ADVERTISEMENT

‘ದೇವದಾಸಿಯರು ಮುಖ್ಯವಾಹಿನಿಗೆ ಬರಬೇಕು’

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 4:53 IST
Last Updated 13 ಏಪ್ರಿಲ್ 2017, 4:53 IST

ಹನುಮಸಾಗರ: ದೇವದಾಸಿಯರು ಸರ್ಕಾರದ ಸೌಲಭ್ಯಗಳನ್ನು ಬಳಸಿ ಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎನ್‌.ಎಸ್.ಕುಲಕರ್ಣಿ ಹೇಳಿದರು.

ಇಲ್ಲಿನ ಕರಿಸಿದ್ದೇಶ್ವರ ಸಭಾ ಭವನದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಬುಧ ವಾರ ಮಕ್ಕಳ ಸ್ನೇಹಿ ಕಾನೂನು ಸೇವೆಗಳು ಮತ್ತು ಮಕ್ಕಳ ರಕ್ಷಣೆ ಅಡಿಯಲ್ಲಿ ಏರ್ಪಡಿಸಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇವರ ಹೆಸರಿನಲ್ಲಿ ಇಲ್ಲವೆ ಬದುಕಿಗಾಗಿ ನಡೆಯುತ್ತಿರುವ ದೇವ ದಾಸಿ ಪದ್ಧತಿ, ಸಮಾಜದಲ್ಲಿ  ಮಹಿಳೆ ಯರಿಗೆ ಕಳಂಕ ತರುವ ಕೆಟ್ಟ ಸಂಪ್ರದಾಯವಾಗಿದೆ. ದೇವದಾಸಿಯರು ಇದನ್ನು  ಬಿಡಬೇಕು. ಎಲ್ಲಾ ದೇವ ದಾಸಿಯರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ, ಅವರನ್ನು ಶಿಕ್ಷಿತರನ್ನಾಗಿ ಮಾಡಬೇಕು ಎಂದು ಹೇಳಿದರು.

ADVERTISEMENT

ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿ ಸುಧಾ ಎಂ. ಚಿದ್ರಿ ಮಾತನಾಡಿ, ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿರುವ ದೇವದಾಸಿ ಪದ್ಧತಿ ಹೋಗಲಾಡಿಸಿ ಅವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಈಗಿರುವ ದೇವದಾಸಿಯರ ಬದುಕಿಗೆ ಆಸರೆಯಾಗಿ ತಿಂಗಳಿಗೆ ₹1500 ಮಾಸಾಶನ, ರಾಜೀವಗಾಂಧಿ ವಸತಿ ಯೋಜನೆಯಲ್ಲಿ ಸೂರು, ನಿಗಮದ ಅಂಚಿನ ಹಣವಾಗಿ ₹50 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು.

ವಕೀಲ ವಿಜಯ ಮಹಾಂತೇಶ ಕುಷ್ಟಗಿ ಅವರು ‘ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ’ ವಿಷಯ ಕುರಿತು ಮಾತನಾಡಿ, 18 ವರ್ಷಕ್ಕಿಂತ ಕಡಿಮೆ ಇರುವ ಹೆಣ್ಣು ಮಕ್ಕಳನ್ನು ಕಾನೂನಿನಲ್ಲಿ ಮಗು ಎಂದು ಗುರುತಿಸಲಾಗಿದೆ. ಯಾವುದೇ ವ್ಯಕ್ತಿ ಮಗುವನ್ನು ಯಾವುದೇ ರೀತಿಯಿಂದ ಪ್ರಚೋದಿ ಸುವುದು ಲೈಂಗಿಕ ದೌರ್ಜನ್ಯವಾಗುತ್ತದೆ  ಎಂದು ಹೇಳಿದರು.

ದಾದೇಸಾಬ ಹಿರೇಮನಿ ಅವರು ‘ದೇವದಾಸಿ ಸಮರ್ಪಣಾ ನಿಷೇಧ ತಿದ್ದುಪಡಿ 2009’ ಕುರಿತು ಮಾತನಾಡಿ, ದೇವದಾಸಿ ಪದ್ಧತಿ ನಿರ್ಮೂಲನೆ ಕುರಿತು  ಬೀದಿ ನಾಟಕ, ಕರ ಪತ್ರ ವಿತರಣೆ, ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. 1982 ದೇವದಾಸಿ ಸಮರ್ಪಣಾ ನಿಷೇಧ ಕಾಯ್ದೆ ಹಾಗೂ ತಿದ್ದುಪಡಿ ಕಾಯ್ದೆ 2009ರ ಪ್ರಕಾರ ಯಾವುದೇ ಹೆಣ್ಣು ಮಗುವಿಗೆ, ಮಹಿಳೆಗೆ ಮುತ್ತು ಕಟ್ಟಿ ದೇವದಾಸಿಯನ್ನಾಗಿ ಮಾಡುವುದು ಜಾಮೀನು ರಹಿತ ಅಪರಾಧವಾಗುತ್ತದೆ. ಅಂತಹ ಪದ್ಧತಿ ಪ್ರೋತ್ಸಾಹಿಸಿದವರಿಗೆ 2 ರಿಂದ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದರು.

ವಕೀಲ ಲಿಂಗರಾಜ ಅಗಸಿಮುಂದಿನ ಮಕ್ಕಳ ಕಡ್ಡಾಯ ಶಿಕ್ಷಣದ ಹಕ್ಕು ವಿಷಯವಾಗಿ ಮಾತನಾಡಿದರು.ಸಿವಿಲ್‌ ನ್ಯಾಯಾಧೀಶ ಬಿ.ಕೇಶವಮೂರ್ತಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ನಾಗಪ್ಪ ಸೂಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಭೀಮಣ್ಣ ಅಗಸಿಮುಂದಿನ, ತಾಲ್ಲೂಕು ಪಂಚಾಯಿತಿ ಸದಸ್ಯೆ ಶಕೀಲಾ ಡಲಾಯತ್‌, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದ್ರಾಕ್ಷಾಯಿಣಿ ಕಟಗಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಮೂಲಿಮನಿ, ವಕೀಲ ಸಿ.ಎನ್‌.ಉಪ್ಪಿನ ಇದ್ದರು.
ದಾದೇಸಾಬ ಹಿರೇಮನಿ ಸ್ವಾಗತಿಸಿದರು. ಭೀಮಸೇನರಾವ್‌ ನಿರೂಪಿಸಿದರು. ಮರಿಯಪ್ಪ ಮುಳ್ಳೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.