ADVERTISEMENT

ಕಳಪೆ ಕಾಮಗಾರಿ: ಕಟ್ಟಡ ನಿರ್ಮಾಣ ಸ್ಥಗಿತಕ್ಕೆ ಆಗ್ರಹ

ಡಾ.ಮಲಿಕ್ಲಾರ್ಜುನ ಕುಂಬಾರ
Published 9 ಜನವರಿ 2018, 8:53 IST
Last Updated 9 ಜನವರಿ 2018, 8:53 IST

ಗಜೇಂದ್ರಗಡ: ನಿರ್ಮಾಣ ಹಂತದಲ್ಲಿರುವ ಮೂರಂತಸ್ಥಿನ ಕಟ್ಟಡ ಉದ್ಘಾಟನೆಗೂ ಮುನ್ನ ಬಿರುಕು ಬಿಟ್ಟಿರುವುದು, ಬಿರುಕು ಮುಚ್ಚಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಗುತ್ತಿಗೆದಾರರು, ಇದರ ಮಧ್ಯೆ ಕಟ್ಟಡ ಸಂಪೂರ್ಣ ಕಳಪೆಯಾಗಿದೆ ಎಂದು ಪ್ರತಿಭಟಿಸುತ್ತಿರುವ ಗ್ರಾಮಸ್ಥರು...

ಇದೆಲ್ಲ ಸಮೀಪದ ನೆಲ್ಲೂರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಉನ್ನತಿಕರಿಸಿದ ಪ್ರೌಢಶಾಲಾ ಕಟ್ಟಡದಲ್ಲಿ ಕಂಡು ಬಂದ ದೃಶ್ಯಗಳು. ಕಳೆದ ಐದು ವರ್ಷಗಳ ಹಿಂದೆ ಗ್ರಾಮದಲ್ಲಿ ಪ್ರೌಢಶಾಲೆ ನಿರ್ಮಿಸಲು ಆಗಿನ ಶಾಸಕ ಕಳಕಪ್ಪ ಬಂಡಿ ₹ 76.75 ಲಕ್ಷ ವೆಚ್ಚದಲ್ಲಿ ಮೂರು ಅಂತಸ್ಥಿನ ಕಟ್ಟಡಕ್ಕೆ ಮಂಜೂರಾತಿ ನೀಡಿದ್ದರು. ನವೆಂಬರ್ 2016 ರಿಂದ ಕಾಮಗಾರಿ ಪ್ರಾರಂಭವಾಗಿದ್ದು ಈಗ ಮುಗಿಯುವ ಹಂತಕ್ಕೆ ಬಂದಿದೆ.

ಕಟ್ಟಡ ಸಂಪೂರ್ಣ ಕಳಪೆ ಕಾಮಗಾರಿಯಿಂದ ಕೂಡಿದೆ, ಅಲ್ಲದೆ ಈ ಕಟ್ಟಡ ಪ್ರಾರಂಭವಾದಾಗಿನಿಂದ ಕಟ್ಟಡದ ಗುಣಮಟ್ಟದ ಕುರಿತು ಹಲವು ಬಾರಿ ಗ್ರಾಮಸ್ಥರು ಅಧಿಕಾರಿಗಳಿಗೆ ಗುತ್ತಿಗೆದಾರರಿಗೆ ತಿಳಿಸಿ, ಗುಣಮಟ್ಟದ ಕಾಮಗಾರಿ ಮಾಡುವಂತೆ ಪ್ರತಿಭಟಿಸಿದಾಗ ಎರಡು ಮೂರು ದಿನ ಕೆಲಸ ನಿಲ್ಲಿಸಿ ಮತ್ತದೆ ಕಾಮಗಾರಿ ನಡೆಸಿ ಇಂದು ಮುಗಿಸುವ ಹಂತಕ್ಕೆ ಬಂದಿದ್ದಾರೆ. ಆದರೆ ಕಟ್ಟಡದಲ್ಲಿ ಬಳಸಿರುವ ಮರಳು, ಸಿಮೆಂಟ್, ಸಿಮೆಂಟ್ ಇಟ್ಟಿಗೆಗಳು ಸಂಪೂರ್ಣ ಕಳಪೆಯಾಗಿವೆ.

ADVERTISEMENT

ಅಲ್ಲದೆ ಗ್ರಾಮದ ಕೆಲ ಪ್ರಭಾವಿಗಳ ಜೊತೆ ಗುತ್ತಿಗೆದಾರರು ಶಾಮಿಲಾಗಿ ಕಾಮಗಾರಿಗೆ ಬಳಸಬೇಕಿದ್ದ ಗುಣಮಟ್ಟದ ಕಚ್ಚಾ ಸಾಮಗ್ರಿಗಳನ್ನು ಬೆರೆಡೆ ಸಾಗಿಸಿದ್ದಾರೆ ಎಂದು ಗ್ರಾಮಸ್ಥರಾದ ಮಾಗುಂಡಯ್ಯ ನರಗುಂದ, ರಾಚನಗೌಡ ಗೌಡ್ರ, ರಾಮಪ್ಪ ತಳವಾರ, ಬಸವರಾಜ ಮೆಣಸಗಿ, ಫಕಿರಪ್ಪ ಲಮಾಣಿ ಕುಮಾರ ಲಮಾಣಿ, ಗೊಡಚಯ್ಯ ಹಿರೇಮಠ, ಶರಣಪ್ಪ ಮಾದರ, ಪಡಿಯಪ್ಪ ಮಾದರ, ರಾಮಪ್ಪ ಲಮಾಣಿ, ಯಲ್ಲಪ್ಪ ತೊಟದ ದೂರಿದ್ದಾರೆ.

ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಕಳಪೆ ಕಾಮಗಾರಿಯನ್ನು ಈಗ ತರಾತುರಿಯಲ್ಲಿ ಮುಗಿಸಿ ಉದ್ಘಾಟಿಸಿ ಕೈ ತೊಳೆದುಕೊಳ್ಳುವ ಭರದಲ್ಲಿ ಅಧಿಕಾರಿಗಳು, ಗುತ್ತಿಗೆದಾರರು ಇದ್ದಾರೆ. ಅಲ್ಲದೆ ಈ ಶಾಲೆಯನ್ನು ಗ್ರಾಮದ ತಗ್ಗು ಪ್ರದೇಶವಿರುವ ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗುತ್ತಿದೆ. ಕಾಮಗಾರಿ ಕಳಪೆಯಾಗಿದ್ದು, ಮಳೆಗಾಲದಲ್ಲಿ ಮೇಲಿರುವ ಕೆರೆಯ ಹೆಚ್ಚಾದ ನೀರು ಹಾಗೂ ನೂರಾರು ಎಕರೆ ಹೊಲದಲ್ಲಿನ ಅಪಾರ ಪ್ರಮಾಣದ ಮಳೆ ನೀರು ಇದೆ ಮಾರ್ಗವಾಗಿ ಹರಿಯುತ್ತದೆ. ಮುಂದೆ ಶಾಲೆಯಲ್ಲಿ ಮಕ್ಕಳು ಓದುವಾಗ ಏನಾದರೂ ಅವಘಡ ಸಂಭವಿಸದರೆ ಅದಕ್ಕೆ ಯಾರು ಹೊಣೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

‘ಈ ಕಾಮಗಾರಿಯನ್ನ ಪ್ರಾರಂಭಿಸುವಾಗ ಸಾರ್ವಜನಿಕರಿಗೆಲ್ಲ ಗ್ರಾಮಸಭೆಗಳಲ್ಲಿ ತಿಳಿಸಿ ಮಾಡಲಾಗಿದೆ. ಈಗ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು ಕಾಂಗ್ರೆಸ್‌ನವರು ಇದನ್ನು ಉದ್ಘಾಟನೆ ಮಾಡುತ್ತಾರೆ ಎಂಬ ಉದ್ದೇಶದಿಂದ ಈಗ ಬಿ.ಜೆ.ಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಕಾಮಗಾರಿಗಳ ಕುರಿತು ಎಲ್ಲವೂ ಸರಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಕಳಪೆಯಾಗಿರಬಹುದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಸರಿ ಮಾಡಿಸುವುದನ್ನು ಅದನ್ನು ಬಿಟ್ಟು ಕೇವಲ ಪ್ರತಿಭಟನೆ ಮಾಡುತ್ತಾರೆಂದರೆ ಇದು ರಾಜಕೀಯ ಪ್ರೇರಿತ’ ಎಂದು ಗ್ರಾಮದವರಾದ ಹನಮಂತಪ್ಪ ದೊಡ್ಡಮನಿ, ಶರಣಪ್ಪ ಕುರಟ್ಟಿ, ಈರಪ್ಪ ಮಾದರ ಹೇಳಿದರು.

‘ಈ ಕಾಮಗಾರಿಯನ್ನು ನಾಗಾರ್ಜುನ ಕನ್ಸಟ್ರಕ್ಸೆನ್ ಕಂಪನಿಯವರು ಮಾಡುತ್ತಿದ್ದಾರೆ. ಕಂಪನಿ ವತಿಯಿಂದ ಕೆಲ ಎಂಜಿನಿಯರ್‌ಗಳು ಮೊದಲು ಕಾಮಗಾರಿ ಪ್ರಾರಂಭಿಸಿ ಅರ್ಧ ಕೆಲಸ ಮುಗಿಸಿದ ಮೇಲೆ ಕಾರಣಾಂತರಗಳಿಂದ ಬೇರೆ ಎಂಜಿನಿಯರ್‌ಗಳು ಬಂದು ಕಾಮಗಾರಿ ಮುಂದುವರೆಸಿದ್ದರು. ಕಳೆದೆರಡು ತಿಂಗಳಿಂದ ಕಾಮಗಾರಿಯ ಗುಣಮಟ್ಟದ ಕುರಿತು ಹಲವು ಬಾರಿ ಎಂಜಿನಿಯರ್‌ಗಳಿಗೆ ತಿಳಿಸಿದ್ದೇನೆ. ಮೇಲಾಧಿಕಾರಿಗಳ ಗಮನಕ್ಕೂ ತಂದಿದ್ದೇನೆ’ ಎಂದು ಶಾಲೆಯ ಮುಖ್ಯಶಿಕ್ಷಕ ಎಂ.ಆರ್.ಎತ್ತಿನಮನಿ ಪ್ರಜಾವಾಣಿಗೆ ತಿಳಿಸಿದರು.

* * 

ಗಮನಕ್ಕೆ ತಂದರೆ ಕ್ರಮ

ಈ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಕಾಮಗಾರಿ ಕಳಪೆ ಆಗಿರುವುದಾದರೆ ಸ್ಥಳೀಯರು ಮನವಿ ಕೊಟ್ಟಲ್ಲಿ ಡಿ.ಡಿ.ಪಿ.ಐ ಅವರಿಗೆ ಪತ್ರ ಬರೆದು ಇದರ ಬಗ್ಗೆ ಕ್ರಮಕೈಗೊಳ್ಳಲು ತಿಳಿಸುತ್ತೇನೆ. ತಾಲೂಕಿನಲ್ಲಿ ನಾನು ಬರುವುದಕ್ಕಿಂತ ಮುಂಚೆ ಹಲವು ಕಟ್ಟಡ ಕಾಮಗಾರಿಗಳು ಕಳಪೆಯಾಗಿರುವುದು ಗಮನಕ್ಕೆ ಬಂದಿದೆ. ಕೆಲವನ್ನು ಬಂದ್ ಮಾಡಿಸಲಾಗಿದೆ. ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಅಧಿಕಾರಿಗಳು ಸೇರಿದಂತೆ ಸ್ಥಳೀಯರ, ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕರ ಜವಾಬ್ದಾರಿಯೂ ಇರುತ್ತದೆ ಎನ್ನುತ್ತಾರೆ ಬಿಇಒ ಎಂ.ನಂಜುಂಡಯ್ಯ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.