ADVERTISEMENT

ಗ್ರಾಮೀಣ ರಸ್ತೆ ಅಭಿವೃದ್ಧಿಗೆ ₹ 64.42 ಕೋಟಿ

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಟಿ.ಪಿ. ರಮೇಶ್

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 7:12 IST
Last Updated 11 ಮಾರ್ಚ್ 2017, 7:12 IST
ಮಡಿಕೇರಿ:  ‘ನಮ್ಮ ಗ್ರಾಮ ನಮ್ಮ ಯೋಜನೆ’ ಅಡಿಯಲ್ಲಿ ಜಿಲ್ಲೆಗೆ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ₹ 64.42 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ. ರಮೇಶ್ ತಿಳಿಸಿದರು.
 
ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 2015–16ನೇ ಸಾಲಿನ ಯೋಜನೆ ಅಡಿಯಲ್ಲಿ ಒಟ್ಟು 108 ಕಿ.ಮೀ. ವ್ಯಾಪ್ತಿಯ 11 ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿಗಳು  ಟೆಂಡರ್ ಹಂತದಲ್ಲಿವೆ. ಗ್ರಾಮೀಣ ರಸ್ತೆ ಅಭಿವೃದ್ಧಿ ಸರ್ಕಾರ ಉತ್ತಮ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು. 
 
ಮುಖ್ಯಮಂತ್ರಿ 3ನೇ ವಿಶೇಷ ಪ್ಯಾಕೇಜಿನಲ್ಲಿ ₹ 50 ಕೋಟಿ ಹಣ ಬಿಡುಗಡೆಯಾಗುತ್ತಿದ್ದು, ಇದರಲ್ಲಿ ಜಿಲ್ಲೆಯ 104 ಗ್ರಾಮ ಪಂಚಾಯಿತಿಗಳಿಗೆ ತಲಾ ₹ 36 ಲಕ್ಷಗಳನ್ನು ಕೊಡುವಲ್ಲಿ ಜಿಲ್ಲೆಯ ವಿವಿಧ ಯೋಜ ನೆಗಳನ್ನು ರೂಪಿಸಲಾಗಿದೆ.
 
 ತೀರಾ ಹಾಳಾಗಿರುವ ಗ್ರಾಮೀಣ ರಸ್ತೆಗಳಿಗೆ ಈ ಹಣ ಬಳಕೆಯಾಗಲಿದ್ದು, ಈ ಸಂಬಂಧ ಒಂದು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
 
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದು ರಾಗುತ್ತಿದ್ದು, ಈ ಬಗ್ಗೆ ಉಸ್ತುವಾರಿ ಸಚಿವರು ಜಿಲ್ಲಾಡಳಿತಕ್ಕೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದು, ಕುಡಿಯುವ ನೀರಿನ ಕಾಮಗಾರಿ ಸಂಬಂಧ ಜಿಲ್ಲಾಡಳಿತ ಮುಂಜಾಗೃತ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.
 
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಮೇಲೆ ವಿಶೇಷವಾಗಿ ಜಿಲ್ಲೆಗೆ  ₹ 150 ಕೋಟಿಯಷ್ಟು ಹಣ ಬಿಡುಗಡೆ ಆಗಿದೆ. ಬಿಜೆಪಿಯಲ್ಲಿ ಹೊಸ ಅಧ್ಯಕ್ಷಕರಾಗಿ 4 ತಿಂಗಳು ಮುಗಿದಿಲ್ಲ ಅಷ್ಟರಲ್ಲೇ ಅದ್ಯಕ್ಷರ ಮೇಲೆ ಅಸಮಾಧಾನಗೊಂಡು ಅಧ್ಯಕ್ಷ ಸ್ಥಾನ ಬದಲಾಯಿಸಿಕೊಂಡಿದ್ದಾರೆ. ಬಿಜೆಪಿ ಮುಖಂಡರಲ್ಲಿ ಇರುವ ವೇದನೆ ತೋರಿಸಿಕೊಂಡಿದ್ದಾರೆ ಎಂದು ಕುಟುಕಿದರು. 
 
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೇಸ್ ಮುಖಂಡರಾದ ತನ್ನೀರಾ ಮೈನಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಪ್ರಮುಖ ವೆಂಕಟೇಶ್ ಇತರರು ಹಾಜರಿದ್ದರು.
 
ಯಾವ್ಯಾವ ರಸ್ತೆ ಅಭಿವೃದ್ಧಿಗೆ ಹಣ
ಮಡಿಕೇರಿ:
  ಅಚ್ಚಿನಾಡುವಿನಿಂದ ಹಟ್ಟಿಕೊಳೆ ರಸ್ತೆ, ಕಿಗ್ಗಲುವಿನಿಂದ ಬೇತ್ರಿ ರಸ್ತೆ, ಕಲ್ಲೂರುನಿಂದ ಮಳ್ಳುರು ರಸ್ತೆ, ಮಾದಾಪುರ ರಸ್ತೆಯ ಹೊಸತೋಟದಿಂದ ಕುಂಬುರು ರಸ್ತೆ, ಹೆರೂರುನಿಂದ ಬಸವನಹಳ್ಳಿ ರಸ್ತೆ, ನೀಡ್ಯಮಲೆ ಗಿರಿಜನ ಕಾಲೊನಿಯಿಂದ ಕರಂತಡ್ಕ ಹೈನ್‌ಮನೆ ರಸ್ತೆ, ಅವಂದೂರಿನಿಂದ ಕಟ್ಟೆಕೊಳ್ಳಿ ರಸ್ತೆ, ಕಗ್ಗೂಡ್ಲುವಿನಿಂದ ಬಿಳಿಗೇರಿ ಶಾಲೆಯವರೆಗೆನ ರಸ್ತೆ, ಬೆಟ್ಟಗೇರಿಯಿಂದ ಬೆಟ್ಟತ್ತೂರು ರಸ್ತೆ, ಬಿರುನಾನಿಯಿಂದ ತೆರಲು ರಸ್ತೆ, ಕೊನ್ನಣಕಟ್ಟೆಯಿಂದ ಸುಲುಗೋಡು ರಸ್ತೆ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ ಎಂದು ರಮೇಶ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.