ADVERTISEMENT

‘ಬ್ಯಾಡಗಿ ತಳಿ ಮೆಣಸಿನಕಾಯಿ ಎಲ್ಲಿ ಬೆಳೀತಾರೆ?’

ಬ್ಯಾಡಗಿ ಮಾರುಕಟ್ಟೆಯ ಮಾಹಿತಿ ಪಡೆದ ಸಚಿವ

​ಪ್ರಜಾವಾಣಿ ವಾರ್ತೆ
Published 12 ಮೇ 2017, 12:11 IST
Last Updated 12 ಮೇ 2017, 12:11 IST
ಬ್ಯಾಡಗಿ:ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಾರುಕಟ್ಟೆಗೆ ಗುರುವಾರ ಭೇಟಿ ನೀಡಿದ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಅಭಿವೃದ್ಧಿ ಸಚಿವ ಆರ್‌.ವಿ.ದೇಶಪಾಂಡೆ, ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದರು.
 
‘ಎಪಿಎಂಸಿಗಳ ಪೈಕಿ ದೇಶದಲ್ಲಿಯೇ ಮೊದಲ ಬಾರಿಗೆ 2010ರಲ್ಲಿ ಬ್ಯಾಡಗಿಯು ಹೊಸ ಮಾದರಿಯ ಇ–ಟೆಂಡರ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿತು. ಆ ಬಳಿಕ ದೇಶದ ಸುಮಾರು 10ಕ್ಕೂ ಹೆಚ್ಚು ಮಾರುಕಟ್ಟೆಗಳು ಇ–ಟೆಂಡರ್ ಪದ್ಧತಿಯನ್ನು ಅಳವಡಿಕೊಂಡಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ಗುರುಪ್ರಸಾದ್ ಅವರು ಸಚಿವರಿಗೆ ವಿವರ ನೀಡಿದರು. 
 
‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಒಟ್ಟು 94 ಪದಾರ್ಥಗಳನ್ನು ಅನುಮೋದಿಸಿದ್ದು, ಈ ಪೈಕಿ ಬ್ಯಾಡಗಿಯಲ್ಲಿ ಒಣ ಮೆಣಸಿನಕಾಯಿ ತಳಿಯ ವ್ಯಾಪಾರ ಮಾತ್ರ ನಡೆಯುತ್ತಿದೆ. ಇಲ್ಲಿ 2015–16ರಲ್ಲಿ 12 ಲಕ್ಷ  ಕ್ವಿಂಟಲ್ ಒಣ ಮೆಣಸಿನಕಾಯಿ ವ್ಯಾಪಾರ ನಡೆದಿತ್ತು.
 
ಇದು ಈ ತನಕ ಮಾರುಕಟ್ಟೆಯಲ್ಲಿ ಒಂದು ವರ್ಷದಲ್ಲಿ ನಡೆದ ಗರಿಷ್ಠ ವ್ಯಾಪಾರವಾಗಿದೆ. ಅಲ್ಲದೇ, ಕಳೆದ ವರ್ಷ ಒಂದೇ ದಿನ 2.65 ಲಕ್ಷ  ಚೀಲ ಒಣ ಮೆಣಸಿನಕಾಯಿ ಆವಕವಾಗಿದ್ದು, ಟೆಂಡರಿಂಗ್ ಕೂಡಾ ಅಂದೇ ನಡೆದಿದೆ’ ಎಂದರು.
 
‘ಇ–ಟೆಂಡರ್‌ನಿಂದ ವ್ಯಾಪಾರದಲ್ಲಿ ಪಾರದರ್ಶಕತೆ ಮತ್ತು ವೇಗ ಸಿಕ್ಕಿದೆ. ಹೀಗಾಗಿ ಈ ಮಾದರಿಯನ್ನು ಕರ್ನಾಟಕ ಮಾತ್ರವಲ್ಲ, ಆಂಧ್ರ ಪ್ರದೇಶದಲ್ಲಿಯೂ ಅನುಸರಿಸುತ್ತಾರೆ’ ಎಂದರು. 
 
‘ಬ್ಯಾಡಗಿಯಲ್ಲಿ ಒಂದು ಲಕ್ಷ ಚೀಲಗಳ ಸಾಮರ್ಥ್ಯದ ಸುಮಾರು 6 ಶೀತಲೀಕರಣ ಘಟಕ (ಕೋಲ್ಡ್‌ ಸ್ಟೋರೇಜ್‌) ಆರಂಭಿಸಲು ಅವಕಾಶ ಇದೆ’ ಎಂದರು.
‘ಬ್ಯಾಡಗಿ ತಳಿ ಮೆಣಸಿನಕಾಯಿ ಎಲ್ಲಿ ಬೆಳೆಯುತ್ತಾರೆ?’ ಎಂಬ ಸಚಿವರ ಪ್ರಶ್ನೆಗೆ, ‘ಬಳ್ಳಾರಿ, ರಾಯಚೂರು, ಯಾದಗಿರಿ, ಕುಂದಗೋಳ, ಗದಗದಲ್ಲಿ ಬೆಳೆದ ‘ಬ್ಯಾಡಗಿ ತಳಿ’ಯೇ ಹೆಚ್ಚಾಗಿ ಮಾರುಕಟ್ಟೆಗೆ ಬರುತ್ತದೆ. ಅಲ್ಲದೇ, ಗುಂಟೂರು ತಳಿಗೆ ಬೆಲೆ ಕಡಿಮೆ, ಬ್ಯಾಡಗಿ ತಳಿಗೆ ಬೆಲೆ ಜಾಸ್ತಿ, ಬ್ಯಾಡಗಿಯಲ್ಲಿ ಡಬ್ಬಿ ಮತ್ತು ಕಡ್ಡಿ ಹಾಗೂ ರ್‍ಯಾಲಿಸ್ ಎಂಬ ತಳಿಗಳಿವೆ’ ಎಂದು ಕಾರ್ಯದರ್ಶಿಗಳು ಉತ್ತರಿಸಿದರು. 
 
‘ಇಲ್ಲಿನ ವ್ಯವಸ್ಥೆ, ತೂಕದ ಎಲೆಕ್ಟ್ರಾನಿಕ್‌ ಮೆಷಿನ್, ಮಾರುಕಟ್ಟೆ, ದೊರೆಯುವ ಬೆಲೆಯನ್ನು ಗಮನಿಸಿಕೊಂಡು ರೈತರು ಇಲ್ಲಿಗೆ ಒಣ ಮೆಣಸಿನಕಾಯಿ ತರುತ್ತಾರೆ. ಇಲ್ಲಿ ಕ್ವಿಂಟಲ್ ಒಣಮೆಣಸಿನಕಾಯಿಗೆ ಸುಮಾರು ₹400ರಿಂದ ₹14 ಸಾವಿರ ತನಕ ಬೆಲೆ  ಇದೆ. ಒಮ್ಮೆ ಗರಿಷ್ಠ ದರ ₹29 ಸಾವಿರಕ್ಕೆ ಹೋಗಿತ್ತು’ ಎಂದರು 
 
‘ಇಲ್ಲಿ 5 ಒಣ ಮೆಣಸಿನಕಾಯಿ ಪುಡಿ ಮಾಡುವ ಘಟಕಗಳಿವೆ. ಒಣ ಮೆಣಸಿನ ಕಾಯಿ ಹಾಗೂ ಮೆಣಸಿನ ಪುಡಿ ರಫ್ತು ಆಗುತ್ತದೆ. ಬ್ಯಾಡಗಿ ತಳಿಯನ್ನು ಬಣ್ಣ, ಮಸಾಲಾ, ಲಿಫ್ಟಿಕ್ ಮತ್ತಿತರರ ತಯಾ ರಿಗೆ ಬಳಸುತ್ತಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.