ADVERTISEMENT

ಪ್ರಧಾನಿ ಮೋದಿ ಪ್ರತಿಕೃತಿ ದಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 7:04 IST
Last Updated 3 ಫೆಬ್ರುವರಿ 2018, 7:04 IST

ಮುಳಬಾಗಿಲು: ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಕೃಷಿ ಸಾಲ ಮನ್ನಾ ಘೋಷಿಸದೆ ರೈತ ವಿರೋಧಿ ಧೋರಣೆ ಅನುಸರಿಸಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ನಗರದಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯ ಪ್ರತಿಕೃತಿ ದಹಿಸಿ ಧರಣಿ ನಡೆಸಿದರು.

‘ರಾಜ್ಯದಲ್ಲಿ ಒಂದು ದಶಕದಿಂದ ಬರ ಪರಿಸ್ಥಿತಿ ಇದೆ. ಬರದಿಂದ ಕೋಟ್ಯಂತರ ರೂಪಾಯಿ ಬೆಳೆ ನಷ್ಟವಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಕೇಂದ್ರಕ್ಕೆ ಕೃಷಿ ಸಾಲ ಮನ್ನಾ ವಿಚಾರವು ರಾಜಕೀಯ ಲಾಭದ ವಸ್ತುವಾಗಿದೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಕಾರ್ಪೊರೇಟ್‌ ಕಂಪೆನಿಗಳು ಹಾಗೂ ಬಂಡವಾಳಶಾಹಿಗಳ ಸಾಲ ಮನ್ನಾ ಮಾಡುವ ಕೇಂದ್ರವು ದೇಶಕ್ಕೆ ಅನ್ನ ಬೆಳೆದು ಕೊಡುವ ರೈತರ ಸಾಲ ಮನ್ನಾ ಮಾಡಲು ಮೀನಾಮೇಷ ಎಣಿಸುತ್ತದೆ. ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ಅವೈಜ್ಞಾನಿಕ ಕೃಷಿ ನೀತಿಯಿಂದ ರೈತರು ದಿವಾಳಿಯಾಗಿದ್ದಾರೆ’ ಎಂದು ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

ADVERTISEMENT

ರೈತ ಸಂಕಷ್ಟದ ಪರಿಸ್ಥಿತಿಯಲ್ಲೂ ಬಡ್ಡಿ ಸಾಲ ಮಾಡಿ ಬೆಳೆ ಬೆಳೆಯುತ್ತಿದ್ದಾರೆ. ಆದರೆ, ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ರೈತರು ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲ ಮನ್ನಾ ಮಾಡಲು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರಿಗೆ ಅವಕಾಶವಿತ್ತು. ಆದರೆ, ಬ್ಯಾಂಕ್‌ಗಳ ಹಿತ ರಕ್ಷಣೆಗಾಗಿ ರೈತರನ್ನು ಕಡೆಗಣಿಸಿದ್ದಾರೆ ಎಂದು ದೂರಿದರು.

ನೋಟಿಸ್‌ ಜಾರಿ: ಬೆಳೆ ನಷ್ಟದಿಂದಾಗಿ ರೈತರಿಗೆ ಸಾಲದ ಕಂತು ಕಟ್ಟಲು ಕಷ್ಟವಾಗಿದೆ. ಮತ್ತೊಂದೆಡೆ ರೈತರು ಕೃಷಿ ನಿರ್ವಹಣೆ ಮಾಡಲಾಗದೆ ಪಟ್ಟಣ ಹಾಗೂ ನಗರ ಪ್ರದೇಶಕ್ಕೆ ಗುಳೆ ಹೋಗುತ್ತಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಅಧಿಕಾರಿಗಳು ಸಾಲದ ಕಂತು ಕಟ್ಟುವಂತೆ ರೈತರಿಗೆ ನೋಟಿಸ್‌ ಜಾರಿ ಮಾಡುತ್ತಿದ್ದಾರೆ. ಅಲ್ಲದೇ, ಸಾಲಕ್ಕೆ ಅಡವಿಟ್ಟಿರುವ ಜಮೀನು, ಮನೆ ಹಾಗೂ ಚಿನ್ನಾಭರಣ ಹರಾಜು ಹಾಕುವುದಾಗಿ ರೈತರನ್ನು ಬೆದರಿಸುತ್ತಿದ್ದಾರೆ ಎಂದು ಧರಣಿನಿರತರು ಆರೋಪಿಸಿದರು.

ರಾಜ್ಯ ಸರ್ಕಾರ ಸಹಕಾರಿ ರಂಗದ ಬ್ಯಾಂಕ್‌ಗಳಲ್ಲಿನ ಗರಿಷ್ಠ ₹ 50 ಸಾವಿರದವರೆಗಿನ ಸಾಲ ಮನ್ನಾ ಮಾಡಿದೆ. ಇದರಿಂದ 22.27 ಲಕ್ಷ ರೈತ ಕುಟುಂಬಗಳ ಅನುಕೂಲ ಆಗಿದೆ. ₹ 50 ಸಾವಿರಕ್ಕಿಂತ ಹೆಚ್ಚಿನ ಸಾಲದ ಮೊತ್ತ ಪಾವತಿಸಿದರೆ ಮಾತ್ರ ಸಾಲ ಮನ್ನಾ ಎಂಬ ಷರತ್ತು ವಿಧಿಸಲಾಗಿದೆ. ಇದರಿಂದ ಹೆಚ್ಚಿನ ರೈತರಿಗೆ ಅನುಕೂಲವಾಗಿಲ್ಲ. ಆದ ಕಾರಣ ಈ ಷರತ್ತು ಹಿಂಪಡೆದು ಉಳಿಕೆ ₹ 2,578 ಕೋಟಿ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಬೆಳೆ ವಿಮೆ ನೀತಿ: ಕೃಷಿಕರ ಪರವಾದ ಬೆಳೆ ವಿಮೆ ನೀತಿ ಜಾರಿಗೊಳಿಸಬೇಕು. ಸ್ವಾಮಿನಾಥನ್ ಆಯೋಗದ ವರದಿ ಅನ್ವಯ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು. ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗದಂತೆ ಗೋಶಾಲೆ ಹಾಗೂ ಮೇವು ಬ್ಯಾಂಕ್‌ ತೆರೆಯಬೇಕು. ಕೃಷಿ ಸಹಾಯಧನ ಮೊತ್ತ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ವಿಜಯ್‌ಪಾಲ್, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ತಾಲ್ಲೂಕು ಘಟಕದ ಅಧ್ಯಕ್ಷ ಫಾರೂಕ್‌ ಪಾಷಾ, ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭಾಕರ್. ಕಾರ್ಯದರ್ಶಿ ಶಿವಾರೆಡ್ಡಿ, ಸದಸ್ಯರಾದ ರಂಜಿತ್‌ಕುಮಾರ್, ದೇವರಾಜ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.