ADVERTISEMENT

ಜಾನಪದ ಕಲೆ ಮೆಗಾ ಇವೆಂಟ್‌ ಅಲ್ಲ

ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2016, 10:32 IST
Last Updated 28 ಸೆಪ್ಟೆಂಬರ್ 2016, 10:32 IST
ಕೋಲಾರದಲ್ಲಿ ಮಂಗಳವಾರ ನಡೆದ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿದರು
ಕೋಲಾರದಲ್ಲಿ ಮಂಗಳವಾರ ನಡೆದ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿದರು   

ಕೋಲಾರ: ‘ಜಾನಪದ ಕಲೆ ಎಂದರೆ ಪ್ರದರ್ಶನ, ಆಡಂಬರ ಅಥವಾ ಅದ್ಧೂರಿತನ ತೋರಿಸುವ ಮೆಗಾ ಇವೆಂಟ್‌ ಅಲ್ಲ. ಬದಲಿಗೆ ಸಾಂಸ್ಕೃತಿಕ ಒಳಪಯಣಗಳ ವಾರಸುದಾರಿಕೆ ಮುಂದುವರಿಸುವ ಪ್ರಯತ್ನ’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಜೀಶಂಪ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಹಣದಿಂದ ಜಾನಪದ ಕಲಾವಿದರನ್ನು ಸೃಷ್ಟಿ ಮಾಡಲು ಆಗುವುದಿಲ್ಲ. ಬೇಕಿದ್ದರೆ ದಲ್ಲಾಳಿಗಳನ್ನು ಸೃಷ್ಟಿಸಬಹುದು ಎಂದು ತಿಳಿಸಿದರು.

ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಜಾನಪದ ಕಲಾವಿದರನ್ನು ಸಂಕ್ರಾಂತಿ ಹಬ್ಬದ ಎತ್ತುಗಳಂತೆ ಸಿಂಗರಿಸುವುದಕ್ಕಷ್ಟೇ ಸೀಮಿತಗೊಳಿಸಿವೆ. ಕಲಾವಿದರು ನಿರ್ಗತಿಕರಿರಬಹುದು. ಆ ಕಾರಣಕ್ಕೆ ಪ್ರಭುತ್ವವು ಅವರನ್ನು ದಾಸ್ಯಕ್ಕೆ ಬಳಸಿಕೊಳ್ಳಬಾರದು. ದೇಶದಲ್ಲಿ ಸರಿಯಾದ ಸಾಂಸ್ಕೃತಿಕ ನೀತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿರೋಧಗಳ ನೆಲೆಗಳ ಮೇಲೆ ಬೆಳೆದ ಜನಪದ ಕರಗಿ ಹೋಗಬಾರದು. ಪ್ರಭುತ್ವದ ನೆಲೆಗೆ ಪ್ರತಿರೋಧಿಸುವ ನೆಲೆಯಾಗಿ ಜನಪದ ಬಳಕೆಯಾಗಬೇಕು. ಜಾನಪದ ಸಮ್ಮೇಳನ ಜೋಡೆತ್ತಿನ ಮೆರವಣಿಗೆ ಆಗಬಾರದು. ಜನಪದವು ವಿವೇಕ ಹಂಚಿಕೊಳ್ಳುವ ತಾಯಿಬೇರಿನಂತಿದೆ. ಇದನ್ನು ಉಳಿಸಲು ಸರಿಯಾದ ಸಾಂಸ್ಕೃತಿಕ ನೀತಿ ರಚಿಸಬೇಕು. ಸಾಮಾಜಿಕ ನ್ಯಾಯದ ತಳಹದಿ ಮೇಲೆ ಕಟ್ಟಿದ ವೇದಿಕೆಯಾಗಿ ಜಾನಪದವನ್ನು ಉಳಿಸುವ ಜವಾಬ್ದಾರಿ ಇದೆ ಎಂದರು.

ಜನಪದವು ಯಾರದೋ ಮುಖಸ್ತುತಿಗೆ ಸೀಮಿತ ಆಗಬಾರದು. ಅದನ್ನು ತಮಗೆ ಬೇಕಾದಂತೆ ಬಳಸಿಕೊಳ್ಳದೆ ಅದರ ಒಳನೋಟದ ವಿವೇಕವನ್ನು ಹಂಚಿಕೊಳ್ಳುವಂತಾಗಬೇಕು. ಆಧುನಿಕ ಕಲೆಗಳು ಜನರ ಮೇಲೆ ಪ್ರಭಾವ ಬೀರುತ್ತಿರುವುದರಿಂದ ಸಂಸ್ಕೃತಿಗೆ ಹೆಚ್ಚು ಸ್ಥಾನಮಾನ ಕೊಟ್ಟು ಗೌರವಿಸಿ ಅದನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಆಗಬೇಕು ಎಂದು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.