ADVERTISEMENT

ವಿವಿಧ ಬೇಡಿಕೆ; ಸಿಪಿಐ ಪ್ರತಿಭಟನೆ

ಸಾಲಮನ್ನಾ, ಉದ್ಯೋಗ, ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 7:48 IST
Last Updated 11 ಮಾರ್ಚ್ 2017, 7:48 IST
ವಿವಿಧ ಬೇಡಿಕೆ; ಸಿಪಿಐ ಪ್ರತಿಭಟನೆ
ವಿವಿಧ ಬೇಡಿಕೆ; ಸಿಪಿಐ ಪ್ರತಿಭಟನೆ   
ಹಾಸನ: ರಾಜ್ಯ ಬಟೆಟ್‌ನಲ್ಲಿ ರೈತರ ಸಾಲಮನ್ನಾ, ದುಡಿಯುವ ಕೈಗಳಿಗೆ ಉದ್ಯೋಗ, ಕನ್ನಡಿಗರಿಗೆ ಉದ್ಯೋಗ ದಲ್ಲಿ ಮೀಸಲಾತಿ ಹಾಗೂ ಕನಿಷ್ಠವೇತನ ನೀಡುವಂತೆ ಒತ್ತಾಯಿಸಿ ಸಿಪಿಐ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
 
ರಾಜ್ಯದಲ್ಲಿ ಹಿಂದೆಂದೂ ಕಂಡರಿ ಯದ ಬರ ಆವರಿಸಿದೆ. ಈಗಾಗಲೇ 176 ತಾಲ್ಲೂಕುಗಳ ಪೈಕಿ 160 ತಾಲ್ಲೂಕು ಬರಪೀಡಿತ ಎಂದು ಘೋಷಿಸಲಾಗಿದೆ. ಮುಂಗಾರು ವೈಪಲ್ಯದಿಂದ ₹ 17,500 ಕೋಟಿ ಹಾಗೂ ಹಿಂಗಾರು ವೈಪಲ್ಯ ದಿಂದ ₹ 7,160 ಕೋಟಿ ಬೆಳೆನಷ್ಟ  ಆಗಿದೆ. ಬರದಿಂದ 45 ಲಕ್ಷ ಟನ್‌ ಆಹಾ ರೋತ್ಪಾದನೆ ಕಂಠಿತವಾಗಿದೆ ಎಂದು ಸರ್ಕಾರವೇ ಅಂದಾಜು ಮಾಡಿದೆ. ಈಗಿದ್ದರೂ ರೈತರ ಸಾಲ ಮನ್ನಾ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
 
ಬ್ಯಾಂಕ್‌ ಮತ್ತು ಸಹಕಾರ ಸಂಘಗಳಲ್ಲಿ ರೈತರು ಪಡೆದಿರುವ ಸಾಲಮನ್ನಾ ಮಾಡಬೇಕು. ಬೆಳೆನಷ್ಟಕ್ಕೆ ಎಕರೆಗೆ ₹ 25 ಸಾವಿರ ಪರಿಹಾರ ನೀಡಬೇಕು. ಸಾಲ ಮನ್ನಾ ಹಾಗೂ ಬೆಳೆ ನಷ್ಟದ ಪರಿಹಾರದ ಒಟ್ಟು ಮೊತ್ತದ ಶೇ 50 ರಷ್ಟು ಕೇಂದ್ರಸರ್ಕಾರವು ವಿಶೇಷ ಅನುದಾನ ನೀಡಬೇಕು. ಈ ಬಗ್ಗೆ ಉಭಯ ಸದನಗಳಲ್ಲಿ ನಿರ್ಣಯ ಕೈಗೊಂಡು ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ಕೊಂಡೊಯ್ಯಬೇಕು ಎಂದು ಒತ್ತಾಯಿಸಿದರು.
 
ಕುಡಿಯುವ ನೀರು ಒದಗಿಸಲು ಮತ್ತು ಮೇವು ಕೇಂದ್ರ ತೆರೆಯಲು ಗ್ರಾಮ ಪಂಚಾಯಿತಿ, ಹೋಬಳಿಮಟ್ಟ ದಲ್ಲಿ ಜನಪ್ರತಿನಿಧಿಗಳು, ರೈತರು, ಸಂಘಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಳಗೊಂಡಂತೆ ಬರಗಾಲ ಕುಂದು ಕೊರತೆ ಉಸ್ತುವಾರಿ ಸಮಿತಿ ರಚಿಸಬೇಕು. ನಿರ್ದಿಷ್ಟ ನಿರಾವರಿ ಸೌಲಭ್ಯಗಳಿಲ್ಲದ ಚಿತ್ರದುರ್ಗ, ಕೋಲಾರ ಮತ್ತು ಹೈದರಾಬಾದ್‌ ಕರ್ನಾಟಕದ ಹಲವು ಪ್ರದೇಶ ಗುರುತಿಸಿ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯುವ ಕೈಗಳಿಗೆ ವರ್ಷವಿಡೀ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.
 
ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು. ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಸಮಿತಿ ವರದಿ ಕಾರ್ಯರೂಪಕ್ಕೆ ತರಬೇಕು. ಈ ಬಗ್ಗೆ ರಾಜಕೀಯ ಸಹಮತಕ್ಕೆ ಸರ್ವಪಕ್ಷ ಮತ್ತು ಸಂಘಟನೆಗಳ ಸಭೆ ಕರೆದು ಚರ್ಚಿಸಬೇಕು. ಕೇಂದ್ರದ ಸರ್ಕಾರಿ ನೌಕರರ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಹೊರಗುತ್ತಿಗೆ ಹಾಗೂ ಅಸಂಘಟಿತ ಕಾರ್ಮಿಕರಿಗೆ ಮಾಸಿಕ ₹ 18 ಸಾವಿರ ವೇತನ ಪಾವತಿಸಬೇಕು ಎಂದು ಆಗ್ರಹಿಸಿದರು. ಸಕಲೇಶಪುರ ತಾಲ್ಲೂಕು ಘಟಕದ ಕಾರ್ಯದರ್ಶಿ ಧರ್ಮರಾಜ್‌, ಸುಬ್ಬಯ್ಯ, ರಾಜೇಶ್‌, ರಂಗಸ್ವಾಮಿ ಇದ್ದರು.   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.