೆ ರೊಟ್ಟಿ ಭಿಕ್ಷೆ ಬೇಡಲಾಗುವುದು ಎಂದರು.
 
ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ನೂರಾರು ರೈತರು ದಾರಿಯೂದ್ದಕ್ಕೂ ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ರೈತರು ಬಂದರು ದಾರಿ ಬೀಡಿ, ಕುಡಿಯಲು ನೀರು ಕೊಡಿ, ನೀರು ಕೊಡದ ಸರ್ಕಾರ­ಗಳಿಗೆ ಧಿಕ್ಕಾರ ಎಂದರು. ಎತ್ತು ಚಕ್ಕಡಿ ಸಮೇತ ಪಾದಯಾತ್ರೆ ಆರಂಭವಾಯಿತು.
 
ಪಾದಯಾತ್ರೆಯಲ್ಲಿ ದೇವೇಂದ್ರಪ್ಪ ಹಳ್ಳದ, ವೀರಣ್ಣ ಮಳಗಿ, ಆರ್.ಎಂ. ನಾಯ್ಕರ್, ವಿಠ್ಠಲ ಗೊನ್ನಾಗರ, ರವಿ ಪಾಟೀಲ, ಮಲ್ಲಯ್ಯ ಮಠಪತಿ, ಕಿಲಾರಿ­ಮಠ, ಮೈಲಾರಪ್ಪ ವೈದ್ಯ, ವೀರಣ್ಣ ನೀರಲಗಿ, ದ್ಯಾಮಣ್ಣ ಹೊನ್ನಕುದರಿ, ರವಿ ತೋಟದ, ಪ್ರಕಾಶ ಹೆಬಸೂರ, ಪ್ರೇಮಾ ನಾಯ್ಕರ,  ಪೂರ್ಣಿಮಾ ಜೋಶಿ, ಮಹಾ­ಲಕ್ಷ್ಮೀ ಮದಗುಣಕಿ ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.