ADVERTISEMENT

ಜಾಕ್‌ವೆಲ್‌ ಬಳಿ ಹೂಳೆತ್ತಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 5:21 IST
Last Updated 17 ಏಪ್ರಿಲ್ 2017, 5:21 IST

ರಟ್ಟೀಹಳ್ಳಿ: ಇಲ್ಲಿಗೆ ಸಮೀಪದ ಭೈರನಪಾದದ ಬಳಿಯಿರುವ ಜಾಕ್‌ವೆಲ್‌ ಹೂಳು ತುಂಬಿದ್ದು, ಕುಡಿಯುವ ನೀರು ಸರಬರಾಜಿಗೆ ತೊಂದರೆಯಾಗಿದೆ.ಹೂಳು ತುಂಬಿದ ಪರಿಣಾಮ, ತುಂಗಭದ್ರೆಯಲ್ಲಿ ನೀರಿದ್ದರೂ ಬಹುಗ್ರಾಮ ನೀರು ಸರಬರಾಜು ಯೋಜನೆಗೆ ಒಳಪಟ್ಟಿರುವ ರಟ್ಟೀಹಳ್ಳಿ ಹಾಗೂ ನೆರೆಯ ರಾಣೆಬೆನ್ನೂರ ತಾಲ್ಲೂಕು ಸೇರಿದಂತೆ 46 ಗ್ರಾಮಗಳು ನೀರು ಸರಬರಾಜಿನಿಂದ ವಂಚಿತವಾಗಿದೆ.

ಶನಿವಾರ ಜಾಕ್‌ವೆಲ್‌ ಬಳಿ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಸದಸ್ಯ ಪ್ರಕಾಶ ಬನ್ನಿಕೋಡ, ‘ತಕ್ಷಣ ಜಾಕ್‌ವೆಲ್‌ ಬಳಿ ಹೂಳೆತ್ತಿ, ಯಂತ್ರ ಸರಿಪಡಿಸಿ ನೀರು ಸರಬರಾಜು ಮಾಡಬೇಕು. ಇಲ್ಲದಿದ್ದರೆ ಜಿಲ್ಲಾ ಕೇಂದ್ರ ದಲ್ಲಿರುವ ಗ್ರಾಮೀಣ ನೀರು ಸರಬರಾಜು ಇಲಾಖೆಗೆ ಮುತ್ತಿಗೆ ಹಾಕಲಾಗುವುದು’ ಎಂದು ಎಚ್ಚರಿಸಿದರು.
‘ಬಹುಗ್ರಾಮ ಯೋಜನೆಯಿಂದ ಗ್ರಾಮಗಳಿಗೆ ನೀರು ಸರಬರಾಜು ಆಗದ ವಿಷಯವನ್ನು ಅನೇಕ ಸಭೆಗಳಲ್ಲಿ ಪ್ರಸ್ತಾ ಪಿಸಲಾಗಿದೆ. ಆದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

ಕಡೂರ ತಾಲ್ಲೂಕು ಪಂಚಾಯ್ತಿ ಸದಸ್ಯ ರೇವಣೆಪ್ಪ ಎರಳ್ಳಿ ಮಾತನಾಡಿ, ‘ಮೂರು ತಿಂಗಳ ಹಿಂದೆ ನಾವೇ ಸ್ವತಃ ಜಾಕ್ವೆಲ್ ಬಳಿ ಹೂಳು ತೆಗೆಯುತ್ತಿದ್ದೇವು. ಆಗ ಬಂದಿದ್ದ ಅಧಿಕಾರಿಗಳು ಇನ್ನೊಂದು ವಾರದಲ್ಲಿ ಹೂಳು ತೆಗೆಸುವುದಾಗಿ ತಿಳಿಸಿದ್ದರು. ಆದರೆ ಇಂದಿಗೂ ತೆಗೆಯಲು ಕ್ರಮ ವಹಿಸಿಲ್ಲ’ ಎಂದು ಆರೋಪಿಸಿದರು. ಗ್ರಾಮ ಪಂಚಾಯ್ತಿ ಸದಸ್ಯ ನಟರಾಜ ನಂದೀಹಳ್ಳಿ, ರಮೇಶ ತುಮ್ಮಿನಕಟ್ಟಿ, ನಾಗರಾಜ ಬಾರ್ಕಿ, ಬಸವರಾಜ ಬ್ಯಾಡ ಗೌಡ್ರ, ತಿಮ್ಮಣ್ಣ ಮಾಜಿಗೌಡ್ರ, ರುದ್ರಗೌಡ ಕರೇಗೌಡ್ರ, ವೀರನಗೌಡ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.