ADVERTISEMENT

ಗುತ್ತಿಗೆದಾರರಿಂದ ಕೆರೆಯ ನೀರಿನ ಬಳಕೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 7:20 IST
Last Updated 14 ನವೆಂಬರ್ 2017, 7:20 IST

ಕೆಜಿಎಫ್‌: ಕೆರೆಯ ನೀರು ಅನ್ಯ ಕಾರಣಕ್ಕೆ ಬಳಸಬಾರದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶ ಹೊರಡಿಸಿದ್ದರು ಸಹ ಖಾಸಗಿ ವ್ಯಕ್ತಿಗಳು ಟ್ಯಾಂಕರ್‌ ಮೂಲಕ ಕೆರೆ ನೀರು ಬಳಸುತ್ತಿರುವ ಪ್ರಕರಣಗಳು ನಡೆಯುತ್ತಿವೆ.

ಸುಮಾರು ಹನ್ನೆರಡು ವರ್ಷಗಳ ಬಳಿಕ ತಾಲ್ಲೂಕಿನ ಕೆರೆಗಳಲ್ಲಿ ನೀರು ಬಂದಿದೆ. ಸಣ್ಣಪುಟ್ಟ ಕುಂಟೆಗಳ ಜತೆಗೆ ದೊಡ್ಡ ಕೆರೆಗಳು ಸಾಕಷ್ಟು ಪ್ರಮಾಣದಲ್ಲಿ ಭರ್ತಿಯಾಗಿದೆ. ಇಷ್ಟು ವರ್ಷಗಳ ಕಾಲ ನೀರಿಗಾಗಿ ಕೊಳವೆಬಾವಿ ತೋಡಿ ಅಂತರ್ಜಲ ಕಡಿಮೆಯಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ 1200 ಅಡಿಗೂ ಮೇಲ್ಟಟ್ಟು ಕೊಳವೆ ಅಳವಡಿಸಿದರೆ ಮಾತ್ರ ನೀರು ಸಿಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ನಗರದಲ್ಲಿ ಕಾಮಗಾರಿ ನಡೆಸುವ ಗುತ್ತಿಗೆದಾರರು ಹೊರವಲಯದಲ್ಲಿರುವ ಕೆರೆಗಳಲ್ಲಿ ಟ್ಯಾಂಕರ್ ಮೂಲಕ ನೀರು ತೆಗೆದುಕೊಂಡು ತಮ್ಮ ಕಾಮಗಾರಿಗೆ ಬಳಸಿಕೊಳ್ಳುತ್ತಿದ್ದಾರೆ. ನಗರದಲ್ಲಿ ಟ್ಯಾಂಕರ್‌ಗೆ ಕನಿಷ್ಠ 500 ರೂಪಾಯಿ ನೀಡಬೇಕು. ಇನ್ನೂ ಕಡಿಮೆ ಖರ್ಚಿನಲ್ಲಿ ನೀರು ಪಡೆಯಲು ಗುತ್ತಿಗೆದಾರರು ಈ ಉಪಾಯ ಹೂಡಿದ್ದಾರೆ.

ADVERTISEMENT

ಟ್ಯಾಂಕರ್‌ ಎಂಜಿನ್‌ಗೆ ನೀರು ಎತ್ತುವ ಎಂಜಿನ್‌ ಜೋಡಿಸಿ, ಅದಕ್ಕೆ ಕೊಳವೆ ಜೋಡಿಸಲಾಗತ್ತದೆ. ಕೊಳವೆಯ ಒಂದು ತುದಿಯನ್ನು ಕೆರೆಯ ನೀರಿಗೆ ಬಿಡುವುದರ ಮೂಲಕ ನೀರು ತುಂಬಲಾಗುತ್ತದೆ. ಅಶೋಕನಗರದಲ್ಲಿ ಬೃಹತ್‌ ಕಾಮಗಾರಿಗಳು ನಡೆಯುತ್ತಿದ್ದು, ಅಲ್ಲಿಗೆ ಕೆರೆಯ ನೀರು ಯಥೇಚ್ಛವಾಗಿ ಬಳಸಲಾಗುತ್ತಿದೆ ಎಂದು ಟ್ಯಾಂಕರ್ ಚಾಲಕ ಹೇಳುತ್ತಾನೆ.

ನಗರದ ಹೊರವಲಯದ ಗೋಶಾಲೆ ಬಳಿ ಇರುವ ಕೆರೆಯಿಂದ ನೀರನ್ನು ಪ್ರತಿದಿನ ಪಡೆಯಲಾಗುತ್ತಿದೆ. ರಾಜಾರೋಷವಾಗಿ ನಡೆಯುತ್ತಿರುವ ಈ ದಂಧೆ ತಡೆಯಲು ಪಂಚಾಯಿತಿ ಅಧಿಕಾರಿಗಳಾಗಲಿ, ಪೊಲೀಸರಾಗಲಿ ಪ್ರಯತ್ನಿಸಿಲ್ಲ.

ಈ ಕೆರೆ ಬರುವ ಪಾರಾಂಡಹಳ್ಳಿ ಪಂಚಾಯಿತಿ ಅಧ್ಯಕ್ಷ ಅಶೋಕ್‌, ಇಂತಹ ಘಟನೆಗಳು ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಪಂಚಾಯಿತಿ ಕಚೇರಿಯಿಂದ ಕೇವಲ ಒಂದು ಕಿ.ಮೀ ದೂರದ ಮುಖ್ಯ ರಸ್ತೆಯಲ್ಲಿಯೇ ನೀರಿನ ಸಾಗಾಣಿಕೆ ನಡೆಯುತ್ತಿರುವುದು ವಿಪರ್ಯಾಸ.

'ಕಾಮಗಾರಿ ನಡೆಸುವ ಗುತ್ತಿಗೆದಾರರು ಕಾಮಗಾರಿಗೆ ಬಳಸುವ ನೀರನ್ನು ತಾವೇ ಖಾಸಗಿಯಾಗಿ ವ್ಯವಸ್ಥೆ ಮಾಡಿಕೊಳ್ಳಬೇಕು. ಈ ಬಗ್ಗೆ ದೂರುಗಳು ಇದ್ದರೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಹನುಮಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.