ADVERTISEMENT

ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮ

ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 4:42 IST
Last Updated 14 ಏಪ್ರಿಲ್ 2017, 4:42 IST

ಬಂಗಾರಪೇಟೆ: ‘ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪ ಚುನಾವಣೆ ಮುಂದಿನ ಚುನಾವಣೆಯ ದಿಕ್ಸೂಚಿ’ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ  ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಗುರುವಾರ ಕಾಂಗ್ರೆಸ್‌ ಕಾರ್ಯಕರ್ತರು ಏರ್ಪಡಿಸಿದ್ದ ವಿಜಯೋತ್ಸವ ಸಮಾರಂಭದಲ್ಲಿ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಕಾರ್ಯಕ್ರಮಗಳು ಕಾಂಗ್ರೆಸ್‌ಗೆ ಶ್ರೀರಕ್ಷೆಯಾಗಲಿದೆ’ ಎಂದು ಹೇಳಿದರು.

‘ಮೋದಿ ಹೆಸರು ಹೇಳಿ ಓಟು ಕೇಳುವ ಅನಿವಾರ್ಯ  ಬಿಜೆಪಿಯಲ್ಲಿ ಉಂಟಾಗಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ಸದೃಢವಾಗಿ ಬೆಳೆದಿದೆ. ಎಲ್ಲಾ ಸಮುದಾಯಕ್ಕೆ  ಸಮಾನ ಅವಕಾಶ ಕಲ್ಪಿಸಿದೆ. ಕಾಂಗ್ರೆಸ್‌ಗೆ ಕಾಂಗ್ರೆಸ್‌ ಪಕ್ಷವೇ ಸಾಟಿ’ ಎಂದು ತಿಳಿಸಿದರು.

‘ಯಡಿಯೂರಪ್ಪ ಅವರು ಮೂರು ತಿಂಗಳಿಂದ ಮೈಸೂರಿನಲ್ಲಿ ಠಿಕಾಣಿ ಹೂಡಿ, ಕಾಂಗ್ರೆಸ್‌ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದರು. ಹೋದೆಡೆಯಲ್ಲೆಲ್ಲ ಜಾತಿ ಬೀಜ ಬಿತ್ತುತ್ತಿದ್ದರು. ಅಲ್ಲಿನ ಮತದಾರರು ಅವರಿಗೆ ತಕ್ಕ ಉತ್ತರ ನೀಡಿದ್ದಾರೆ’ ಎಂದು ಟೀಕಿಸಿದರು.

ಜಿಲ್ಲಾ ಘಟಕ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ‘ಮೋದಿ ಅಲೆ ಇದೆ ಎಂದು ಬಿಜೆಪಿ ನಾಯಕರು ಬೀಗುತ್ತಿದ್ದರು. ಇಲ್ಲಿನ ಕ್ಷೇತ್ರದ ಕೆಲವರು ಈಗಾಗಲೆ ಗೆದ್ದಿರುವ ಭ್ರಮೆಯಲ್ಲಿ ಇದ್ದರು. ಉಪ ಚುನಾವಣೆ ಫಲಿತಾಶ ಅವರ ನಿದ್ದೆ ಕೆಡೆಸಿದೆ’ ಎಂದರು.


‘ಶ್ರೀನಿವಾಸ್‌ ಪ್ರಸಾದ್‌ ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲಾ ಹುದ್ದೆಗಳನ್ನು  ಅನುಭವಿಸಿದ್ದರು. ಪಕ್ಷಕ್ಕೆ ಸೆಡ್ಡು ಹೊಡೆಯಲು ಯತ್ನಿಸಿ, ಪರಾಭವಗೊಂಡಿದ್ದಾರೆ. ಮೋದಿಯ ಕುತಂತ್ರದಿಂದ ಈಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಘಟಕ ಅಧ್ಯಕ್ಷ ಪರಮೇಶ್ವರ ಅವರ ನೇತೃತ್ವದಲ್ಲಿ ಪಕ್ಷ ಸದೃಢವಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ’ ಎಂದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಾರ್ಥಸಾರಥಿ, ನಂಜಪ್ಪ, ಗೌಸ್‌, ಮುನಿವೆಂಕಟಪ್ಪ, ಪ್ರಸನ್ನ, ನವೀನ್‌, ಆದಿನಾರಾಯಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT