ADVERTISEMENT

ನವರಾತ್ರಿ ಸಂಭ್ರಮಕ್ಕೆ ಸಿದ್ಧಗೊಂಡ ಮುದ್ರಣ ಕಾಶಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 5:36 IST
Last Updated 22 ಸೆಪ್ಟೆಂಬರ್ 2017, 5:36 IST

ಗದಗ: ಮುದ್ರಣ ಕಾಶಿ ಗದಗ ನಗರದಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ಇಲ್ಲಿನ ಐತಿಹಾಸಿಕ ದುರ್ಗಾದೇವಿ ದೇವಸ್ಥಾನಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಚುರುಕುಗೊಂಡಿವೆ. ನವರಾತ್ರಿ ಉತ್ಸವ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆಯೇ ಜನರು ಮನೆಗಳನ್ನು ಸ್ವಚ್ಛಗೊಳಿಸಿದ್ದಾರೆ. ಪೂಜಾ ಸಾಮಗ್ರಿ, ಹೂವು, ಹಣ್ಣು, ದವಸ ಧಾನ್ಯ, ಹೊಸ ಬಟ್ಟೆ ಖರೀದಿಸಿದ್ದಾರೆ.

ವಿವಿಧೆಡೆ ಘಟ ಸ್ಥಾಪನೆ: ಗಂಗಾಪೂರಪೇಟೆಯ ದುರ್ಗಾದೇವಿ ದೇವಸ್ಥಾನ, ಸರಾಫ್‌ ಬಜಾರ ಅಂಬಾಭವಾನಿ, ಬೆಟಗೇರಿ ಅಂಬಾಭವಾನಿ, ತುಳಜಾ ಭವಾನಿ, ಕಾಳಮ್ಮನ ಗುಡಿ, ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಉಡಮ್ಮದೇವಿ ಗುಡಿ, ದ್ಯಾಮವ್ವನ ಗುಡಿ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ದೇವಿಗೆ ಚಿನ್ನಾಭರಣ, ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಯಿತು. ಇಲ್ಲಿ ಗುರುವಾರ ಸಂಜೆ ಘಟ ಸ್ಥಾಪಿಸಲಾಯಿತು.

ಮಣ್ಣಿನ ತಟ್ಟೆಯಲ್ಲಿ 9 ಪ್ರಕಾರದ ಧಾನ್ಯ ಹಾಕಿ, 9 ದಿನಗಳವರೆಗೆ ದೇವಿ ಮೂರ್ತಿಯ ಬಲ ಭಾಗದಲ್ಲಿ ದೀಪ ಹಚ್ಚಲಾಗುತ್ತದೆ. ಈ ದೀಪವನ್ನು ನವರಾತ್ರಿವರೆಗೆ ಕಾಯಬೇಕಾಗುತ್ತದೆ. ಕಳಸ ಇಟ್ಟು ಪೂಜೆ ಸಲ್ಲಿಸಲಾಗುತ್ತದೆ. 9 ದಿನಗಳಲ್ಲಿ ತಟ್ಟೆಯಲ್ಲಿ ಚಿಕ್ಕ ಸಸಿ ಬೆಳೆಯುತ್ತವೆ. ದೇವಸ್ಥಾನದಲ್ಲಿ ಪ್ರತಿದಿನ ಭಜನೆ, ದೇವಿ ಪುರಾಣ, ವಿಶೇಷ ಪೂಜೆ, ಪುನಸ್ಕಾರ ನಡೆಯುತ್ತವೆ. ನಗರದ ಕೆಲವು ದೇವಸ್ಥಾನಗಳಲ್ಲಿ ದೇವಿಗೆ ವಿವಿಧ ಅಲಂಕಾರ ಮಾಡಲಾಗುತ್ತದೆ.

ADVERTISEMENT

ದುರ್ಗಾದೇವಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ: ಶತಮಾನಗಳ ಇತಿಹಾಸ ಹೊಂದಿರುವ ಗಂಗಾಪೂರ ಪೇಟೆಯ ದುರ್ಗಾದೇವಿ ದೇವಸ್ಥಾನದಲ್ಲಿ ಸಂಭ್ರಮ ಸಡಗರದಿಂದ ನವರಾತ್ರಿ ಉತ್ಸವ ಆಚರಿಸಲಾಗುತ್ತದೆ. ‘ಮೊದಲನೇ ದಿನ ಅಂದರೆ, ಗುರುವಾರ ಸಂಜೆ ಘಟ ಸ್ಥಾಪಿಸಲಾಯಿತು.

ಪ್ರತಿನಿತ್ಯ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಸೆ. 29ರಂದು ಮಹಾನವಮಿ ಅಂಗವಾಗಿ ಕುಂಬಳಕಾಯಿ ಒಡೆದು ಪೂಜಿಸಲಾಗುವುದು. ಸೆ. 30ರಂದು ಬನ್ನಿಮುಡಿಯುವ ಕಾರ್ಯಕ್ರಮ ಹಾಗೂ ಅ. 1ರಂದು ದೇವಿಯನ್ನು ತವರು ಮನೆಗೆ ಕಳುಹಿಸುವುದು ಹಾಗೂ ವಿವಿಧ ಧಾರ್ಮಿಕ, ವಿಧಿವಿಧಾನಗಳು ನಡೆಯುತ್ತವೆ.

ಇಲ್ಲಿಗೆ ಸಾವಿರಾರು ಭಕ್ತರು ಬಂದು ದೇವಿಯ ದರ್ಶನ ಪಡೆದು ಹೋಗುತ್ತಿದ್ದಾರೆ’ ಎಂದು ಗಂಗಾಪೂರ ಪೇಟೆಯ ದುರ್ಗಾದೇವಿ ದೇವಸ್ಥಾನದ ಅರ್ಚಕ ರಾಮಣ್ಣ ಚವಡರ ಹೇಳಿದರು.

ಮೂರು ಕಡೆ ಮೂರ್ತಿ ಪ್ರತಿಷ್ಠಾಪನೆ: ದಸರಾ ಹಬ್ಬದ ಹಿನ್ನೆಲೆಯಲ್ಲಿ ಡೋಹರಗಲ್ಲಿ, ಚವಡಿಕೂಟ ಹಾಗೂ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಪ್ರತ್ಯೇಕವಾಗಿ ದುರ್ಗಾದೇವಿಯ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ‘ಕೋಲ್ಲಾಪುರದಿಂದ 6.5 ಅಡಿ ಎತ್ತರದ ದೇವಿಯ ಮೂರ್ತಿಯನ್ನು ತಂದು ಡೋಹರಗಲ್ಲಿ ಕೂರಿಸಲಾಗಿದೆ.

ಶಿವಶರಣ ಡೋಹರ ಕಕ್ಕಯ್ಯ ಸಮಾಜ ಯುವಕ ಸಂಘದಿಂದ ಕಳೆದ ಏಳು ವರ್ಷಗಳಿಂದ ಇಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಮೂರ್ತಿ ಕೂರಿಸುವ ನೆಪದಲ್ಲಿ ಸಮುದಾಯವನ್ನು ಸಂಘಟಿಸುವ ಕಾರ್ಯದಲ್ಲಿ ಸಂಘದ ಸದಸ್ಯರು ತೊಡಗಿಸಿಕೊಂಡಿದ್ದಾರೆ.

ದಸರಾ ಅಂಗವಾಗಿ ಪ್ರತಿದಿನ ವಿಶೇಷ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ, ಮುತ್ತೈದೆಯರಿಗೆ ಉಡಿತುಂಬುವುದು ಹಾಗೂ ಸೆ. 30ರಂದು ದೇವಿ ಮೂರ್ತಿ ವಿಸರ್ಜನೆ ನಡೆಯಲಿದೆ’ ಎಂದು ಸಂಘದ ಸದಸ್ಯ ಮಂಜುನಾಥ ಗಜಾಕೋಶ, ಪ್ರದೀಪ ಗರಗ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.