ADVERTISEMENT

ಉಮೇದುವಾರಿಕೆ ಸಲ್ಲಿಸಿದ ಅರುಣ್‌ ಮಾಚಯ್ಯ, ಬಸವರಾಜು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 10:35 IST
Last Updated 24 ಏಪ್ರಿಲ್ 2018, 10:35 IST

ವಿರಾಜಪೇಟೆ: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಅರುಣ್ ಮಾಚಯ್ಯ, ಎಂ.ಇ.ಪಿ ಪಕ್ಷದಿಂದ ಮಾಜಿ ಶಾಸಕ ಎಚ್.ಡಿ. ಬಸವರಾಜು, ಪಕ್ಷೇತರ ಅಭ್ಯರ್ಥಿಗಳಾಗಿ ಬಿಳುಗುಂದ ಗ್ರಾಮದ ಎಂ. ನಂಜಪ್ಪ ಮತ್ತು ತಿತಿಮತಿಯ ದೊಡ್ಡಯ್ಯ ಸೋಮವಾರ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚೆಪ್ಪುಡಿರ ಅರುಣ್ ಮಾಚಯ್ಯ, ಕಾಂಗ್ರೆಸ್‌ ಸರ್ಕಾರ ಐದು ವರ್ಷ ಸ್ವಚ್ಛ ಆಡಳಿತ ಮತ್ತು ಜನಪರ ಯೋಜನೆಗಳನ್ನು ನೀಡಿದೆ. ಜಿಲ್ಲೆಯ ಅಭಿವೃದ್ಧಿಗೆ ₹2,300 ಕೋಟಿಗಳನ್ನು ವೆಚ್ಚ ಮಾಡಿರುವ ದಾಖಲೆಯೊಂದಿಗೆ ಜನತೆಯ ಬಳಿ ಹೋಗಿ ಮತ ಯಾಚನೆ ಮಾಡುತ್ತೇನೆ ಎಂದರು.

ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಅವರು ಪಟ್ಟಣದ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪಟ್ಟಣ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿದರು. ಈ ಸಂದರ್ಭ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಶಿವು ಮಾದಪ್ಪ, ವಿರಾಜಪೇಟೆ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್‌ ಸಲಾಂ, ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಡಿ.ಸಿ.ಧ್ರುವ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಾಥ್ ಮತ್ತಿತರರು ಉಪಸ್ಥಿತರಿದ್ದರು.

ADVERTISEMENT

ಎಂ.ಇ.ಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಚ್‌.ಡಿ.ಬಸವರಾಜು: ಎರಡು ಬಾರಿ ವಿರಾಜಪೇಟೆ ಕ್ಷೇತ್ರದ ಶಾಸಕರಾಗಿದ್ದ ಎಚ್.ಡಿ. ಬಸವರಾಜು ಈ ಬಾರಿ ಎಂ.ಇ.ಪಿ ಪಕ್ಷದ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಮಾಜಿ ಶಾಸಕ ಎಚ್.ಡಿ. ಬಸವರಾಜು ರಾಷ್ಟ್ರೀಯ ಪಕ್ಷಗಳು ದೇಣಿಗೆ ಸಂಗ್ರಹಿಸುವ ಮೂಲಕ ಜನರ ಹಣವನ್ನು ಪಡೆದುಕೊಂಡು ಚುನಾವಣೆ ಎದುರಿಸುತ್ತವೆ. ಆದರೆ ಎಂ.ಇ.ಪಿ ಪಕ್ಷ ತನ್ನ ಹಣವನ್ನು ವಿನಿಯೋಗಿಸಿ ಚುನಾವಣೆ ಎದುರಿಸುತ್ತಿರುವುದರಿಂದ ಎಂ.ಇ.ಪಿ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ವಿರಾಜಪೇಟೆ ಕ್ಷೇತ್ರದ ಶಾಸಕನಾಗಿದ್ದಾಗ ಮಾಡಿದ ಅಭಿವೃದ್ಧಿ ಕೆಲಸವನ್ನು ಮುಂದಿಟ್ಟುಕೊಂಡು ಜನತೆಯ ಬಳಿ ಮತಯಾಚಿಸುತ್ತೇನೆ ಎಂದರು.

ಈ ಸಂದರ್ಭ ಪಕ್ಷದ ರಾಜ್ಯ ಸಂಚಾಲಕ ವಿವೇಕ್, ಪ್ರಮುಖರಾದ ವೀರಭದ್ರಯ್ಯ, ಅಭಿಷೇಕ್, ದಿನೇಶ್, ಪ್ರಮೋದ್ ಮತ್ತಿತರರು ಉಪಸ್ಥಿತರಿದ್ದರು.

ಅರುಣ್ ಮಾಚಯ್ಯ ಬಳಿ ₹18 ಕೋಟಿ ಆಸ್ತಿ

ಕಾಂಗ್ರೆಸ್‌ ಅಭ್ಯರ್ಥಿ ಅರುಣ್ ಮಾಚಯ್ಯ ಅವರು ತಮ್ಮ ಒಟ್ಟು ಆಸ್ತಿ ₹18, 53, 57,000 ಎಂದು ಘೋಷಿಸಿಕೊಂಡಿದ್ದಾರೆ. 5 ಲಕ್ಷ ನಗದು ಹೊಂದಿರುವ ಅವರು ತಮ್ಮ ಹೆಸರಿನಲ್ಲಿ ₹3.12ಕೋಟಿ ಸಾಲ, ಪತ್ನಿ ಹೆಸರಿನಲ್ಲಿ ₹26,84 ಲಕ್ಷ ಸಾಲ ಹೊಂದಿದ್ದಾರೆ.

2 ಕಾರು ಹಾಗೂ 70 ಎಕರೆ ಕಾಫಿ ತೋಟ,  ಪತ್ನಿ ಹೆಸರಿನಲ್ಲಿ ಒಂದು ಕಾರು ಇದೆ. ಪತ್ನಿ ಬಳಿ ₹1 ಲಕ್ಷ  ನಗದು ಮತ್ತು ಮಗನ ಹೆಸರಿನಲ್ಲಿ ₹1 ಲಕ್ಷ  ಠೇವಣಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.