ADVERTISEMENT

ನಗರದಲ್ಲಿ ದ್ರಾಕ್ಷಿ, ಕಲ್ಲಂಗಡಿ ಮೇಳಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 10:38 IST
Last Updated 16 ಫೆಬ್ರುವರಿ 2017, 10:38 IST
ಕೋಲಾರ: ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘವು (ಹಾಪ್‌ಕಾಮ್ಸ್‌) ನಗರದಲ್ಲಿ ಹಮ್ಮಿಕೊಂಡಿರುವ ದ್ರಾಕ್ಷಿ ಹಾಗೂ ಕಲ್ಲಂಗಡಿ ಹಣ್ಣು ಮಾರಾಟ ಮೇಳಕ್ಕೆ ನಗರಸಭೆ ಅಧ್ಯಕ್ಷ ಮಹಾಲಕ್ಷ್ಮಿ ಬುಧವಾರ ಚಾಲನೆ ನೀಡಿದರು.
 
ನಗರದ ಸರ್ವಜ್ಞ ಪಾರ್ಕ್ ಬಳಿ ಇರುವ ಹಾಪ್‌ಕಾಮ್ಸ್‌ ಮಳಿಗೆಯಲ್ಲಿ ಮೇಳ ಉದ್ಘಾಟಿಸಿದ ಅವರು, ‘ಗ್ರಾಹಕರು ಹಾಗೂ ದ್ರಾಕ್ಷಿ ಮತ್ತು ಕಲ್ಲಂಗಡಿ ಬೆಳೆಗಾರರ ಅನುಕೂಲಕ್ಕಾಗಿ ಈ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ ರಿಯಾಯಿತಿ ದರದಲ್ಲಿ ಹಣ್ಣುಗಳನ್ನು ಮಾರಲಾಗುತ್ತಿದ್ದು, ಗ್ರಾಹಕರು ಇದರ ಸದುಪಯೋಗ ಪಡೆಯಬೇಕು’ ಎಂದರು.
 
‘ಸೋನಿಕಾ, ಶರದ್‌ ಸೂಪರ್‌, ಸೂಪರ್‌ ಸೋನಿಕಾ ಮತ್ತು ಥಾಮ್ಸನ್‌ ತಳಿಯ ದ್ರಾಕ್ಷಿಗಳು, ಕಿರಣ್‌ ಮತ್ತು ನಾಮಧಾರಿ ತಳಿಯ ಕಲ್ಲಂಗಡಿ ಹಣ್ಣುಗಳನ್ನು ಮೇಳದಲ್ಲಿ ಇಡಲಾಗಿದೆ’ ಎಂದು ಹಾಪ್‌ಕಾಮ್ಸ್‌ ಅಧ್ಯಕ್ಷ ಜಿ.ಆರ್‌.ಶ್ರೀನಿವಾಸನ್‌ ಹೇಳಿದರು.
 
ಸೌಲಭ್ಯ ವಿಸ್ತರಣೆ: ‘ಜಿಲ್ಲೆಯ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಪ್ರತಿನಿತ್ಯ ಸುಮಾರು 55 ಕೆ.ಜಿ ದ್ರಾಕ್ಷಿ ಹಾಗೂ 1.50 ಟನ್‌್ ಕಲ್ಲಂಗಡಿ ಮಾರಾಟವಾಗುತ್ತಿದೆ. ಈ ಮೇಳ ಆಯೋಜಿಸಿರುವುದರಿಂದ ದಿನಕ್ಕೆ ಒಂದು ಸಾವಿರ ಕೆ.ಜಿ ದ್ರಾಕ್ಷಿ ಹಾಗೂ ಸುಮಾರು ಎರಡು ಟನ್‌ ಕಲ್ಲಂಗಡಿ ಹಣ್ಣು ಮಾರಾಟವಾಗುವ ನಿರೀಕ್ಷೆ ಇದೆ’ ಎಂದು ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಮಾಹಿತಿ ನೀಡಿದರು.
 
ಬೆಂಗಳೂರಿನ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಆನ್‌ಲೈನ್‌ ಮೂಲಕ ವಹಿವಾಟು ನಡೆಸುವ ಮತ್ತು ಬಿಲ್‌ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಸದ್ಯದಲ್ಲೇ ಜಿಲ್ಲೆಗೂ ಈ ಸೌಲಭ್ಯ ವಿಸ್ತರಿಸಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಖರೀದಿಸುವ ಗ್ರಾಹಕರ ಮನೆ ಬಾಗಿಲಿಗೆ ಅವುಗಳನ್ನು ಸಾರಿಗೆ ವೆಚ್ಚವಿಲ್ಲದೆ ಉಚಿತವಾಗಿ ತಲುಪಿಸಲಾಗುತ್ತದೆ ಎಂದು ತಿಳಿಸಿದರು.
 
ಗ್ರಾಹಕರಿಗೆ ಒಂದೇ ಸೂರಿನಡಿ ಎಲ್ಲಾ ಬಗೆಯ ತೋಟಗಾರಿಕಾ ಉತ್ಪನ್ನಗಳನ್ನು ತಲುಪಿಸಲು ಬೆಂಗಳೂರಿನಲ್ಲಿ 2016ರ ಡಿಸೆಂಬರ್‌ ತಿಂಗಳಲ್ಲಿ ಹಾರ್ಟಿ ಬಜಾರ್‌ ಮಳಿಗೆ ತೆರೆಯಲಾಗಿದೆ. ಈ ಮಳಿಗೆಯಲ್ಲಿ ದಿನಕ್ಕೆ ಸುಮಾರು ₹ 50 ಸಾವಿರ ವಹಿವಾಟು ನಡೆಯುತ್ತಿದೆ. ಬೆಂಗಳೂರಿನ ಮಲ್ಲೇಶ್ವರದಲ್ಲಿ ಫೆಬ್ರುವರಿ ಅಂತ್ಯದಲ್ಲಿ ಹಾರ್ಟಿ ಬಜಾರ್‌ನ ಮತ್ತೊಂದು ಮಳಿಗೆ ಆರಂಭಿಸಲಾಗುತ್ತದೆ ಎಂದರು.
 
ತರಕಾರಿ ಹಾಗೂ ಹಣ್ಣುಗಳ ಮಾರಾಟ ದರವನ್ನು ಬೆಂಗಳೂರಿನಲ್ಲಿ ನಿಗದಿಪಡಿಸಲಾಗುತ್ತಿದೆ. ಆದರೆ, ಜಿಲ್ಲೆಯ ಸ್ಥಳೀಯ ಮಾರುಕಟ್ಟೆಗೆ ಹೋಲಿಸಿದರೆ ಈ ದರಗಳು ಹೆಚ್ಚಿವೆ. ಹೀಗಾಗಿ ಸ್ಥಳೀಯ ಮಾರುಕಟ್ಟೆಗೆ ಅನುಗುಣವಾಗಿ ಮಾರಾಟ ನಿಗದಿಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಜತೆಗೆ ಸ್ಥಳೀಯ ರೈತರಿಂದ ಸಿಗುವ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಸ್ಥಳೀಯವಾಗಿ ಮಾರಾಟ ಮಾಡಲಾಗುತ್ತದೆ. ಇದರಿಂದ ಸಾಗಣೆ ವೆಚ್ಚ ಉಳಿಯುವುದರಿಂದ ಉತ್ಪನ್ನಗಳ ಮಾರಾಟ ದರ ಕಡಿಮೆಯಾಗಲಿದೆ ಎಂದು ವಿವರಿಸಿದರು.
 
ನಗರದ ಪಾಲಸಂದ್ರ ಲೇಔಟ್‌ನಲ್ಲಿ ನೂತನವಾಗಿ ಆರಂಭಿಸಿರುವ ಹಾಪ್‌ಕಾಮ್ಸ್‌ ಮಳಿಗೆಯನ್ನು ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ ಉದ್ಘಾಟಿಸಿದರು. ಹಾಪ್‌ಕಾಮ್ಸ್‌ನ ಜಿಲ್ಲಾ ನಿರ್ದೇಶಕರಾದ ಎನ್‌.ಗೋಪಾಲಕೃಷ್ಣ, ಸುಬ್ರಮಣಿ, ನಗರಸಭೆ ಸದಸ್ಯ ರೌತ್‌ ಶಂಕರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.