ADVERTISEMENT

ಶಾಂತಿಗೆ ಮಾದರಿ ನೀಮಾ ಹೊಸಳ್ಳಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 6:11 IST
Last Updated 10 ಸೆಪ್ಟೆಂಬರ್ 2017, 6:11 IST
ಚಿಂಚೋಳಿ ತಾಲ್ಲೂಕು ನೀಮಾ ಹೊಸಳ್ಳಿ ಗ್ರಾಮದ ಪ್ರವೇಶದಲ್ಲಿರುವ ಚಿಸ್ತಿ ಸಾಹೇಬರ ದರ್ಗಾ ಹಾಗೂ ಗ್ರಾಮದ ರಸ್ತೆ
ಚಿಂಚೋಳಿ ತಾಲ್ಲೂಕು ನೀಮಾ ಹೊಸಳ್ಳಿ ಗ್ರಾಮದ ಪ್ರವೇಶದಲ್ಲಿರುವ ಚಿಸ್ತಿ ಸಾಹೇಬರ ದರ್ಗಾ ಹಾಗೂ ಗ್ರಾಮದ ರಸ್ತೆ   

ಚಿಂಚೋಳಿ: ಇದೊಂದು ಚಾರಿತ್ರಿಕ ಮಹತ್ವದ ಗ್ರಾಮ. ಇಸ್ಲಾಂ ಧರ್ಮದ ಸೂಫಿಗಳ ಮೇಲೆ ಇಲ್ಲಿನ ಜನರು ಇಟ್ಟಿರುವ ನಂಬಿಕೆಯ ಪ್ರತೀಕವಾಗಿ ತಾಲ್ಲೂಕಿನ ನೀಮಾ ಹೊಸಳ್ಳಿ ಗ್ರಾಮದಲ್ಲಿ ಮದ್ಯ ಮಾರಾಟ ಇಲ್ಲ. ಇದರಿಂದ ಇಲ್ಲಿ ಕುಡುಕರ ಹಾವಳಿಗೆ ಅವಕಾಶ ಇಲ್ಲದಂತಾಗಿದೆ.

ಸುಮಾರು 250ರಿಂದ 300 ಮನೆಗಳಿರುವ ಗ್ರಾಮದಲ್ಲಿ 50ರಿಂದ 60 ಮನೆಗಳು ಹಿಂದೂಗಳಿಗೆ ಸೇರಿವೆ. ಉಳಿದ ಮನೆಗಳು ಮುಸ್ಲಿಮರದ್ದಾಗಿವೆ. ಮದ್ಯ, ಜೂಜು ಸೇರಿದಂತೆ ಕೆಟ್ಟ ಚಟುವಟಿಕೆಗಳಿಗೆ ಇಲ್ಲಿ ಆಸ್ಪದವಿಲ್ಲ. ಗ್ರಾಮಸ್ಥರು ಕಲಬುರ್ಗಿಯ ಖಾಜಾ ಬಂದಾನವಾಜ್ ಅವರ ವಂಶಸ್ಥರಾದ ‘ಹಜ್ರತ್ ಫಸಿ ಉಲ್ಲಾ ಹಸ್ನಿ ಉಲ್‌ ಹುಸೇನಿ’ ಅವರ ಮೇಲಿಟ್ಟುವ ನಂಬಿಕೆಯೇ ಇದಕ್ಕೆ ಕಾರಣ.

ಗೌಡನಹಳ್ಳಿಯ ಸೀಮೆ ದಾಟಿ ವ್ಯಕ್ತಿಯೊಬ್ಬ ಮಡಿಕೆಯಲ್ಲಿ ಸೇಂದಿ ಮಾರಾಟ ಮಾಡಲು ಬಂದಾಗ ಜನರು ಅದನ್ನು ಧ್ವಂಸಗೊಳಿಸಿದ್ದರು. 1996ರಲ್ಲಿ ವ್ಯಕ್ತಿಯೊಬ್ಬ ಸಾರಾಯಿ ಪಾಕೀಟ್‌ ಮಾರಾಟಕ್ಕಾಗಿ ಊರ ಹೊರಗಡೆ ಗುಡಿಸಲು ಹಾಕಿ ಒಂದು ದಿನ ವ್ಯಾಪಾರ ನಡೆಸಿದ್ದಾನೆ. ಆದರೆ, ಅದೇ ದಿನ ರಾತ್ರಿ ಗ್ರಾಮಸ್ಥರು ಆ ಗುಡಿಸಲು ಸುಟ್ಟು
ಹಾಕಿದ್ದರು.

ADVERTISEMENT

‘ನೆರೆಯ ದೇಗಲಮಡಿಯ ಸೀಮೆಯಲ್ಲಿ ಒಂದು ದಿನ ಮದ್ಯ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿತ್ತು. ಇದನ್ನು ತಿಳಿದು ಹೋದ ಜನರು ಮದ್ಯದ ಬಾಟಲಿ ವಶಕ್ಕೆ ಪಡೆದು ಹಾಳು ಬಾವಿಗೆ ಎಸೆದು ಅದರ ಮೇಲೆ ಕಲ್ಲು ಬಂಡೆ ಹಾಕಿದರು’ ಎಂದು ಮೋದಿನಸಾಬ್‌ ದಸ್ತಾಪುರವಾಲೆ ಮತ್ತು ಗೂಡುಸಾಬ್ ಪಟೇಲ್‌ವಾಲೆ ಹೇಳುತ್ತಾರೆ.
ಗೌಡನಹಳ್ಳಿ ಹಿಂದಿನಿಂದಲೂ ಸೇಂದಿಗೆ ಪ್ರಸಿದ್ಧವಾಗಿತ್ತು. ಆದರೂ ಇದಕ್ಕೆ ಗ್ರಾಮದಲ್ಲಿ ಮಾತ್ರ ಸ್ಥಾನ ಸಿಕ್ಕಿಲ್ಲ.

ಹಿಂದೂ ಮುಸ್ಲಿಮರೆಂಬ ಭೇದ ಎಣಿಸದೇ ಫಸಿ ಉಲ್ಲಾ ಹುಸೇನಿ ಅವರು ನೀಮಾ ಹೊಸಳ್ಳಿಯಲ್ಲಿ ಹಿಂದೂಗಳಿಗೆ ಭೂಮಿ ನೀಡಿ ಉಪ ಜೀವನಕ್ಕೆ ಆಸರೆ ಒದಗಿಸಿದ್ದಾರೆ.
ಜಗನ್ನಾಥ ಡಿ.ಶೇರಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.