ADVERTISEMENT

ಶಿಸ್ತು, ಸಂಯಮಕ್ಕೆ ಆದ್ಯತೆ ನೀಡಿ: ಐಜಿಪಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 6:16 IST
Last Updated 23 ಜುಲೈ 2017, 6:16 IST

ಕಲಬುರ್ಗಿ: ‘ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್‌ಗಳು ವೃತ್ತಿ ಜೀವನದಲ್ಲಿ ಶಿಸ್ತು, ಸಂಯಮ, ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಮೊದಲ ಆದ್ಯತೆ ನೀಡಬೇಕು’ ಎಂದು ಈಶಾನ್ಯ ವಲಯ ಐಜಿಪಿ ಅಲೋಕಕುಮಾರ್ ಹೇಳಿದರು. ಇಲ್ಲಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ 16ನೇ ತಂಡದ ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್‌ಗಳ ನಿರ್ಗಮನ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್‌ ಗಳಾದ ನಿಮ್ಮ ಬಳಿ ಸದಾ ಆಯುಧ ವಿರುತ್ತದೆ. ಈ ಕಾರಣಕ್ಕಾಗಿಯೇ ನೀವು ಸಂಯಮ, ತಾಳ್ಮೆ ರೂಢಿಸಿಕೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು, ಬೀದಿಗಿಳಿದು ಹೋರಾಟ ಮಾಡುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಕರ್ತವ್ಯನಿರತ ರಾದ ನೀವು ತಾಳ್ಮೆಯಿಂದ ವರ್ತಿಸ ಬೇಕು’ ಎಂದು ಸಲಹೆ ನೀಡಿದರು.

‘ಶಿಸ್ತು ವೈಯಕ್ತಿಕ ಬದುಕಿನ ಜತೆಗೆ ವೃತ್ತಿಯಲ್ಲೂ ಉತ್ತಮ ಹೆಸರು ತರುತ್ತದೆ. ವೈಯಕ್ತಿಕ ಜೀವನದಲ್ಲಿ ಎಷ್ಟೇ ಒತ್ತಡ, ತೊಂದರೆ ಇದ್ದರೂ ಅದು ನಿಮ್ಮೊಳಗೇ ಇರಬೇಕು. ನೀವು ಯಾರಾದರೂ ಒಬ್ಬರು ತಪ್ಪು ಮಾಡಿದರೆ ಇಡೀ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು’ ಎಂದು ತಿಳಿಸಿದರು.

ADVERTISEMENT

‘ಆರ್‌ಬಿಐನಿಂದ ಹಣ ಸಾಗಣೆ, ಕಾರಾಗೃಹಗಳಲ್ಲಿ ಕೈದಿಗಳ ನಿಯಂತ್ರಣ ಹಾಗೂ ಇಸ್ರೊದ ಬಿಡಿ ಭಾಗಗಳನ್ನು ಕೊಂಡೊಯ್ಯುವಾಗಿ ಸಶಸ್ತ್ರ ಪಡೆ ಕಾನ್‌ಸ್ಟೆಬಲ್‌ಗಳನ್ನು ಸ್ಕ್ವಾಡ್ ಮತ್ತು ಕಣ್ಗಾವಲು ಪಡೆಯಾಗಿ ಬಳಸಿಕೊಳ್ಳಲಾ ಗುತ್ತದೆ. ಇಷ್ಟೊಂದು ಮಹತ್ವದ ಜವಾ ಬ್ದಾರಿಯನ್ನು ನಿಮ್ಮ ಮೇಲೆ ವಹಿಸಿದಾಗ ನೀವು ಅತ್ಯಂತ ಜಾಗರೂಕರಾಗಿರಬೇಕು’ ಎಂದು ಕಿವಿಮಾತು ಹೇಳಿದರು.

ಪಾಲಿಕೆ ಆಯುಕ್ತ ಪಿ.ಸುನಿಲ್‌ ಕುಮಾರ್ ಮಾತನಾಡಿದರು. ಒಳಾಂಗಣ ಮತ್ತು ಹೊರಾಂಗಣ ಕ್ರೀಡೆ, ಶೂಟಿಂಗ್‌ ನಲ್ಲಿ ವಿಜೇತರಾದವರಿಗೆ ಐಜಿಪಿ ಅಲೋಕಕುಮಾರ್ ಅವರು ಟ್ರೋಫಿ ಮತ್ತು ಬಹುಮಾನ ವಿತರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ಸ್ವಾಗತಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.