ADVERTISEMENT

ಅವಿಶ್ವಾಸಕ್ಕೆ ಸೋಲು: ಮೂಲ ಬಿಜೆಪಿಗರ ಮೇಲುಗೈ!

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 5:11 IST
Last Updated 16 ಸೆಪ್ಟೆಂಬರ್ 2017, 5:11 IST

ಹಾವೇರಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿಗೆ ಸಹಿ ಹಾಕಿದ್ದ ಸದಸ್ಯರೇ ಶುಕ್ರವಾರದ ಸಭೆಗೆ ಗೈರಾಗಿದ್ದು, ಗೊತ್ತುವಳಿಗೆ ಸೋಲುಂಟಾಗಿದೆ. ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಮುಂದಿನ ಆರು ತಿಂಗಳ ಕಾಲ ನಿರಾತಂಕವಾಗಿ ಮುಂದುವರಿಯಲಿದ್ದಾರೆ.

ಇಲ್ಲಿನ ಎಪಿಎಂಸಿಗೆ ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ತಲಾ 8 ಸದಸ್ಯರು ಆಯ್ಕೆಯಾಗಿದ್ದರು. ಅಧ್ಯಕ್ಷ ಗಾದಿಯ ಚುನಾವಣೆಯಲ್ಲಿ ಬಿಜೆಪಿಯ ಮಲ್ಲಿಕಾರ್ಜುನ ಹಾವೇರಿಗೆ ಅದೃಷ್ಟ ಒಲಿದಿತ್ತು. ಆದರೆ, ಸ್ವಪಕ್ಷೀಯ ಸದಸ್ಯರೇ ಕಾಂಗ್ರೆಸಿಗರ ಜೊತೆ ಸೇರಿ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಅವಿಶ್ವಾಸ ಗೊತ್ತುವಳಿ ಮಂಡನೆಯ ಸಭೆಯನ್ನು ಶುಕ್ರವಾರ ಕರೆಯಲಾಗಿತ್ತು.

‘ಈ ಸಭೆಗೆ ಒಬ್ಬರು ಸದಸ್ಯರೂ ಹಾಜರಾಗದ ಕಾರಣ ಅವಿಶ್ವಾಸ ಗೊತ್ತುವಳಿ ಅಂಗೀಕಾರವಾಗಿಲ್ಲ’ ಎಂದು ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಷಣ್ಮುಕಪ್ಪ ತಿಳಿಸಿದರು.
‘ಎಪಿಎಂಸಿ ಕಾಯಿದೆ ಪ್ರಕಾರ, ಒಂದು ಬಾರಿ ಅವಿಶ್ವಾಸ ಗೊತ್ತುವಳಿಯಲ್ಲಿ ಜಯಗಳಿಸಿದ ಅಧ್ಯಕ್ಷರ ವಿರುದ್ಧ, ಮುಂದಿನ ಆರು ತಿಂಗಳ ತನಕ ಅವಿಶ್ವಾಸ ಮಂಡಿಸುವಂತಿಲ್ಲ’ ಎಂದು ವಿವರಿಸಿದರು. ಗೊತ್ತುವಳಿಗೆ ಸೋಲುಂಟಾದ ಕುರಿತು ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಸಂತಸ ವ್ಯಕ್ತಪಡಿಸಿದರು.

ADVERTISEMENT

ಮೂಲ ಬಿಜೆಪಿ ಮೇಲುಗೈ: ಈ ಬೆಳವಣಿಗೆಯನ್ನು ಜಿಲ್ಲೆಯ ರಾಜಕೀಯ ವಲಯದಲ್ಲಿ ಮೂಲ ಬಿಜೆಪಿಗರ ಮೇಲುಗೈ ಎಂದೇ ವಿಶ್ಲೇಷಿಸಲಾಗಿದೆ. ಜಿಲ್ಲೆಯಲ್ಲಿ ಮೂಲ ಬಿಜೆಪಿ ಹಾಗೂ ಹಿಂದಿನ ‘ಕೆಜೆಪಿ’ ಬಣಗಳ ಮಧ್ಯದ ತಿಕ್ಕಾಟವು ಇನ್ನೂ ಬಗೆಹರಿದಿಲ್ಲ. ಹೀಗಾಗಿ ‘ಕೆಜೆಪಿ’ ಬಣದ ಮುಖಂಡರ ಆಶೀರ್ವಾದದಿಂದಾಗಿ ಸದಸ್ಯರು ಸ್ವಪಕ್ಷೀಯ ಅಧ್ಯಕ್ಷರ ವಿರುದ್ಧ ಗೊತ್ತುವಳಿ ಮಂಡಿಸಲು ಮುಂದಾಗಿದ್ದರು.

‘ಅಧ್ಯಕ್ಷರು ಪ್ರಜಾಸತ್ತಾತ್ಮಕವಾಗಿ ವರ್ತಿಸುತ್ತಿಲ್ಲ. ಪಕ್ಷದ ಸದಸ್ಯರ ಮಾತಿಗೇ ಬೆಲೆ ಕೊಡುತ್ತಿಲ್ಲ. ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ’ ಎಂದು ಆರೋಪಿಸಿದ್ದರು.
ಬೆಂಗಳೂರು ಸಭೆ:  ಆದರೆ, ಈ ನಡುವೆಯೇ ಬೆಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದ ಬಿಜೆಪಿಯ ಸಭೆಯಲ್ಲಿ ಹಾವೇರಿಯ ನಗರಸಭೆ ಹಾಗೂ ಎಪಿಎಂಸಿಯಲ್ಲಿನ ‘ಒಳ ಒಪ್ಪಂದ’ಗಳ ಕುರಿತು ಪ್ರಸ್ತಾವ ಬಂದಿತ್ತು.

ಕೆಲವು ಬಿಜೆಪಿ ನಾಯಕರ ‘ಒಳ ಒಪ್ಪಂದ’ಗಳ ಕಾರಣ ಜಿಲ್ಲೆಯಲ್ಲಿ ಕಾಂಗ್ರೆಸ್ ಅಧಿಕಾರ ಅನುಭವಿಸುತ್ತಿದೆ. ‘ಅದೇ ಕಾಂಗ್ರೆಸ್  ವಿರುದ್ಧ ಪ್ರತಿಭಟನೆ ನಡೆಸಿದರೆ ಜನ ನಂಬುತ್ತಾರೆಯೇ?’ ಎಂದು ಜಿಲ್ಲೆಯ ಪ್ರಮುಖರೊಬ್ಬರು ರಾಜ್ಯ ನಾಯಕತ್ವವನ್ನು ನೇರವಾಗಿ ಪ್ರಶ್ನಿಸಿದ್ದರು.

ಸಮನ್ವಯ ಸಮಿತಿ:
ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಮನ್ವಯತೆಗಾಗಿ ಶಾಸಕ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ್‌ ಉದಾಸಿ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಸೇರಿದಂತೆ ಪ್ರಮುಖರ ಸಮಿತಿಯೊಂದನ್ನು ರಾಜ್ಯ ಘಟಕ ನೇಮಿಸಿತ್ತು. ಈ ಸಮಿತಿ ನಿರ್ಧಾರ ಹಾಗೂ ಮುಂದಿನ ವರ್ಷ ಬರಲಿರುವ ವಿಧಾನಸಭೆಯ ಚುನಾವಣೆಯ ಕಾರಣ ಎಪಿಎಂಸಿಯಲ್ಲಿ ಅಧಿಕಾರ ಉಳಿಸಕೊಳ್ಳಬೇಕು ಎಂಬ ನಿರ್ಧಾರಕ್ಕೆ ಪಕ್ಷ ಬಂದಿತ್ತು.

‘ಈ ಎಲ್ಲ ಬೆಳವಣಿಗೆಗಳಿಂದ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಅಧಿಕಾರ ಉಳಿದುಕೊಂಡಿದೆ. ಆದರೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಪಕ್ಷಕ್ಕೆ ವರ್ಚಸ್ಸು ನೀಡುವ ಕಾರ್ಯಕ್ರಮ ಕೈಗೆತ್ತಿಕೊಳ್ಳುವ ಹೊಣೆ ಅವರ ಮೇಲಿದೆ’ ಎಂದು ಮುಖಂಡರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.