ADVERTISEMENT

ನಾಗವಾರ ಗ್ರಾಮದಲ್ಲಿ ಆನೆ ಶಿಬಿರ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2017, 7:15 IST
Last Updated 1 ಸೆಪ್ಟೆಂಬರ್ 2017, 7:15 IST
ಆಲೂರು ತಾಲ್ಲೂಕಿನ ನಾಗವಾರ ಗ್ರಾಮದ ರಕ್ಷಿತಾರಣ್ಯದಲ್ಲಿ ಆನೆ ಶಿಬಿರ ಜಾಗಕ್ಕೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನತಿ ಶ್ರೀಧರ್ ಭೇಟಿ ನೀಡಿ ಪರಿಶೀಲಿಸಿದರು.
ಆಲೂರು ತಾಲ್ಲೂಕಿನ ನಾಗವಾರ ಗ್ರಾಮದ ರಕ್ಷಿತಾರಣ್ಯದಲ್ಲಿ ಆನೆ ಶಿಬಿರ ಜಾಗಕ್ಕೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನತಿ ಶ್ರೀಧರ್ ಭೇಟಿ ನೀಡಿ ಪರಿಶೀಲಿಸಿದರು.   

ಹಾಸನ: ಆಲ್ಲೂರು ತಾಲ್ಲೂಕಿನ ನಾಗವಾರ ಗ್ರಾಮದ ಹೇಮಾವತಿ ಹಿನ್ನೀರು ಸಮೀಪ ಆನೆ ಶಿಬಿರ ತೆರೆಯಲು ಅರಣ್ಯ ಇಲಾಖೆ ಮುಂದಾಗಿದೆ. ದೊಡ್ಡಬೆಟ್ಟ ರಕ್ಷಿತಾರಣ್ಯದಲ್ಲಿ ನೂರು ಎಕರೆ ಜಾಗ ಗುರುತಿಸಲಾಗಿದ್ದು, ಇದರಲ್ಲಿ 25 ಎಕರೆ ಪ್ರದೇಶದಲ್ಲಿ ಶಿಬಿರ ಆರಂಭಿಸಲಾಗುತ್ತಿದೆ. ಯೋಜನೆಗೆ ₹ 1.80 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ.

ಕೆಲ ದಿನಗಳ ಹಿಂದೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನತಿ ಶ್ರೀಧರ್‌, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಉಪ ಅರಣ್ಯ ಸಂಕ್ಷಣಾಧಿಕಾರಿಗಳ ತಂಡ ಸ್ಥಳ ಪರಿಶೀಲಿಸಿದ್ದು, ಶಿಬಿರ ಆರಂಭಿಸಲು ಒಪ್ಪಿಗೆಯನ್ನೂ ಸೂಚಿಸಿದೆ.

ದುಬಾರೆ, ತಿತಿಮತಿ, ಬಳ್ಳೆ, ಕೆ.ಗುಡಿ, ಬಂಡೀಪುರ ಆನೆ ಶಿಬಿರಗಳಿಂದ ಒಟ್ಟು ಆರು ಆನೆಗಳನ್ನು (ದಸರಾ ಆನೆ ಹೊರತುಪಡಿಸಿ) ಕೊಡುವಂತೆ ಮನವಿ ಸಲ್ಲಿಸಲಾಗಿದೆ.
ಆನೆಗಳೊಂದಿಗೆ ಮಾವುತ, ಕಾವಾಡಿ ಮತ್ತು ಅವರ ಕುಟುಂಬದವರಿಗೂ ತಾತ್ಕಾಲಿಕ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ ದುಬಾರೆ, ಸಕ್ಕರೆ ಬೈಲು ಮಾದರಿಯಲ್ಲಿ ಆನೆ ಸಫಾರಿಗೂ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್‌, ‘ಹಲವು ವರ್ಷಗಳಿಂದ ಈ ಭಾಗದಲ್ಲಿ ಆನೆ ಶಿಬಿರ ತೆರೆಯಬೇಕೆಂಬ ಬೇಡಿಕೆ ಇತ್ತು. ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆನೆ ಕ್ಯಾಂಪ್‌ ಆರಂಭಿಸಿದರೆ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರ ಜತೆಗೆ ಸ್ಥಳೀಯರಿಗೂ ಉದ್ಯೋಗಾವಕಾಶ ದೊರೆಯುತ್ತದೆ. ಸಾಕಾನೆಗಳನ್ನು ಬಳಸಿಕೊಂಡು ಪುಂಡಾನೆಗಳನ್ನು ಸೆರೆ ಹಿಡಿದು ಪಳಗಿಸಬಹುದು’ ಎಂದು ಹೇಳಿದರು.

‘ಅಲ್ಲದೆ, ದುಬಾರೆ, ಸಕ್ಕರೆ ಬೈಲು ಮಾದರಿಯಲ್ಲಿ ಶುಲ್ಕ ನಿಗದಿ ಪಡಿಸಿ ಆನೆ ಸಫಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಕಾಡಾನೆ ದಾಳಿಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಲು ಸಾಧ್ಯವಾಗುತ್ತದೆ. ಮಾವುತ ಮತ್ತು ಕಾವಾಡಿಗಳ ಕುಟುಂಬಕ್ಕೂ ಮೂಲ ಸೌಲಭ್ಯ ಕಲ್ಪಿಸಲಾಗುವುದು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.