ADVERTISEMENT

ಅಂತೂ ಇಂತೂ ಬಸ್‌ ಬಂತು

ಪಶ್ಚಿಮಘಟ್ಟದ ಕಾಡಂಚಿನ ಗ್ರಾಮಗಳಿಗೆ ಬಸ್‌

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 10:15 IST
Last Updated 2 ಮಾರ್ಚ್ 2018, 10:15 IST
ಸಕಲೇಶಪುರದಿಂದ ಆಲುವಳ್ಳಿ– ಕಡಗರವಳ್ಳಿ ಗ್ರಾಮಗಳಿಗೆ ಗುರುವಾರ ಬಂದ ಬಸ್‌ ಅನ್ನು ಗ್ರಾಮಸ್ಥರು ಸ್ವಾಗತಿಸಿದ ಪರಿ
ಸಕಲೇಶಪುರದಿಂದ ಆಲುವಳ್ಳಿ– ಕಡಗರವಳ್ಳಿ ಗ್ರಾಮಗಳಿಗೆ ಗುರುವಾರ ಬಂದ ಬಸ್‌ ಅನ್ನು ಗ್ರಾಮಸ್ಥರು ಸ್ವಾಗತಿಸಿದ ಪರಿ   

ಸಕಲೇಶಪುರ (ಹಾಸನ ಜಿಲ್ಲೆ): ಗ್ರಾಮದಲ್ಲಿ ಮೊದಲ ಬಾರಿಗೆ ಬಸ್‌ ಓಡಾಡುವುದನ್ನು ನೋಡುವ ತವಕ. ಬಸ್‌ ಸ್ವಾಗತಿಸಲು ತಳಿರು ತೋರಣಗಳ ಸಿಂಗಾರ, ಆರತಿ ಎತ್ತಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ.

ಇದೇ ಮೊದಲ ಬಾರಿಗೆ ತಾಲ್ಲೂಕಿನ ಪಶ್ಚಿಮಘಟ್ಟದ ಕಾಡಂಚಿನಲ್ಲಿರುವ ಆಲುವಳ್ಳಿ– ಕಡಗರವಳ್ಳಿ ಗ್ರಾಮಕ್ಕೆ ಗುರುವಾರ ಬಂದ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ ಸ್ವಾಗತಿಸಲು ಇಡೀ ಗ್ರಾಮವೇ ಸಂಭ್ರಮದಿಂದ ಅಣಿಯಾಗಿತ್ತು.

ಬೆಳಿಗ್ಗೆ 8.30ಕ್ಕೆ ಸಕಲೇಶಪುರ ನಿಲ್ದಾಣದಿಂದ ಹೊರಟ ಬಸ್‌ಗೆ ಪೂಜೆ ಸಲ್ಲಿಸಲು ಗ್ರಾಮದಿಂದ ಸುಮಾರು 40ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಬಾಡಿಗೆ ವಾಹನಗಳಲ್ಲಿ ಪಟ್ಟಣಕ್ಕೆ ಬಂದಿದ್ದರು. ಮಧುವಣಗಿತ್ತಿಯಂತೆ ಬಸ್‌ಗೆ ಪುಷ್ಪಾಲಂಕಾರ ಮಾಡಿದರು. ರಸ್ತೆ ಉದ್ದಕ್ಕೂ ಟೇಪ್‌ ಕಟ್ಟಿ ಶಾಸಕ ಎಚ್‌.ಕೆ.ಕುಮಾರಸ್ವಾಮಿ ಅವರಿಂದ ಉದ್ಘಾಟಿಸಿದರು.

ADVERTISEMENT

ಆಲುವಳ್ಳಿ ಕಡಗರವಳ್ಳಿ ಗ್ರಾಮಗಳನ್ನು ತಲುಪುವ ಮಾರ್ಗದಲ್ಲಿ ಸುಮಾರು 20ಕ್ಕೂ ಹೆಚ್ಚು ಕಡೆ ಅಲ್ಲಲ್ಲಿ ಗ್ರಾಮಸ್ಥರು ಬಸ್‌ಗೆ ಪೂಜೆ ಸಲ್ಲಿಸಿ ಆರತಿ ಎತ್ತಿದರು. ಗ್ರಾಮಕ್ಕೆ ಬಸ್‌ ಬಂದಾಗ ಗ್ರಾಮಸ್ಥರ ಸಡಗರ ಸಂಭ್ರಮಕ್ಕೆ ಎಲ್ಲೆಯೇ ಇರಲಿಲ್ಲ.

ಆಲುವಳ್ಳಿ–ಕಡಗರವಳ್ಳಿ ಈ ಎರಡು ಗ್ರಾಮಗಳಲ್ಲಿ ಸುಮಾರು 400ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಪಟ್ಟಣದಿಂದ ಸುಮಾರು 17 ಕಿ.ಮೀ ದೂರದಲ್ಲಿ ಇರುವ ಈ ಗ್ರಾಮಗಳ ಜನರು ಹಿಂದಿನಿಂದಲೂ ರಸ್ತೆ, ಸಾರಿಗೆ, ಸೇತುವೆ, ವಿದ್ಯುತ್‌ ಎಲ್ಲ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದರು. ಈ ಗ್ರಾಮಗಳು ವಿದ್ಯುತ್‌ ಹಾಗೂ ಸೇತುವೆ ಕಂಡಿದ್ದೇ ದಶಕದ ಹಿಂದೆ.

ಶಾಲಾ– ಕಾಲೇಜುಗಳಿಗೆ, ಆಸ್ಪತ್ರೆಗಳಿಗೆ, ಹೊರ ಊರುಗಳಿಗೆ ಹೋಗಬೇಕಾದರೆ ಮಾರನಹಳ್ಳಿವರೆಗೆ 5 ಕಿ.ಮೀ ಕಾಲು ನಡಿಗೆಯಲ್ಲಿಯೇ ಹೋಗಿ ಬರಬೇಕು. ಈ ಗ್ರಾಮಗಳಿಗೆ ಸರಿಯಾದ ರಸ್ತೆ ಇಲ್ಲದೆ ಇದ್ದ ಕಾರಣಕ್ಕೆ ಸಾರಿಗೆ ವ್ಯವಸ್ಥೆ ಈ ತನಕ ಆಗಿರಲಿಲ್ಲ. ಇಚೆಗಷ್ಟೇ ಕಾಂಕ್ರೀಟ್‌ ರಸ್ತೆ ನಿರ್ಮಾಣಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.