ADVERTISEMENT

ಮುಖ್ಯಮಂತ್ರಿಯನ್ನೇ ಸೋಲಿಸಿ ಇತಿಹಾಸ ಬರೆದವರು

ಮತ್ತೊಂದು ಚುನಾವಣೆಯ ಸಿದ್ಧತೆಯಲ್ಲಿರುವ ಮಾಜಿ ಸಚಿವ ಬಿ.ಎ.ಜೀವಿಜಯ

ಡಿ.ಪಿ.ಲೋಕೇಶ್
Published 19 ಮಾರ್ಚ್ 2018, 11:17 IST
Last Updated 19 ಮಾರ್ಚ್ 2018, 11:17 IST
ಜೀವಿಜಯ
ಜೀವಿಜಯ   

ಸೋಮವಾರಪೇಟೆ: ಅದು ಕೊಡಗು ಜಿಲ್ಲೆಯಲ್ಲಿ ರಾಜಕೀಯವಾಗಿ ಕಾಂಗ್ರೆಸ್ ಪ್ರಾಬಲ್ಯವಿದ್ದ ಸಮಯ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯನ್ನೇ ಪರಾಜಿತಗೊಳಿಸಿ ರಾಜಕೀಯ ಪಂಡಿತರ ಹುಬ್ಬೇರುವಂತೆ ಮಾಡಿದ ಕೀರ್ತಿ ಮಾಜಿ ಸಚಿವ ಬಿ.ಎ.ಜೀವಿಜಯ ಅವರಿಗೆ ಸಲ್ಲುತ್ತದೆ!

ಅರ್ಧ ಶತಮಾನಕ್ಕಿಂತಲೂ ಹೆಚ್ಚಿನ ಸಮಯದಿಂದ ರಾಜಕೀಯ ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಜೀವಿಜಯ. ಪ್ರತಿ ಚುನಾವಣೆಯಲ್ಲೂ ಒಂದಲ್ಲ ಒಂದು ಪಕ್ಷದಿಂದ ಟಿಕೆಟ್‌ ಗಿಟ್ಟಿಸಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ತಮ್ಮ ರಾಜಕೀಯ ಜೀವನದಲ್ಲಿ ಸೋಲಿನ ಕಹಿ– ಗೆಲುವಿನ ಸಿಹಿ ಅನುಭವಿಸಿದ ಹಿರಿಯ ರಾಜಕಾರಣಿ. ಹಲವು ಏಳುಬೀಳು ಕಂಡಿರುವ ಅವರು ‘ಪ್ರಜಾವಾಣಿ’ ಜತೆಗೆ ತಮ್ಮ ಮೊದಲು ಶಾಸಕನಾದ ನೆನಪು ಹಂಚಿಕೊಂಡಿದ್ದಾರೆ.

1961ರಲ್ಲಿ ಪದವಿ ಮುಗಿಸಿದ ಬಳಿಕ ಜೀವಿಜಯ ಅವರು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಭೂ ಅಭಿವೃದ್ಧಿ ಬ್ಯಾಂಕ್‌ ನಿರ್ದೇಶಕರಾಗಿ, ಕಾಫಿ ಬೆಳೆಗಾರರ ಸಂಘದ ಹುಣಸೂರು ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿ ಹೆಸರು ಗಳಿಸಿದರು.

ADVERTISEMENT

ಬಳಿಕ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡರು. ಕಾಂಗ್ರೆಸ್‌ ಇಬ್ಭಾಗವಾದ ಬಳಿಕ ಜನತಾ ಪಕ್ಷದಲ್ಲಿ ಗುರುತಿಸಿಕೊಂಡು ಮೊದಲ ಬಾರಿಗೆ ಸೋಮವಾರಪೇಟೆ ಕ್ಷೇತ್ರದಿಂದ 1978ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಒಡ್ಡಿಕೊಂಡರು. 3,600 ಮತಗಳಿಂದ ಆರ್‌.ಗುಂಡೂರಾವ್‌ ಎದುರು ಸೋಲು ಅನುಭವಿಸಿದರು.

ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಜೀವಿಜಯ, 1983ರಲ್ಲಿ ಮತ್ತೆ ಜನತಾ ಪಕ್ಷದಿಂದ ವಿಧಾನಸಭೆಗೆ ಚುನಾವಣೆಯಲ್ಲಿ ಸ್ಪರ್ಧಿಸಿದರು. ಮುಖ್ಯಮಂತ್ರಿಯಾಗಿದ್ದ ದಿ.ಗುಂಡೂರಾವ್‌ ಅವರನ್ನು 5 ಸಾವಿರ ಮತಗಳ ಅಂತರದಲ್ಲಿ ಸೋಲಿಸುವ ಮೂಲಕ ಇತಿಹಾಸ ನಿರ್ಮಿಸಿದರು.

‘1983ರವರೆಗೆ ಕ್ಷೇತ್ರದಲ್ಲಿ ಪಕ್ಷವನ್ನು ಉತ್ತಮವಾಗಿ ಸಂಘಟನೆ ಮಾಡಿದ್ದೆ. ಗೆದ್ದೇ ಗೆಲ್ಲುತ್ತೇನೆಂಬ ಯಾವುದೇ ಕನಸಿರಲಿಲ್ಲ. ಆದರೆ, ಜನರು ನನ್ನನ್ನು ಗೆಲ್ಲಿಸಿದರು. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್‌ ಅವರನ್ನು ಸೋಲಿಸಿದ ಸಂಪೂರ್ಣ ಶ್ರೇಯಸ್ಸು ಮತದಾರರಿಗೆ ಸಲ್ಲುತ್ತದೆ. ಅಂದು ಅಜಿತ್‌ಕುಮಾರ್, ವೇದಮೂರ್ತಿ, ದಿನಮಣಿ, ಬಗ್ಗನ ಪೊನ್ನಪ್ಪ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದರು. ನಂತರ, ನಡೆದ ಮಂತ್ರಿಮಂಡಲದ ರಚನೆಯಲ್ಲಿ ಮೊದಲ ಪಟ್ಟಿಯಲ್ಲಿಯೇ ನನ್ನ ಹೆಸರಿತ್ತು. ಕಾರಣಾಂತರಗಳಿಂದ ನನ್ನನ್ನು ಕೈಬಿಡಲಾಯಿತು. ಬಳಿಕ ಸಚಿವ ಸಂಪುಟದ ವಿಸ್ತರಣೆಯ ವೇಳೆ ನನ್ನನ್ನು ಸಂಪುಟಕ್ಕೆ ಸೇರಿಸಿ ಕೊಳ್ಳಲಾಯಿತು. ಅರಣ್ಯ ಖಾತೆಯನ್ನು ನನಗೆ ನೀಡಲಾಯಿತು’ ಎಂದು ತಮ್ಮ ಹಿಂದಿನ ನೆನಪು ಬಿಚ್ಚಿಟ್ಟರು.

‘ನೀಡಿದ್ದ ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸಿದ ತೃಪ್ತಿಯಿದೆ. ಅಂದು ದೇಶದಲ್ಲಿ ಶೇ 33.33ರಷ್ಟು ಅರಣ್ಯ ಪ್ರದೇಶವಿರಬೇಕು ಎಂದು ಕಾನೂನಿತ್ತು. ರಾಜ್ಯದಲ್ಲಿ ಕೇವಲ ಶೇ 20ರಷ್ಟು ಮಾತ್ರ ಅರಣ್ಯವಿತ್ತು. ಹೀಗಾಗಿ, ₹ 56 ಕೋಟಿ ವೆಚ್ಚದಲ್ಲಿ ಸಾಮಾಜಿಕ ಅರಣ್ಯ ಅಭಿವೃದ್ಧಿ ಪಡಿಸಲು ಒತ್ತು ನೀಡಲಾಯಿತು’ ಎಂದು ತಮ್ಮ ಅಭಿವೃದ್ಧಿ ಕೆಲಸಗಳ ಬಗ್ಗೆ ಬೆಳಕು ಚೆಲ್ಲಿದರು.

‘ಇಂದಿಗೂ ಬೆಂಗಳೂರಿನ ರಸ್ತೆಯ ಬದಿಯಲ್ಲಿ ಬೆಳೆದು ನಿಂತಿರುವ ಹಲವು ಬೃಹತ್ ಮರಗಳು ನಮ್ಮ ಸರ್ಕಾರದ ಫಲ. ರಾಜ್ಯದಲ್ಲಿ ಕೆಲವು ಬೃಹತ್ ಉದ್ದಿಮೆಗಳು ಪಶ್ಚಿಮಘಟ್ಟ ಅರಣ್ಯವನ್ನು ಗುತ್ತಿಗೆ ಪಡೆದು ಅರಣ್ಯ ನಾಶ ಮಾಡುತ್ತಿದ್ದರು. ಅಂದಿನ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡು, ಗುತ್ತಿಗೆ ರದ್ದುಪಡಿಸಿ ಅರಣ್ಯದ ಬೆಳವಣಿಗೆಗೆ ಮಹತ್ವದ ಹೆಜ್ಜೆ ಇರಿಸಲಾಯಿತು’ ಎಂದು ಅರಣ್ಯ ಉಳಿಸಲು ಹಾಕಿಕೊಂಡ ಕ್ರಮಗಳ ಬಗ್ಗೆ ವಿವರಿಸಿದರು.

‘1983ರ ವಿಧಾನಸಭಾ ಚುನಾವಣೆಯಲ್ಲಿ ಆರ್‌. ಗುಂಡೂರಾವ್‌ ಅವರ ಪರವಾಗಿ ಪ್ರಚಾರಕ್ಕೆ ಜೂನಿಯರ್ ಕಾಲೇಜಿನ ಮೈದಾನಕ್ಕೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಎಂ.ಜಿ.ರಾಮಚಂದ್ರನ್‌ ಅವರು ಬಂದಿದ್ದರು’ ಎಂದು ಪ್ರತಿಸ್ಪರ್ಧಿಯ ಪ್ರಚಾರ ವೈಖರಿಯನ್ನೂ ಹೇಳಿದರು.

ಪ್ರಥಮ ರಾಜಕೀಯ ಭಾಷಣ: ‘ನಮ್ಮ ಪಕ್ಷದ ಚುನಾವಣಾ ಭಾಷಣ ಇಲ್ಲಿನ ಜೇಸಿ ವೇದಿಕೆಯಲ್ಲೇ ನಡೆದಿತ್ತು. ರಾಷ್ಟ್ರ ನಾಯಕರ ಎದುರಿನಲ್ಲಿಯೇ ಭಾಷಣ ಯೋಗ ಒದಗಿ ಬಂದಿತ್ತು. ವೇದಿಕೆಯಲ್ಲಿ ಜನತಾಪಕ್ಷದ ರಾಷ್ಟ್ರಾಧ್ಯಕ್ಷರಾಗಿದ್ದ ಚಂದ್ರಶೇಖರ್, ಮೊರಾರ್ಜಿ ದೇಸಾಯಿ, ಜಾರ್ಜ್‌ ಫರ್ನಾಂಡಿಸ್, ವಾಜಪೇಯಿ, ಸುಷ್ಮಾ ಸ್ವರಾಜ್, ಪ್ರಮೀಳಾ ನೇಸರ್ಗಿ ಮತ್ತಿತರರು ಇದ್ದರು.

ಈ ಸಭೆಯಲ್ಲಿ ಪ್ರಜಾಪ್ರಭುತ್ವದ ಉಳಿಸುವ ಬಗ್ಗೆ ಮಾತನಾಡಿದ್ದೆ. ಎಲ್ಲ ನಾಯಕರೂ ನನ್ನ ಗೆಲುವಿಗಾಗಿ ಹೆಚ್ಚಿನ ಶ್ರಮ ವಹಿಸಿದ್ದರು’ ಎಂದು ನೆನಪು ಮಾಡಿಕೊಂಡರು.
**
ಜೀವಿಜಯ ಅವರ ರಾಜಕೀಯ ಹೆಜ್ಜೆಗಳು...

* 1983, 1985ರ ವಿಧಾನಸಭೆ ಚುನಾವಣೆಯಲ್ಲಿ ಜನತಾಪಕ್ಷದಿಂದ ಸ್ಪರ್ಧಿಸಿ ಗೆಲುವು
* 2004ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಗೆಲುವು
* 2009ರ ಲೋಕಸಭೆ ಚುನಾವಣೆಗೆ ಜೆಡಿಎಸ್‌ನಿಂದ ಸ್ಪರ್ಧೆ – ಸೋಲು
* 2014ರ ಲೋಕಸಭೆ ಚುನಾವಣೆಯಲ್ಲೂ ಜೆಡಿಎಸ್‌ನಿಂದ ಸ್ಪರ್ಧೆ – ಸೋಲು
* 1978, 1994, 1999, 2008, 2013ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ – ಸೋಲು
* 2018ರ ವಿಧಾನಸಭೆ ಚುನಾವಣೆಗೆ ಜೆಡಿಎಸ್‌ನಿಂದ ಟಿಕೆಟ್‌ ಘೋಷಣೆ ಆಗಿದ್ದು ಮಡಿಕೇರಿ ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧತೆ
**
ಅಭಿವೃದ್ಧಿ ಕಾರ್ಯಗಳ ಮೆಲುಕು

‘38ನೇ ವಯಸ್ಸಿನಲ್ಲೇ ಕ್ಷೇತ್ರದ ಕೆಲಸ ಮಾಡಲು ನನಗೆ ಕ್ಷೇತ್ರದ ಮತದಾರರು ಅವಕಾಶ ಕಲ್ಪಿಸಿದ್ದರು. ಅದೊಂದು ಅವಿಸ್ಮರಣೀಯ ಕ್ಷಣ. ಅಂದು ಕಾಫಿಗೆ ಕೇಂದ್ರ ಸರ್ಕಾರವು ವಿಧಿಸುತ್ತಿದ್ದ ತೆರಿಗೆಯ ಬಗ್ಗೆ ಪರಾಮರ್ಶೆ ಮಾಡಲು ರಾಜ್ಯದಿಂದ ನನ್ನ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಕಾಫಿ ಬೆಳೆಗಾರರಿಗೆ ವಿವಿಧ ಹಂತಗಳಲ್ಲಿ ವಿಧಿಸುತ್ತಿದ್ದ ಶೇ 65ರಷ್ಟು ತೆರಿಗೆಯನ್ನು ತೆಗೆದು ಹಾಕಿ ಬೆಳೆಗಾರರನ್ನು ತೆರಿಗೆ ಮುಕ್ತರನ್ನಾಗಿ ಮಾಡಲು ನೀಡಿದ ವರದಿಯಿಂದ ಕೊಡಗು ಸೇರಿದಂತೆ ಕಾಫಿ ಬೆಳೆಯುವ ಜಿಲ್ಲೆಯ ರೈತರಿಗೆ ಅನುಕೂಲವಾಯಿತು. ಕುಗ್ರಾಮಗಳಿಗೂ ಡಾಂಬರು ರಸ್ತೆಯನ್ನು ಮಾಡಿಸಿ ಜನರು ಸರಾಗವಾಗಿ ಸಂಚರಿಸಲು ಅನುವು ಮಾಡಿ ಕೊಟ್ಟೆ’ ಎಂದು ಜೀವಿಜಯ ಹೇಳುತ್ತಾರೆ.

‘ಸುಬ್ರಹ್ಮಣ್ಯ ದೇವಾಲಯಕ್ಕೆ ಹೆಗ್ಗಡಮನೆ ಮೂಲಕ ರಸ್ತೆ ನಿರ್ಮಿಸಲು ₹ 100 ಕೋಟಿ ವೆಚ್ಚದಲ್ಲಿ ಯೋಜನೆ ತಯಾರಿಸಲಾಗಿತ್ತು. ಮೀಸಲು ಅರಣ್ಯದಲ್ಲಿ ರಸ್ತೆ ನಿರ್ಮಿಸಬೇಕಾಗಿದ್ದರಿಂದ ದೆಹಲಿಯ ಪರಿಸರ ಇಲಾಖೆಯಿಂದಲೂ ಅನುಮತಿ ಪಡೆಯಲಾಗಿತ್ತು. ಆದರೆ, ನಂತರದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಕಾರಣ ಅದು ಹಾಗೆಯೇ ಉಳಿಯಿತು. ನಂತರ, ಆಯ್ಕೆಯಾದವರೂ ಅದರ ಬಗ್ಗೆ ಆಸಕ್ತಿ ತೋರಿಸಲಿಲ್ಲ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.