ADVERTISEMENT

ಭಾಷಾ ಪ್ರೇಮ ಬೆಳೆಸಲು ಸಲಹೆ

ಶಾಲಾ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದ ಎಂ.ಎ. ಗೋಪಾಲಸ್ವಾಮಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 9:49 IST
Last Updated 5 ಜನವರಿ 2017, 9:49 IST

ಹಾಸನ: ಇಂಗ್ಲಿಷ್ ಭಾಷೆಯ ಹಾವಳಿಯಿಂದ ವಿದ್ಯಾರ್ಥಿಗಳು ಮಾತೃ ಭಾಷೆಯನ್ನು ಮರೆಯುವ ಸಂದಿಗ್ಧ ಸ್ಥಿತಿ ನಿರ್ಮಾಣವಾಗಿದ್ದು, ಮಕ್ಕಳಲ್ಲಿ ಭಾಷಾ ಪ್ರೇಮ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಸಲಹೆ ನೀಡಿದರು. ನಗರ ಸಮೀಪದ ಕಂದಲಿಯ ಯಗಚಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ಕನ್ನಡ ಶಾಲೆಗಳು ಅವನತಿ ಹೊಂದುತ್ತಿರುವ ದಯನೀಯ ದಿನಗಳಲ್ಲಿ ಯಗಚಿ ಪ್ರೌಢ ಶಾಲೆಯು ಗಂಭೀರ ಸಾಧನೆಯತ್ತ ಸಾಗುತ್ತಿದೆ. ವಿಶಾಲವಾದ ಮೈದಾನ, ಗ್ರಂಥಾಲಯ ಮಕ್ಕಳ ಕಲಿಕೆಗೆ ಪೂರಕವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಕಾರ್ಯದರ್ಶಿ ತಿಮ್ಮಪ್ಪ ಮಾತನಾಡಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ 1982 ರಲ್ಲಿ ಕಟ್ಟಿದ ಈ ಸಂಸ್ಥೆ ಯಾವುದೇ ಹೆಚ್ಚುವರಿ ಶುಲ್ಕ ಪಡೆಯದೆ ವಿದ್ಯಾದಾನ ಮಾಡುತ್ತಿದೆ ಎಂದರು.

ಕಂದಲಿ ಕಾರ್ಪೋರೇಷನ್ ಬ್ಯಾಂಕ್ ವ್ಯವಸ್ಥಾಪಕ ಸತೀಶ್ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನೆರವಾಗುವ ನಿಟ್ಟಿನಲ್ಲಿ ಬ್ಯಾಂಕ್ ನೆರವು ನೀಡಲು ಬದ್ಧ ಎಂದು ಭರವಸೆ ನೀಡಿದರು. ವಿದ್ಯಾಸಂಸ್ಥೆ ನಿರ್ದೇಶಕ ಶಿವರಾಮ್, ರಾಮೇಗೌಡ, ರಾಮಕೃಷ್ಣ, ಶಿಕ್ಷಕ ಕೆ.ಮನೋಹರ್, ಎಸ್.ಆರ್. ಚಂದ್ರ ಕಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.