ADVERTISEMENT

ನಗರಸಭೆ ಅಧ್ಯಕ್ಷರ ಗೂಂಡಾಗಿರಿ: ಸುರಯ್ಯಾ ಆರೋಪ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 6:23 IST
Last Updated 20 ಏಪ್ರಿಲ್ 2017, 6:23 IST

ಮಡಿಕೇರಿ: ನಗರದ ಕನ್ನಂಡಬಾಣೆ ಯಲ್ಲಿ ನ್ಯಾಯಯುತವಾಗಿ ಖರೀದಿಸಿದ ಕಂದಾಯ ಜಾಗವನ್ನು ನಗರಸಭೆ ಮುನ್ಸೂಚನೆ ನೀಡದೆ ಬೇಲಿ ತೆರವು ಗೊಳಿಸಿರುವುದು ಖಂಡನೀಯ ಎಂದು ಮುಡಾದ ಮಾಜಿ ಅಧ್ಯಕ್ಷೆ ಸುರಯ್ಯಾ ಅಬ್ರಾರ್‌ ಆಕ್ಷೇಪ ವ್ಯಕ್ತಪಡಿಸಿದರು.ನಗರದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ‘ನಾನು ಸೇರಿದಂತೆ ಅಬ್ರಾರ್, ನಾದಿಯಾ ಸಿರಾಜ್, ಅಸ್ಲಾಂ ಅವರು ಎಂಟು ವರ್ಷದ ಹಿಂದೆ ಕರ್ಣಂಗೇರಿ ಗ್ರಾಮದ ಕನ್ನಂಡಬಾಣೆಯ ಸರ್ವೆ ನಂಬರ್ 294/1ರಲ್ಲಿ  51 ಗುಂಟೆ ಜಾಗ ಖರೀದಿಸಿದ್ದೆವು. ಸ್ವಂತ ಜಾಗವನ್ನು ಯಾವುದೇ ಮುನ್ಸೂಚನೆ ನೀಡದೇ ತೆರವು ಮಾಡಿದ್ದಾರೆ.

ಮುಡಾ ಅಧ್ಯಕ್ಷ ಚುಮ್ಮಿ ದೇವಯ್ಯ, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಸೇರಿದಂತೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್.ರಮೇಶ್, ನಗರ ಸಭೆ ಸದಸ್ಯೆ ಸಂಗೀತಾ ಪ್ರಸನ್ನ ನೇತೃತ್ವ ದಲ್ಲಿ ಕಡಂಗ ಜಾಗ ಒತ್ತುವರಿಯಾಗಿದೆ ಎಂದು ಹೇಳಿಕೆ ನೀಡಿ, ಜಾಗಕ್ಕೆ ಹಾಕಿದ ಬೇಲಿಯನ್ನು ಕಿತ್ತು ಹಾಕಿ ಅಧಿಕಾರದ ದರ್ಪ ತೋರಿಸಿದ್ದಾರೆ. ಕೆಲವರೊಂದಿಗೆ ಸೇರಿಕೊಂಡು ಕಾವೇರಮ್ಮ ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

‘ಬೇಲಿ ತೆರವುಗೊಳಿಸುವ ಸಂದರ್ಭ ದಲ್ಲಿ ಅಧಿಕಾರಿಗಳನ್ನು ಕರೆದುಕೊಂಡು ಹೋಗಿಲ್ಲ. ಯಾವುದೋ ದುರುದ್ದೇಶ ದಿಂದ ಈ ಕೆಲಸವನ್ನು ಮಾಡಿದ್ದಾರೆ. ಈ ಬಗ್ಗೆ ಮಡಿಕೇರಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.ಇದು ಖರೀದಿಸಿದ ಕಂದಾಯ ಜಾಗ: ಬೇಲಿ ಹಾಕಿರುವ ಜಾಗ ಕಡಂಗ ಜಾಗ (ನೀರು ಹರಿಯುವ ಪ್ರದೇಶ) ಅಲ್ಲ ಎನ್ನು ವುದಕ್ಕೆ ದಾಖಲಾತಿಯೂ ಇದೆ. 2016ರಿಂದಲೇ ಜಾಗದಲ್ಲಿ ಕಡಂಗ ಇದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಮಡಿಕೇರಿ ತಹಶೀಲ್ದಾರ್‌ಗೆ ಪತ್ರ ಬರೆದು, ಸರ್ವೆ ಮಾಡಿಸಿ ಸರ್ವೇ ನಕ್ಷೆ ಕೇಳಲಾಗಿದೆ. ಪೂರ್ಣ ಪ್ರಮಾಣದ ಕಂದಾಯ ಜಾಗ ವೆಂದು ದಾಖಲಾತಿ ಗಳು ನಮ್ಮ ಬಳಿ ಯಿವೆ. ಈ ನಡುವೆ ಸರ್ವೇ ಕಾರ್ಯಗಳು ನಡೆದಿವೆ ಎಂದು ಸುರಯ್ಯಾ ಸ್ಪಷ್ಟಪಡಿಸಿದರು.

ADVERTISEMENT

ಕನ್ನಂಡಬಾಣೆಯಲ್ಲಿ ಕೆಲವರು ಜಲ ಮೂಲ ಪ್ರದೇಶಗಳು ಸೇರಿದಂತೆ ಕಡಂಗ, ಕೆರೆ ಒತ್ತುವರಿಯನ್ನು ಮಾಡಿ ಕೊಂಡಿದ್ದಾರೆ. ಅವರನ್ನು ರಕ್ಷಣೆ ಮಾಡುವ ಸಲುವಾಗಿ ನಮ್ಮ ಕಾನೂನು ಬದ್ಧ ಜಾಗವನ್ನು ತೆರವು ಮಾಡಿದ್ದಾರೆ ಎಂದು ದೂರಿದರು. ಪತ್ರಿಕಾಗೋಷ್ಠಿ ಯಲ್ಲಿ ಸುರಯ್ಯಾ ಬಾನು, ನಾದಿಯಾ ಸಿರಾಜ್, ಅಸ್ಲಾಂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.