ADVERTISEMENT

ಗೋಗಿ ಸಾಮಾಜಿಕ ಸೇವೆ ಶ್ಲಾಘನೀಯ: ಸಿದ್ಧಬಸವ ಕಬೀರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 10:58 IST
Last Updated 31 ಡಿಸೆಂಬರ್ 2017, 10:58 IST

ಜೇವರ್ಗಿ: ತಾಲ್ಲೂಕಿನ ಸರಳ, ಸಜ್ಜನಿಕೆ ರಾಜಕಾರಣಿ ಅಶೋಕ ಸಾಹು ಗೋಗಿ ಅವರ ಸಾಮಾಜಿಕ ಸೇವೆ ಅವಿಸ್ಮರಣೀಯ. ಅವರು ತಾಲ್ಲೂಕಿನ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್ ವಿತರಿಸಿದ್ದಾರೆ ಎಂದು ಚಿಗರಳ್ಳಿ ಮರುಳಶಂಕರ ಗುರುಪೀಠದ ಸಿದ್ಧಬಸವ ಕಬೀರ್ ಸ್ವಾಮೀಜಿ ಹೇಳಿದರು.

ಬುಧವಾರ ತಾಲ್ಲೂಕಿನ ಯಡ್ರಾಮಿ ಪಟ್ಟಣದಲ್ಲಿ ಆಯೋಜಿಸಿದ್ದ ಅಶೋಕ ಸಾಹು ಗೋಗಿ ಅಭಿಮಾನಿಗಳ ಸಂಘ ವಲಯ ಘಟಕದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

‘ಯಾವುದೇ ಪ್ರತಿಫಲ ಬಯಸದೇ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಆ ವ್ಯಕ್ತಿಯ ಹೆಸರು ಬೆಳಕಿಗೆ ಬರುತ್ತದೆ. ಅಶೋಕ ಸಾಹು ಗೋಗಿ ಅವರು ಜೇವರ್ಗಿ ಪಟ್ಟಣದಲ್ಲಿ ಅನೇಕ ಬಾರಿ ರಕ್ತದಾನ ಶಿಬಿರ ನಡೆಸಿದ್ದಾರೆ. ಇದಲ್ಲದೇ ಅನೇಕ ಜನಪರ, ರೈತಪರ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಗೋಗಿ ಅವರು ಜನಪರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಹೊಂದಿದ್ದಾರೆ’ ಎಂದು ಸ್ವಾಮೀಜಿ ತಿಳಿಸಿದರು.

ADVERTISEMENT

ಯಡ್ರಾಮಿ ವಿರಕ್ತಮಠದ ಸಿದ್ಧರಾಮ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಶೋಕ ಸಾಹು ಗೋಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಸುರೇಶ ಡಂಬಳ, ಈರಣ್ಣ ಸುಂಕದ, ಜಮೀರ್ ಪಟೇಲ್ ಚಿಂಚೋಳಿ, ಗೊಲ್ಲಾಳಪ್ಪ ಡೋಣಿ, ಇಮಾಮ್ ಖಾಸೀಮ, ಪ್ರಭುದೇವ್ ಜವಳಗಿ, ಹಯ್ಯಾಳಪ್ಪ ಗಂಗಾಕರ್, ದಸ್ತಗೀರ್ ಕಾಚಾಪುರ, ಷಂಶುದ್ದೀನ್ ಸಾಬ್, ದಸ್ತಗೀರ್ ಸಾಬ್ ಚೌಧರಿ, ಕಾಶಿನಾಥಗೌಡ ಮಾಗಣಗೇರಿ, ಅಶೋಕ ಸುಬೇದಾರ್, ಮಲ್ಲಿಕಾರ್ಜುನ ಹುಗ್ಗಿ, ವಾಜೀದ್ ಖಾನ್ ನಾಡಗೌಡ, ಮಾಳಿಂಗರಾಯ ಕರಗೊಂಡ ಸೇರಿದಂತೆ ಅಶೋಕ ಸಾಹು ಗೋಗಿ ಅಭಿಮಾನಿಗಳ ಸಂಘ ಯಡ್ರಾಮಿ ವಲಯ ಘಟಕದ ಪದಾಧಿಕಾರಿಗಳು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.