ADVERTISEMENT

ನಿತ್ಯ 6 ಸಾವಿರ ಟನ್ ಆಹಾರ ಉತ್ಪಾದನೆ

ಪಶು ಆಹಾರ ಉತ್ಪಾದನೆ ಘಟಕ ಕಟ್ಟಡ ಕಾಮಗಾರಿಗೆ ಸಚಿವ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 10:54 IST
Last Updated 23 ಮಾರ್ಚ್ 2018, 10:54 IST

ಅರಕಲಗೂಡು: ರಾಜ್ಯದಲ್ಲೆ ಪ್ರಥಮ ಬಾರಿಗೆ ₹ 80 ಕೋಟಿ ವೆಚ್ಚದಲ್ಲಿ ನಿತ್ಯ 6 ಸಾವಿರ ಟನ್ ಪಶು ಆಹಾರ ಉತ್ಪಾದಿಸುವ ಘಟಕ ತೆರೆಯಲಾಗುತ್ತಿದ್ದು, ಇದರಿಂದ ಈ ಭಾಗದ ರೈತರಿಗೆ ಹಾಗೂ ನಿರುದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಎ.ಮಂಜು ತಿಳಿಸಿದರು.

ತಾಲ್ಲೂಕಿನ ಮೋಕಲಿ ಗ್ರಾಮದ ಬಳಿ 15 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ 300 ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯದ ಪಶು ಆಹಾರ ಉತ್ಪಾದನೆ ಘಟಕ ಕಾಮಗಾರಿಗೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಯಾವುದೇ ಕೈಗಾರಿಕೆಗಳು ಇಲ್ಲದ ತಾಲ್ಲೂಕಿನಲ್ಲಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ದೊರಕುವ ಜತೆಗೆ ಈ ಭಾಗದ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಮುಸುಕಿನ ಜೋಳದ ಬೆಳೆಗೆ ಉತ್ತಮ ಬೆಲೆ ದೊರೆತು ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಸಹಾಯಕವಾಗಲಿದೆ. ನನ್ನ ಬಹುದಿನಗಳ ಕನಸು ನನಸಾಗುತ್ತಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ADVERTISEMENT

‘ಪಶು ಆಹಾರ ಉತ್ಪಾದನೆಗಾಗಿ ಕೆಎಂಎಫ್‌ನಿಂದಲೇ ದೃಢೀಕೃತ ಜೋಳದ ಬಿತ್ತನೆ ಬೀಜ ವಿತರಿಸಲಾಗುವುದು. ಬೆಳೆದ ಉತ್ಪನ್ನವನ್ನು ಉತ್ತಮ ಬೆಲೆಗೆ ಖರೀದಿಸುವ ಕುರಿತು ರೈತರಿಗೆ ಖಾತರಿ ಸಹ ನೀಡಲಾಗುತ್ತದೆ. ನಂದಿನಿ ಗುರುತಿನ ಬ್ರಾಂಡ್ ಹೊಂದಿರುವ ಕಾರಣ ಪಶು ಆಹಾರದಲ್ಲಿ ಯಾವುದೇ ರೀತಿಯ ವ್ಯತ್ಯಾಸಗಳಿಗೆ ಅವಕಾಶ ಇರುವುದಿಲ್ಲ’ ಎಂದು ಹೇಳಿದರು.

‘ಪಶು ಆಹಾರ ಘಟಕದಲ್ಲಿ ಉತ್ಪಾದನೆಯಾಗುವ ಮೇವುಗಳನ್ನು ಕೋಳಿಗೆ ಆಹಾರವಾಗಿ ಬಳಸಲು ಸಾಧ್ಯವಿರುವ ಹಿನ್ನೆಲೆಯಲ್ಲಿ ಇಲ್ಲಿ ಕುಕ್ಕುಟ ಉದ್ಯಮ ಕೂಡ ಸ್ಥಾಪಿಸುವ ಆಶಯ ಹೊಂದಲಾಗಿದೆ. ಇದಕ್ಕಾಗಿ ಸರ್ಕಾರ ಈಗಾಗಲೇ ₹ 5 ಕೋಟಿ ಅನುದಾನ ಮಂಜೂರು ಮಾಡಿದೆ. ಈ ಜಾಗ ಕೈಗಾರಿಕಾ ಪ್ರದೇಶವಾಗಿ ಬೆಳವಣಿಗೆ ಹೊಂದುವ ಮೂಲಕ ರೈತಾಪಿ ವರ್ಗದ ಜನರಿಗೆ ಹೆಚ್ಚು ಲಾಭದಾಯಕವಾಗಲಿದೆ’ ಎಂದು ತಿಳಿಸಿದರು.

ಕೆಎಂಎಫ್ ನಿರ್ದೇಶಕ ಡಾ.ಹೆಗಡೆ ಮಾತನಾಡಿ, ‘ರೈತರಿಂದ ಖರೀದಿಸಿದ ಜೋಳ, ಹಿಂಡಿ ಪದಾರ್ಥಗಳನ್ನು ಅಗತ್ಯ ಪ್ರಮಾಣದಲ್ಲಿ ಬಳಸಿ ಸಮತೋಲನ ಪಶು ಆಹಾರ ಉತ್ಪಾದಿಸಲಾಗುವುದು. ಪಶುಗಳಿಂದ ಹೆಚ್ಚು ಹಾಲು ಕರೆಯಲು ಬೇಕಿರುವ ಪೌಷ್ಟಿಕಾಂಶಗಳನ್ನೆಲ್ಲ ಉತ್ಪಾದಿತ ಆಹಾರ ಹೊಂದಿರುತ್ತದೆ. 50 ಕೆ.ಜಿ ಬ್ಯಾಗ್ ಸಿದ್ಧಪಡಿಸಿ ಈ ಭಾಗದ ರೈತರಿಗೆ ಮಾರಾಟ ಮಾಡಲಾಗುವುದು. ಹೆಚ್ಚುವರಿ ಉಳಿಕೆ ಪಶು ಆಹಾರವನ್ನು ಕರಾವಳಿ ಭಾಗದ ಜಿಲ್ಲೆಗಳಿಗೂ ರವಾನಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಕೆ. ಸಿಂಹ, ಜಿಲ್ಲಾ ಅರಣ್ಯಾಧಿಕಾರಿ ಶಿವರಾಂ ಬಾಬು, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೆ.ಸಿ.ಲೋಕೇಶ್, ಎಚ್‌.ಎಸ್‌.ಮಂಜುನಾಥ್‌, ಉಗ್ರಾಣ ನಿಗಮದ ನಿರ್ದೇಶಕ ಕೀರ್ತಿರಾಜ್, ಸ್ಥಳೀಯ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮುತ್ತಿಗೆ ರಮೇಶ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ವೀರಾಜು, ಪುಟ್ಟರಾಜ್‌, ಮುಖಂಡರಾದ ಜಗದೀಶ್, ಆನಂದ್, ಕಾಂತರಾಜ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.