ADVERTISEMENT

ಮೆಣಸಿನಕಾಯಿ ಬೆಳೆದವರಿಗೇ ‘ಖಾರ’

ಮಾರುಕಟ್ಟೆಯಲ್ಲಿ ದಿಢೀರನೇ ಕುಸಿದ ಸಗಟು ದರ, ರೈತರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 10:28 IST
Last Updated 23 ಏಪ್ರಿಲ್ 2018, 10:28 IST
ಹಾರಳ್ಳಿ ಗ್ರಾಮದ ರೈತ ಎಚ್.ಎಂ,ರಂಗಸ್ವಾಮಿ
ಹಾರಳ್ಳಿ ಗ್ರಾಮದ ರೈತ ಎಚ್.ಎಂ,ರಂಗಸ್ವಾಮಿ   

ಶನಿವಾರಸಂತೆ: ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಭಾನುವಾರ 20 ಕೆ.ಜಿ.ಹಸಿರು ಮೆಣಸಿನಕಾಯಿಗೆ ₹ 170ರಿಂದ 320 ದರ ಸಿಕ್ಕಿತು. ದಿರೀರ್‌ ದರ ಕುಸಿತದಿಂದ ರೈತರು ಕಂಗಾಲಾದರು.

ಜಿ4 ತಳಿ ಹಾಗೂ ಬಿಳಿ ಪ್ರಿಯಾಂಕ ಮೆಣಸಿನಕಾಯಿಗೆ ₹ 170, ಪ್ರಿಯಾಂಕ, ಗುಂಟೂರಿಗೆ ₹ 200 ಹಾಗೂ ಉಲ್ಕಾ ಮೆಣಸಿನಕಾಯಿಗೆ ₹ 320 ದರ ದೊರೆತಿದ್ದು, ರೈತರಿಗೆ ನಷ್ಟ ಉಂಟು ಮಾಡಿತು.

ಒಂದು ವಾರದಲ್ಲಿ ಶುಕ್ರವಾರ, ಶನಿವಾರ, ಭಾನುವಾರ ಮೆಣಸಿನಕಾಯಿ ಸಂತೆ ನಡೆಯುತ್ತದೆ. ಸುತ್ತಮುತ್ತಲ ವಿವಿಧ ಗ್ರಾಮಗಳಿಂದ ರೈತರು ನಸುಕಿನಲ್ಲೇ ಮೆಣಸಿನಕಾಯಿ ತರುತ್ತಾರೆ. ವ್ಯಾಪಾರಿಗಳು ಬಾಯಿಗೆ ಬಂದಂತೆ ದರ ಕೇಳುತ್ತಾರೆ. ಹಸಿರು ಮೆಣಸಿನಕಾಯಿ ಬೇಗನೇ ಕೊಳೆಯುವ ಬೆಳೆಯಾದ ಕಾರಣ ವಿಧಿಯಿಲ್ಲದೇ ರೈತರು ಮಾರಬೇಕಾಗುತ್ತದೆ.

ADVERTISEMENT

ಈ ವರ್ಷ ಆರಂಭದಿಂದಲೂ ಹಸಿರು ಮೆಣಸಿನಕಾಯಿ ದರ ಕುಸಿತದಿಂದ ಈ ವಿಭಾಗದ ರೈತರು ಹತಾಶರಾಗಿದ್ದಾರೆ. ಕಳೆದ ವರ್ಷ ದರ ಸಮಾಧಾನಕರವಾಗಿತ್ತು. ಈ ವರ್ಷ ದರ ಹೆಚ್ಚಾಗಬಹುದೆಂಬ ನಿರೀಕ್ಷೆಯಿಂದ ರೈತರು ಅಧಿಕ ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆದಿದ್ದು, ಬೇಡಿಕೆ ಕಡಿಮೆಯಾಗಿದೆ. ಇದೇ ದರ ಕುಸಿತಕ್ಕೆ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.

‘ಹಸಿರು ಮೆಣಸಿನಕಾಯಿ 3 ತಿಂಗಳ ಬೆಳೆ. ರೈತರ ಮಳೆಗಾಲದ ಜೀವನ ನಿರ್ವಹಣೆಗೆ ಇದು ಸಹಕಾರಿ. ಎರಡು ದಿನಗಳಿಗೊಮ್ಮೆಯಾದರೂ ಇದಕ್ಕೆ ನೀರು ಹರಿಸಲೇಬೇಕು. ಕೂಲಿಯಾಳಿಗೆ ದಿನಕ್ಕೆ ₹ 250 ಸಂಬಳ. ಎಲ್ಲವನ್ನು ಲೆಕ್ಕ ಹಾಕಿದರೆ ನಮಗೇ ಹಾನಿ ಹೆಚ್ಚು’ ಎನ್ನುತ್ತಾರೆ ಹಾರಳ್ಳಿ ಗ್ರಾಮದ ಎಚ್.ಎಂ.ರಂಗಸ್ವಾಮಿ ಹಾಗೂ ಬೆಂಬಳೂರು ಗ್ರಾಮದ ಗೋಪಾಲ್.

**

ಭತ್ತದ ಬೆಳೆ ಕಟಾವು ಮಾಡಿದ ಕೂಡಲೇ ಹಸಿರು ಮೆಣಸಿನಕಾಯಿ ವ್ಯವಸಾಯ ಆರಂಭ ಮಾಡುತ್ತೇವೆ. ಕಾಫಿ ದರ ಕಡಿಮೆಯಾದಾಗಿನಿಂದ ರೈತರು ಕಂಡುಕೊಂಡ ಪರ್ಯಾಯ ಬೆಳೆ ಮೆಣಸಿನಕಾಯಿ
– ಎಚ್.ಎಂ.ರಂಗಸ್ವಾಮಿ,‌ ಹಾರಳ್ಳಿ ಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.