ADVERTISEMENT

ಕೆರೆಯೊಡಲು ಸೇರುತ್ತಿದೆ ವೈದ್ಯಕೀಯ ತ್ಯಾಜ್ಯ

ಹಣ ಉಳಿಸಲು ನಗರದ ಆಸ್ಪತ್ರೆಗಳ ಕಳ್ಳ ದಾರಿ: ದುರ್ನಾತ ಬೀರುತ್ತಿದೆ ಕೋಲಾರಮ್ಮ ಕೆರೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 12:52 IST
Last Updated 13 ಫೆಬ್ರುವರಿ 2017, 12:52 IST
ಕೋಲಾರದ ಕೋಲಾರಮ್ಮ ಕೆರೆ ಅಂಗಳದಲ್ಲಿ ರಾಶಿಯಾಗಿ ಬಿದ್ದಿರುವ ವೈದ್ಯಕೀಯ ತ್ಯಾಜ್ಯ
ಕೋಲಾರದ ಕೋಲಾರಮ್ಮ ಕೆರೆ ಅಂಗಳದಲ್ಲಿ ರಾಶಿಯಾಗಿ ಬಿದ್ದಿರುವ ವೈದ್ಯಕೀಯ ತ್ಯಾಜ್ಯ   

ಕೋಲಾರ:  ನಗರದಲ್ಲಿ ಉತ್ಪತ್ತಿಯಾಗುವ ವಿಷಪೂರಿತ ವೈದ್ಯಕೀಯ ತ್ಯಾಜ್ಯವು ಸದ್ದಿಲ್ಲದೆ ಕೋಲಾರಮ್ಮ ಕೆರೆಯ ಒಡಲು ಸೇರುತ್ತಿದೆ. ಸರ್ಕಾರದ ಕಾನೂನು ಕಟ್ಟಳೆಗೆ ಇಲ್ಲಿ ಬೆಲೆ ಇಲ್ಲವಾಗಿದೆ.

ನಗರ ಬೆಳೆದಂತೆ ಖಾಸಗಿ ಆಸ್ಪತ್ರೆಗಳು, ನರ್ಸಿಂಗ್‌ ಹೋಂಗಳು, ಕ್ಲಿನಿಕ್‌ಗಳು, ಡಯಾಗ್ನಸ್ಟಿಕ್ ಲ್ಯಾಬೊರೇಟರಿ, ರಕ್ತನಿಧಿ ಕೇಂದ್ರಗಳು ನಾಯಿಕೊಡೆಗಳಂತೆ ಹಾದಿ ತಲೆ ಎತ್ತಿವೆ. ವೈದ್ಯಕೀಯ ತ್ಯಾಜ್ಯದ ಉತ್ಪಾದನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ಪ್ರಕಾರ ನಗರದಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇರಿದಂತೆ 100 ಆಸ್ಪತ್ರೆಗಳಿವೆ. ಈ ಆಸ್ಪತ್ರೆಗಳಲ್ಲಿ ಪ್ರತಿನಿತ್ಯ 200 ಕೆ.ಜಿಗೂ ಹೆಚ್ಚು ವೈದ್ಯಕೀಯ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಚುಚ್ಚುಮದ್ದು ಕೊಡಲು ಬಳಸುವ ಸಿರಂಜ್‌್, ಸೂಜಿ, ಗ್ಲೂಕೋಸ್‌ ಬಾಟಲಿಗಳು, ಬ್ಯಾಂಡೇಜ್‌ ಬಟ್ಟೆ, ಔಷಧದ ಬಾಟಲಿಗಳು, ವೈದ್ಯಕೀಯ ಸಿಬ್ಬಂದಿ ಬಳಸುವ ಕೈಗವುಸು, ರೋಗಿಗಳ ಹಾಸಿಗೆ ಹಾಗೂ ಹೊದಿಕೆ, ತಿಂದು ಎಸೆದ ಆಹಾರ ಪದಾರ್ಥಗಳು ಪ್ರಮುಖ ವೈದ್ಯಕೀಯ ತ್ಯಾಜ್ಯಗಳಾಗಿವೆ.

ಜೈವಿಕ ವೈದ್ಯಕೀಯ ತ್ಯಾಜ್ಯ (ವ್ಯವಸ್ಥಾಪನಾ ಮತ್ತು ನಿರ್ವಹಣೆ) ಕಾಯಿದೆ- 2016ರ ಪ್ರಕಾರ ವೈದ್ಯಕೀಯ ತ್ಯಾಜ್ಯವನ್ನು ಉತ್ಪತ್ತಿಯಾದ 48 ತಾಸಿನೊಳಗೆ ವಿಲೇವಾರಿ ಮಾಡಬೇಕು. ವಿಷಕಾರಿಯಾದ ಈ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳದಲ್ಲಿ, ಕೆರೆಗಳ ಅಂಗಳದಲ್ಲಿ ಅಥವಾ ಸಿಕ್ಕ ಸಿಕ್ಕಲ್ಲಿ ಎಸೆಯುವಂತಿಲ್ಲ. ಪರಿಸರ ಮಾಲಿನ್ಯ ಉಂಟು ಮಾಡುವ ಹಾಗೂ ಮನುಷ್ಯನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಈ ತ್ಯಾಜ್ಯದ ವಿಲೇವಾರಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯಬೇಕು.

ನಿಷ್ಕ್ರಿಯಗೊಳಿಸಬೇಕು: ಆಸ್ಪತ್ರೆಗಳಲ್ಲಿ ವೈದ್ಯಕೀಯ ವಸ್ತುಗಳನ್ನು ಚಿಕಿತ್ಸೆ ಅಥವಾ ವೈದ್ಯಕೀಯ ಕಾರ್ಯಕ್ಕೆ ಬಳಸಿದ ನಂತರ ಶೇ 1ರಷ್ಟು ಹೈಪೊಕ್ಲೋರೈಟ್‌ ರಾಸಾಯನಿಕ ಬಳಸಿ ಆ ವಸ್ತುಗಳನ್ನು ನಿಷ್ಕ್ರಿಯಗೊಳಿಸಬೇಕು. ನಂತರ ಅವುಗಳನ್ನು ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸಾಗಿಸಬೇಕೆಂಬ ನಿಯಮವಿದೆ. ಜಿಲ್ಲೆಯಲ್ಲಿ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಗುತ್ತಿಗೆ ಪಡೆದಿರುವ ಮೀರಾ ಎನ್ವಿರೊಟೆಕ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಕಂಪೆನಿಯು ನಗರದ ಹೊರವಲಯದ ಚಿಂತಾಮಣಿ ರಸ್ತೆಯಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಿದೆ.

ನಗರದ ಪ್ರತಿ ಆಸ್ಪತ್ರೆ, ನರ್ಸಿಂಗ್‌ ಹೋಂ, ಕ್ಲಿನಿಕ್‌, ಡಯಾಗ್ನಿಸ್ಟಿಕ್‌ ಲ್ಯಾಬೊರೇಟರಿ ಮತ್ತು ರಕ್ತನಿಧಿ ಕೇಂದ್ರಗಳು ಈ ಕಂಪೆನಿಯಲ್ಲಿ ನೋಂದಣಿ ಮಾಡಿಕೊಂಡು ವೈದ್ಯಕೀಯ ತ್ಯಾಜ್ಯವನ್ನು ಇದೇ ಕಂಪೆನಿಗೆ ಕೊಡಬೇಕು. ಕಂಪೆನಿ ಸಿಬ್ಬಂದಿ ಎರಡು ದಿನಕ್ಕೊಮ್ಮೆ ನೋಂದಾಯಿತ ಆಸ್ಪತ್ರೆಗಳಿಗೆ ಬಂದು ವೈದ್ಯಕೀಯ ತ್ಯಾಜ್ಯ ಸಂಗ್ರಹಿಸಬೇಕು. ಇದಕ್ಕೆ ಪ್ರತಿಯಾಗಿ ಆಸ್ಪತ್ರೆಗಳು ಕಂಪೆನಿಗೆ ಶುಲ್ಕ ಪಾವತಿಸಬೇಕು. ಆಸ್ಪತ್ರೆಯಲ್ಲಿನ ಹಾಸಿಗೆಗಳ ಸಾಮರ್ಥ್ಯ ಅಥವಾ ಉತ್ಪತ್ತಿಯಾಗುವ ವೈದ್ಯಕೀಯ ತಾಜ್ಯದ ತೂಕದ ಆಧಾರದಲ್ಲಿ ಶುಲ್ಕ ನಿಗದಿಪಡಿಸಲಾಗುತ್ತದೆ.

ಕಾನೂನು ಏನು?:  ಪರಿಸರ (ಸಂರಕ್ಷಣೆ) ಕಾಯಿದೆಯ ಸೆಕ್ಷನ್‌ 5ರ ಪ್ರಕಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ವೈದ್ಯಕೀಯ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಆಸ್ಪತ್ರೆಗಳ ಆಡಳಿತ ಮಂಡಳಿ ಸದಸ್ಯರ ವಿಚಾರಣೆ ನಡೆಸಿ ನೋಟಿಸ್‌ ನೀಡಬಹುದು.

ಅಲ್ಲದೇ, ಅಂಥ ಆಸ್ಪತ್ರೆಗಳನ್ನು ಮುಚ್ಚುವಂತೆ ಆದೇಶ ಹೊರಡಿಸಬಹುದು. ಆ ಆಸ್ಪತ್ರೆಗಳಿಗೆ ನೀರು, ವಿದ್ಯುತ್‌ ಸೇವೆ ನಿಲ್ಲಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯಬಹುದು. ಆಸ್ಪತ್ರೆಗಳ ಪರವಾನಗಿ ಸಹ ರದ್ದುಪಡಿಸಬಹುದು. ಮತ್ತೊಂದೆಡೆ ಆಸ್ಪತ್ರೆಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಬಹುದು. ನ್ಯಾಯಾಲಯದಲ್ಲಿ ಆರೋಪ ಸಾಬೀತಾದರೆ ಆಸ್ಪತ್ರೆಗಳ ಆಡಳಿತ ಮಂಡಳಿ ಸದಸ್ಯರಿಗೆ 1 ವರ್ಷ ಜೈಲು ಶಿಕ್ಷೆ ಮತ್ತು ₹ 5 ಸಾವಿರ ದಂಡ ವಿಧಿಸಬಹುದು.

ಆಸ್ಪತ್ರೆಗಳ ಕಳ್ಳದಾರಿ: ನಗರದ ಬಹುಪಾಲು ಆಸ್ಪತ್ರೆಗಳು ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಪಾವತಿಸಬೇಕಾದ ಶುಲ್ಕ ಉಳಿಸುವ ದುರುದ್ದೇಶದಿಂದ ಕಳ್ಳದಾರಿ ಹಿಡಿದಿವೆ. ಮೀರಾ ಎನ್ವಿರೊಟೆಕ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯಲ್ಲಿ ನೊಂದಣಿ ಮಾಡಿಸದೆ ವೈದ್ಯಕೀಯ ತ್ಯಾಜ್ಯವನ್ನು ನಿಯಮಬಾಹಿರವಾಗಿ ಕೋಲಾರಮ್ಮ ಕೆರೆ ಅಂಗಳದಲ್ಲಿ ಸುರಿಯುತ್ತಿವೆ. ಕೆರೆಯ ಅಂಗಳದ ತುಂಬೆಲ್ಲಾ ವೈದ್ಯಕೀಯ ತ್ಯಾಜ್ಯ ರಾಶಿಯಾಗಿ ಬಿದ್ದಿದ್ದು, ದಿನದಿಂದ ದಿನಕ್ಕೆ ಕೆರೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ವೈದ್ಯಕೀಯ ತ್ಯಾಜ್ಯ ನಿರ್ವಹಣೆಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಆದರೆ, ಅಧಿಕಾರಿಗಳ ಕಣ್ತಪ್ಪಿಸಿ ನಡೆಯುತ್ತಿರುವ ತ್ಯಾಜ್ಯ ವಿಲೇವಾರಿ ಯಿಂದ ಕೆರೆಯೊಡಲು ವಿಷಮಯವಾಗುತ್ತಿದೆ.

- ಜೆ.ಆರ್. ಗಿರೀಶ್

ದುರ್ನಾತ, ವಾಸಕ್ಕೆ ಕಷ್ಟ

ನಗರಸಭೆ ಪೌರ ಕಾರ್ಮಿಕರು ಹಾಗೂ ಆಸ್ಪತ್ರೆಗಳ ಕೆಲಸಗಾರರು ರಾತ್ರೋರಾತ್ರಿ ಟ್ರ್ಯಾಕ್ಟರ್‌ಗಳಲ್ಲಿ ವೈದ್ಯಕೀಯ ತ್ಯಾಜ್ಯ ಸಾಗಿಸಿಕೊಂಡು ಬಂದು ಕೆರೆ ಅಂಗಳದಲ್ಲಿ ಸುರಿಯುತ್ತಿದ್ದಾರೆ. ಈ ತ್ಯಾಜ್ಯ ಕೊಳೆತು ದುರ್ನಾತ ಬೀರುತ್ತಿದ್ದು, ಹಂದಿ, ಸೊಳ್ಳೆ ಹಾಗೂ ಬೀದಿ ನಾಯಿಗಳ ಕಾಟ ಹೆಚ್ಚಿದೆ. ಇದರಿಂದ ಬಡಾವಣೆಯಲ್ಲಿ ವಾಸ ಮಾಡುವುದೇ ಕಷ್ಟವಾಗಿದೆ. –ಯಲ್ಲಮ್ಮ, ಅಂಬೇಡ್ಕರ್‌ನಗರ ನಿವಾಸಿ

ADVERTISEMENT

ಶೇ 75ರಷ್ಟು ನೋಂದಣಿ

ನಗರದ ಆಸ್ಪತ್ರೆಗಳ ಪೈಕಿ ಶೇ 75ರಷ್ಟು ಮಾತ್ರ ಮೀರಾ ಎನ್ವಿರೊಟೆಕ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯಲ್ಲಿ ನೊಂದಣಿ ಮಾಡಿಸಿ ವೈಜ್ಞಾನಿಕ ರೀತಿಯಲ್ಲಿ ಸಮರ್ಪಕವಾಗಿ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡುತ್ತಿವೆ. ಉಳಿದ ಶೇ 25ರಷ್ಟು ಆಸ್ಪತ್ರೆಗಳು ತ್ಯಾಜ್ಯವನ್ನು ಪಾಳುಬಿದ್ದ ಬಾವಿಗಳಿಗೆ ಸುರಿಯುತ್ತಿವೆ ಮತ್ತು ದೊಡ್ಡ ಗುಂಡಿಗಳಲ್ಲಿ ಹೂಳುತ್ತಿವೆ ಹಾಗೂ ಬೆಂಕಿ ಹಚ್ಚಿ ಸುಡುತ್ತಿವೆ.
–ಸಿ.ಆರ್.ಮಂಜುನಾಥ್, ಜಿಲ್ಲಾ ಪರಿಸರ ಅಧಿಕಾರಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.