ADVERTISEMENT

ಗುಲಬರ್ಗಾ ವಿವಿಯಲ್ಲಿ ಮತ ಎಣಿಕೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 11:30 IST
Last Updated 13 ಏಪ್ರಿಲ್ 2018, 11:30 IST

ಕಲಬುರ್ಗಿ: ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಮತ ಎಣಿಕೆ ಇಲ್ಲಿಯ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ಜಿಲ್ಲಾ ಚುನಾವಣಾಧಿಕಾರಿ ಆರ್‌. ವೆಂಕಟೇಶಕುಮಾರ್‌ ಅವರು ಗುರುವಾರ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಗಣಿತ ವಿಭಾಗದಲ್ಲಿ ಅಫಜಲಪುರ, ಸಸ್ಯಶಾಸ್ತ್ರ ವಿಭಾಗದಲ್ಲಿ ಚಿಂಚೋಳಿ, ಒಳಾಂಗಣ ಕ್ರೀಡಾಂಗಣದಲ್ಲಿ ಚಿತ್ತಾಪುರ ಮತ್ತು ಸೇಡಂ, ಕನ್ನಡ ವಿಭಾಗದಲ್ಲಿ ಕಲಬುರ್ಗಿ ಉತ್ತರ ಮತ್ತು ದಕ್ಷಿಣ, ಪರೀಕ್ಷಾಂಗ ವಿಭಾಗದಲ್ಲಿ ಕಲಬುರ್ಗಿ ಗ್ರಾಮೀಣ ಮತ್ತು ಜೇವರ್ಗಿ, ಪರೀಕ್ಷಾ ಭವನದಲ್ಲಿ ಆಳಂದ ಮತಕ್ಷೇತ್ರದ ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

ಪ್ರಾಣಿಶಾಸ್ತ್ರ ವಿಭಾಗದಲ್ಲಿ ಮಾಧ್ಯಮ ಕೇಂದ್ರ ಸ್ಥಾಪಿಸಿ ಎಣಿಕೆಯ ಪ್ರತಿ ಸುತ್ತಿನ ಫಲಿತಾಂಶ ಹಾಗೂ ರಾಜ್ಯದ ಫಲಿತಾಂಶ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು. ಕಂಪ್ಯೂಟರ್‌, ಇಂಟರ್‌ನೆಟ್‌ ಮತ್ತು ವೈಫೈ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದರು.

ADVERTISEMENT

ಮತದಾನದ ನಂತರ ಮತಯಂತ್ರ ಹಾಗೂ ವಿ.ವಿ. ಪ್ಯಾಟ್ ಯಂತ್ರ ಸಂಗ್ರಹಿಸಲು ಪ್ರತಿ ಮತಕ್ಷೇತ್ರಗಳಿಗೆ ತಲಾ ಮೂರು ಭದ್ರತಾ ಕೋಣೆಗಳನ್ನು ಗುರುತಿಸಲಾಗಿದೆ. ಪ್ರತಿ ಮತ ಎಣಿಕೆ ಕೇಂದ್ರಗಳ ಹತ್ತಿರ ಅಗ್ನಿಶಾಮಕ ದಳ ಹಾಗೂ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ ಮಾತನಾಡಿ, ಗುಲಬರ್ಗಾ ವಿಶ್ವವಿದ್ಯಾಲದ ಮುಖ್ಯ ಪ್ರವೇಶದ್ವಾರ ಹೊರತುಪಡಿಸಿ ಆವರಣ ಗೋಡೆಯ ಎಲ್ಲ ದ್ವಾರಗಳನ್ನು ಮುಚ್ಚಲಾಗುವುದು. ವಿಶ್ವವಿದ್ಯಾಲಯದ ಮುಖ್ಯ ಪ್ರವೇಶ ದ್ವಾರದಿಂದ ಏಜೆಂಟರು ಮತ್ತು ಸಿಬ್ಬಂದಿಗೆ ಮತ ಎಣಿಕೆ ಕೇಂದ್ರಗಳಿಗೆ ಹೋಗಲು ಬಸ್‌ಗಳ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತ ಪಿ.ರಘುನಂದನಮೂರ್ತಿ, ಉಪ ವಿಭಾಗಾಧಿಕಾರಿ ಎನ್.ಆರ್. ಉಮೇಶಚಂದ್ರ, ಕುಲಸಚಿವ ಪ್ರೊ. ದಯಾನಂದ ಅಗಸರ, ಚುನಾವಣಾ ತಹಶೀಲ್ದಾರ್‌ ಪ್ರಕಾಶ ಚಿಂಚೋಳಿಕರ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಜೀಜುದ್ದೀನ್ ಇದ್ದರು.

16ರಂದು ತರಬೇತಿ

ರಾಜಕೀಯ ಪಕ್ಷಗಳಿಗೆ ಏಪ್ರಿಲ್ 16 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇವಿಎಂ, ವಿವಿ ಪ್ಯಾಟ್ ಕುರಿತು ಅರಿವು ಹಾಗೂ ಐಟಿ ಅಪ್ಲಿಕೇಶನ್ಸ್ ಕುರಿತು ತರಬೇತಿ ಆಯೋಜಿಸಲಾಗಿದೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.