ADVERTISEMENT

ಶಿರೋಳದ ರೊಟ್ಟಿ ಜಾತ್ರೆ ಇಂದಿನಿಂದ

ಬಸವರಾಜ ಹಲಕುರ್ಕಿ
Published 7 ಜನವರಿ 2018, 9:23 IST
Last Updated 7 ಜನವರಿ 2018, 9:23 IST
ನರಗುಂದ ತಾಲ್ಲೂಕಿನ ಶಿರೋಳದ ರೊಟ್ಟಿ ಜಾತ್ರೆಗೆ ಸಿದ್ದಗೊಂಡಿರುವ ಖಡಕ್‌ ರೊಟ್ಟಿಗಳು
ನರಗುಂದ ತಾಲ್ಲೂಕಿನ ಶಿರೋಳದ ರೊಟ್ಟಿ ಜಾತ್ರೆಗೆ ಸಿದ್ದಗೊಂಡಿರುವ ಖಡಕ್‌ ರೊಟ್ಟಿಗಳು   

ಭಾವೈಕ್ಯಕ್ಕೆ ಸಾಕ್ಷಿಯಾಗಿರುವ ಉತ್ತರ ಕರ್ನಾಟಕದ ರೊಟ್ಟಿ ಜಾತ್ರೆ ಎಂದೇ ಜನಜನಿತವಾಗಿರುವ ನರಗುಂದ ತಾಲ್ಲೂಕಿನ ಶಿರೋಳದ ತೋಂಟದಾರ್ಯ ಮಠದ ರೊಟ್ಟಿ ಊಟದ ಜಾತ್ರೆಗೆ ಜ. 7ರಂದು ಚಾಲನೆ ಲಭಿಸಲಿದೆ.

ಈ ಜಾತ್ರೆ 3 ದಿನ ನಡೆಯಲಿದೆ. ತೋಂಟದ ಸಿದ್ಧಲಿಂಗ ಶ್ರೀಗಳ ಗರಡಿಯಲ್ಲಿ ಬೆಳೆದ ಗುರುಬಸವ ಸ್ವಾಮೀಜಿ ಈ ಮಠವನ್ನು ಅಭಿವೃದ್ಧಿಪಡಿಸಿ ದಾಸೋಹಕ್ಕೆ ಆದ್ಯತೆ ನೀಡಿದ್ದಾರೆ. ಉತ್ತರ ಕರ್ನಾಟಕದ ಖಡಕ್ ರೊಟ್ಟಿಗಳೇ ಈ ಜಾತ್ರೆಯ ವಿಶೇಷ. ಖಡಕ್‌ ರೊಟ್ಟಿ, ಬಾನ, ಕರಿಹಿಂಡಿ, ಬಿಸಿಬರ್ತ (ಬಜ್ಜಿ), ರುಚಿ ಸವಿಯಲು ಈ ಜಾತ್ರೆಗೆ ಬರಬೇಕು. ಜಾತ್ರೆಗೆ ನಾಡಿನ ವಿವಿಧ ಭಾಗಗಳಿಂದ ಜನರು ಧಾವಿಸುತ್ತಾರೆ.

ಬಿಳಿ ಜೋಳದ ಖಡಕ್ ರೊಟ್ಟಿ, ಎಳ್ಳು ಹಚ್ಚಿದ ಸಜ್ಜಿ ರೊಟ್ಟಿ ಜತೆಗೆ ದೊಡ್ಡ ದೊಡ್ಡ ಹರವಿಗಳಲ್ಲಿ ಹಾಕಿಟ್ಟ ವಿಶಿಷ್ಟ ರುಚಿಯ ಕರಿಹಿಂಡಿ ಸವಿಯನ್ನು ಸಾವಿರಾರು ಜನ ಸವಿಯುತ್ತಾರೆ. ಸೌತೆಕಾಯಿ, ಗಜ್ಜರಿ ಹಾಗೂ ಹಲವು ಬಗೆಯ ಕಾಳುಗಳನ್ನು ಕುದಿಸಿ. ಒಗ್ಗರಣೆ ಹಾಕಿ ರುಚಿಕಟ್ಟಾಗಿ ಸಿದ್ದಪಡಿಸಲಾಗುತ್ತದೆ.

ADVERTISEMENT

ಈಚೆಗೆ ರೊಟ್ಟಿಜಾತ್ರೆ ಜನಪ್ರಿಯತೆ ಗಳಿಸಿದೆ. ಜಾತ್ರೆಗೆ 50 ಸಾವಿರಕ್ಕೂ ಹೆಚ್ಚು ರೊಟ್ಟಿಗಳು ಬೇಕಾಗುತ್ತವೆ. ಪ್ರತಿ ವರ್ಷ ಮಹಾರಥೋತ್ಸವದ ಮರುದಿನ ರೊಟ್ಟಿ ಊಟದ ಜಾತ್ರೆ ನಡೆಯುತ್ತದೆ. ಇದಕ್ಕೆ ಒಂದು ತಿಂಗಳ ಮೊದಲೇ ತಯಾರಿ ಆರಂಭವಾಗುತ್ತದೆ.

ಎಲ್ಲವೂ ಜನ ಸೇವೆಯಿಂದ ನಡೆಯುವಂತದ್ದು. ಕೆಲವರು ತಮ್ಮ ಮನೆಯಿಂದ ರೊಟ್ಟಿಗಳನ್ನು ತರುತ್ತಾರೆ. ತಮ್ಮ ತಮ್ಮ ಹಳ್ಳಿಗಳಿಂದ ಇಂತಿಷ್ಟು ರೊಟ್ಟಿ ತರುತ್ತೇವೆ ಎಂದು ಮಾತು ಕೊಟ್ಟಿರುತ್ತಾರೆ.

ಶಿರೋಳದ ರೊಟ್ಟಿ ಊಟದ ಜಾತ್ರೆ ಕೋಮು ಸೌಹಾರ್ದದ ಆಶಯದ ಹಿನ್ನೆಲೆಯಲ್ಲಿ ಸರ್ವಧರ್ಮಿಯರನ್ನು ಸೆಳೆದಿದೆ. ‘ಖಡಕ್‌ ರೊಟ್ಟಿ ರುಚಿ ನೋಡಾಕ ನಮ್ಮೂರ ಜಾತ್ರೆಗೆ ಬನ್ನಿ’ ಎಂದು ಗ್ರಾಮಸ್ಥರು ಕರೆಯುತ್ತಿದ್ದಾರೆ.

ಜಾತ್ರಾ ಕಾರ್ಯಕ್ರಮ:ಜ. 7ರಂದು ಬೆಳಿಗ್ಗೆ 10.30ಕ್ಕೆ ಕೃಷಿ ಪ್ರಾತ್ಯಕ್ಷಿಕೆ, ಸಂಜೆ 5 ಗಂಟೆಗೆ ಮಹಾರಥೋತ್ಸವ, ಸಂಜೆ 7ಕ್ಕೆ ಬಾಗಲಕೋಟೆ ಮಲ್ಲಣಾರ್ಯರ ಪ್ರವಚನ ಮಂಗಲೋತ್ಸವ. ಸಂಸದ ಪಿ.ಸಿ.ಗದ್ದಿಗೌಡ್ರ, ಸಿ.ಸಿ.ಪಾಟೀಲ ಭಾಗಿ.

ಜ. 8ರಂದು ಬೆಳಿಗ್ಗೆ 10ಕ್ಕೆ ರಕ್ತದಾನ ಶಿಬಿರ, ಸಂಜೆ 4 ಗಂಟೆಗೆ ಮಹಾಪೂಜೆ ಹಾಗೂ ರೊಟ್ಟಿ ಜಾತ್ರೆ. ಅವರಾದಿ ಶಿವಮೂರ್ತಿ ಶ್ರೀ, ಶಾಸಕ ಬಿ.ಆರ್‌.ಯಾವಗಲ್‌ ಭಾಗಿ. ಜ. 9ರಂದು ಲಘು ರಥೋತ್ಸವ, ಸಾಂಸ್ಕೃತಿಕ ವೈಭವ ನಡೆಯಲಿದೆ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳ ಬೇಕು ಎಂದು ಪ್ರಕಟಣೆ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.