ADVERTISEMENT

ಹೆಚ್ಚುವರಿ ಡೊನೇಷನ್ ವಿರುದ್ಧ ಕ್ರಮ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 9:44 IST
Last Updated 20 ಏಪ್ರಿಲ್ 2017, 9:44 IST

ಹಾವೇರಿ: ‘ಕರ್ನಾಟಕ ಶಿಕ್ಷಣ ಕಾಯಿದೆ ನಿಯಮಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕು. ಅನಧಿಕೃತವಾಗಿ ಹೆಚ್ಚುವರಿ ಡೊನೇಷನ್ ವಸೂಲಿ ಮಾಡಬಾರದು’ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ಎಚ್ಚರಿಕೆ ನೀಡಿದರು.ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ಖಾಸಗಿ ಶಿಕ್ಷಣ ಸಂಸ್ಥೆಗಳ, ಪೋಷಕರ ಹಾಗೂ ಡೊನೇಷನ್ ಹಾವಳಿ ವಿರುದ್ಧ ಹೋರಾಡುತ್ತಿರುವ ಎಸ್ಎಫ್‌ಐ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಕರ್ನಾಟಕ ಶಿಕ್ಷಣ ಕಾಯಿದೆಯ ನಿಯಮಗಳ ಪ್ರಕಾರ ನಿಗದಿತ ವಂತಿಗೆ ಪಡೆಯಲು ಅವಕಾಶವಿದೆ. ಆದರೆ, ನಿಯಮ ಮೀರಿ ಹೆಚ್ಚಿಗೆ ವಂತಿಗೆ ಪಡೆ­ಯಬಾರದು. ವಿದ್ಯಾರ್ಥಿಗಳಿಗೆ ಮಾನಸಿಕ ಕಿರುಕುಳ ನೀಡಬಾರದು, ಪೋಷಕರಿಗೆ ಒತ್ತಡ ಹೇರಬಾರದು’ ಎಂದರು.‘ಪ್ರವೇಶಾತಿ ಸಂದರ್ಭದಲ್ಲಿ ವಿದ್ಯಾರ್ಥಿ ಹಾಗೂ ಪೋಷಕರಿಗೆ ಸಂದ­ರ್ಶನ, ಪರೀಕ್ಷೆಗಳನ್ನು ನಡೆಸಬಾ­ರದು, ಲಭ್ಯ ಸೀಟುಗಳು ಹಾಗೂ ಪರಿಶಿಷ್ಟ, ಅಲ್ಪಸಂಖ್ಯಾತರ ಹಾಗೂ ಇತರ ವಿದ್ಯಾರ್ಥಿಗಳ ಮೀಸಲಾತಿ ಸೀಟುಗಳ ಬಗ್ಗೆ ಮಾಹಿತಿ ಫಲಕದಲ್ಲಿ ಹಾಕಬೇಕು’ ಎಂದರು. ‘ನಿಯಮ ಮೀರುವ ಖಾಸಗಿ ಶಿಕ್ಷಣ ಸಂಸ್ಥೆಗೆ ₹ 25 ಸಾವಿರ ದಂಡ, ಎರಡನೇ ಬಾರಿ ₹ 50 ಸಾವಿರ ತನಕ ದಂಡ ವಿಧಿಸಲಾಗುವುದು. ಖಾಸಗಿ ಶಾಲೆಗಳ ಶಿಕ್ಷಕರು ಹಾಗೂ ಸಿಬ್ಬಂದಿಗೆ ಬ್ಯಾಂಕ್ ಖಾತೆ ಮೂಲಕವೇ ಸಂಬಳ ಜಮಾ ಮಾಡಬೇಕು. ಮಕ್ಕಳ ರಕ್ಷಣೆ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಕಡಿಮೆ ಅಂಕ ಗಳಿಸಿದ ವಿದ್ಯಾ­ರ್ಥಿಗಳ ಬಗ್ಗೆ ಹೆಚ್ಚು ಗಮನ ವಹಿಸಬೇಕು’ ಎಂದೂ ಅವರು ತಿಳಿಸಿದರು. ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಸ ಎಂ. ಮಾತನಾಡಿ, ‘ಕರ್ನಾಟಕ ಶಿಕ್ಷಣ ಕಾಯಿದೆ ೧೯೮೩ರ ಪ್ರಕಾರ ಶಾಲೆಯ ಗೇಟಿನ ಮುಂದೆ ಸೌಲಭ್ಯಗಳು, ಶುಲ್ಕಗಳ ಮಾಹಿತಿ, ಶಿಕ್ಷಕರ ಮಾಹಿತಿಯನ್ನು ಶಿಕ್ಷಣ ಸಂಸ್ಥೆಗಳು ಬ್ಯಾನರ್‌ನಲ್ಲಿ ಹಾಕಬೇಕು. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸುತ್ತೋಲೆ ಹೊರ­ಡಿಸಿದ್ದರೂ ಪಾಲಿಸುತ್ತಿಲ್ಲ. ನಿರ್ಲಕ್ಷ್ಯ ವಹಿಸುವ ಶಿಕ್ಷಣ ಸಂಸ್ಥೆಗಳು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳ­ಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಜಿಲ್ಲಾ ಕೇಂದ್ರಲ್ಲಿ ₹ 10 ಸಾವಿರದಿಂದ ₹60 ಸಾವಿರ ತನಕ ಡೊನೇಷನ್‌ ವಸೂಲು ಮಾಡ­ಲಾಗುತ್ತಿದೆ. ಆದರೆ, ಯಾವುದೇ ರಸೀದಿಗಳನ್ನು ನೀಡುತ್ತಿಲ್ಲ’ ಎಂದು ಆರೋಪಿಸಿದರು. ‘ಶುಲ್ಕದ ವಿವರಗಳನ್ನು ಕರಪತ್ರ, ಜಾಹೀರಾತು ಮೂಲಕ ಜನರಿಗೆ ತಿಳಿಸಬೇಕು’ ಎಂದು ಕಾಯಿದೆಯಲ್ಲಿ ಇದೆ. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲೆಯ ಹೆಸರಿನ ಪ್ರಚಾರ ಮಾಡುತ್ತವೆಯೇ ಹೊರತು, ಶುಲ್ಕದ ಕುರಿತು ಮಾಹಿತಿ ನೀಡುವುದಿಲ್ಲ. ಅದಕ್ಕಾಗಿ ಪ್ರತಿ ತಿಂಗಳು ಖಾಸಗಿ ಶಾಲೆಗಳ ಬ್ಯಾಂಕ್ ಖಾತೆಯನ್ನು ಪರಿಶೀಲಿ­ಸಬೇಕು’ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಎಸ್‌ಎಫ್‌ಐ ಮುಖಂಡರಾದ ರೇಣುಕಾ ಕಹಾರ ಮಾತನಾಡಿ, ‘ಸರ್ಕಾರದ ಆದೇಶದ ಮೊದಲೇ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರವೇಶ ಆರಂಭಿಸಿವೆ. ಆದರೆ, ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಪ್ರವೇಶಾತಿ ಒಂದೇ ಬಾರಿ ಆರಂಭವಾಗಬೇಕು. ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ಸಭೆ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಬೇಕು’ ಎಂದು ಒತ್ತಾಯಿಸಿದರು.ಜಿಲ್ಲಾ ಪಂಚಾಯ್ತಿ ಸಿಇಓ ಕೆ.ಬಿ.ಆಂಜನಪ್ಪ, ಡಿಡಿಪಿಐ ಶಿವನಗೌಡ ಪಾಟೀಲ, ಪೋಷಕರ ಒಕ್ಕೂಟದ ಮುಖಂಡ ಜಿ.ಎ.ಹಿರೇಮಠ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.