ADVERTISEMENT

ಮಾಲಿನ್ಯ ಮುಕ್ತವಾಗದ ಶಾಖಾಪುರ

ದಾಖಲೆಗಳಲ್ಲಿ ಲಕ್ಷ ಲಕ್ಷ ಖರ್ಚು, ಅಭಿವೃದ್ಧಿ ಮಾತ್ರ ಶೂನ್ಯ: ಗ್ರಾಮಸ್ಥರ ಆರೋಪ

ನಾರಾಯಣರಾವ ಕುಲಕರ್ಣಿ
Published 10 ಜನವರಿ 2017, 9:02 IST
Last Updated 10 ಜನವರಿ 2017, 9:02 IST
ಕುಷ್ಟಗಿ ತಾಲ್ಲೂಕು ಶಾಖಾಪುರ ಗ್ರಾಮದ ಜನವಸತಿ ಪ್ರದೇಶದಲ್ಲಿ ಕೊಳಚೆ ನೀರು ಹರಿಯುತ್ತಿರುವುದು.
ಕುಷ್ಟಗಿ ತಾಲ್ಲೂಕು ಶಾಖಾಪುರ ಗ್ರಾಮದ ಜನವಸತಿ ಪ್ರದೇಶದಲ್ಲಿ ಕೊಳಚೆ ನೀರು ಹರಿಯುತ್ತಿರುವುದು.   
ಕುಷ್ಟಗಿ: ಸಮೀಪದ ಶಾಖಾಪುರ ಗ್ರಾಮದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಅಸಮರ್ಪಕ ರಸ್ತೆ, ಶೌಚಾಲಯ ಅವ್ಯವಸ್ಥೆ, ಎಲ್ಲೆಂದರಲ್ಲಿ ಕೊಳಚೆಯಿಂದಾಗಿ ಗ್ರಾಮಸ್ಥರು ಪರದಾಡುವಂತಾಗಿದೆ.
 
‘ಅಭಿವೃದ್ಧಿ ಹೆಸರಿನಲ್ಲಿ ಕಳೆದ ಐದಾರು ವರ್ಷದಲ್ಲಿ ಖರ್ಚಾಗಿರುವ ಹಣ ಕೋಟಿಗೂ ಅಧಿಕ. ತಾಲ್ಲೂಕು ಕೇಂದ್ರದಿಂದ ಕೇವಲ ಐದು ಕಿಮೀ ದೂರದಲ್ಲಿರುವ ಈ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡುವುದೇ ಅಪರೂಪ. ಸುವರ್ಣಗ್ರಾಮ, ಗ್ರಾಮ ಸ್ವರಾಜ್‌, ಮಹಾತ್ಮಗಾಂಧಿ ನರೇಗಾ ಯೋಜನೆ ಹೀಗೆ ಹತ್ತಾರು ಯೋಜನೆಗಳ ಹೆಸರಿನಲ್ಲಿ ಈ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಹಣ ಖರ್ಚಾಗಿರುವುದು ಸರ್ಕಾರಿ ಕಡತಗಳಲ್ಲಿ ದಾಖಲಾಗಿದೆ. ಆದರೆ ಗ್ರಾಮದಲ್ಲಿ ಕಂಡುಬರುವ ಚಿತ್ರಣ ಅಭಿವೃದ್ಧಿ ಹೆಸರಿಗೆ ಮಾತ್ರ ಎನ್ನುವಂತಾಗಿದೆ’ ಎಂಬುದು ಗ್ರಾಮಸ್ಥರ ದೂರು.
 
‘ಕೊರಡಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಊರಿನಲ್ಲಿ ನೈರ್ಮಲ್ಯದ ಕೊರತೆ ಸಮಸ್ಯೆ ಹೆಚ್ಚಿದೆ. ರಾಜ್ಯಹೆದ್ದಾರಿ ಈ ಊರ ಮಧ್ಯೆ ಹಾದುಹೋಗಿದ್ದರೂ ಅಕ್ಕಪಕ್ಕ ತಿಪ್ಪೆಗುಂಡಿಗಳು ಇವೆ. ರಸ್ತೆ ಕಿರಿದಾಗಿದೆ. ರಸ್ತೆ ಅಂಚಿನ ಜಾಗ ಬಯಲು ಶೌಚಾಲಯವಾಗಿದೆ. ಜನವಸತಿ ಪ್ರದೇಶಕ್ಕೆ ಹೊಂದಿಕೊಂಡೆ ಕೆರೆ ರೂಪದಲ್ಲಿ ಕೊಳಚೆನೀರು ಮಡುಗಟ್ಟಿದೆ. ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಇಲ್ಲದ ಕಾರಣ  ವಾತಾವರಣ ದುರ್ವಾಸನೆ ಬೀರುತ್ತಿದೆ. ಚರಂಡಿಗಳಿದ್ದರೂ ಕೊಳಚೆ ಸಂಗ್ರಹವಾಗಿದೆ’ ಎನ್ನುತ್ತಾರೆ ಗ್ರಾಮದ ಹಿರಿಯರಾದ ಹನುಮಂತಪ್ಪ, ಶರಣಪ್ಪ.
 
ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಆವರಣ ಗೋಡೆಯ ಸುತ್ತ ತಿಪ್ಪೆಗುಂಡಿಗಳಿವೆ, ಕೊಳಚೆ ನೀರು ನಿಂತಿದೆ, ಹಂದಿಗಳು ಬಿಡಾರ ಹೂಡಿರುವೆ. ಮಕ್ಕಳು, ಶಿಕ್ಷಕರು ದುರ್ವಾಸನೆಯಲ್ಲಿ ಕಾಲಕಳೆಯುವಂತಾಗಿದೆ’ ಎಂದು ಅವರು ದೂರುತ್ತಾರೆ.
 
‘ಸ್ವಚ್ಛಭಾರತ ಅಭಿಯಾನ ಮತ್ತಿತರೆ ಯೋಜನೆಗಳಲ್ಲಿ ಈ ಗ್ರಾಮದಲ್ಲಿ ವೈಯಕ್ತಕ ಶೌಚಾಲಯಗಳು ನಿರ್ಮಾಣಗೊಂಡಿವೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೇಳುತ್ತಾರೆ. ಆದರೆ ಗ್ರಾಮದಲ್ಲಿ ಸ್ವಚ್ಛತೆಯೇ ಇಲ್ಲ’ ಎಂದು ಹನುಮಪ್ಪ ದೂರುತ್ತಾರೆ.
 
ವಿದ್ಯುತ್‌, ನೀರು ಪೋಲು: ಹತ್ತಾರು ವರ್ಷಗಳ ಪ್ರಯತ್ನದ ನಂತರ ಕೆಲ ದಿನಗಳ ಹಿಂದಷ್ಟೆ ಶುದ್ಧಕುಡಿಯುವ ನೀರಿನ ಘಟಕ ಆರಂಭಗೊಂಡಿದೆ. ಆದರೆ ನೀರುಗಂಟಿಗಳ ಅಸಮರ್ಪಕ ನಿರ್ವಹಣೆಯಿಂದ ಅವು ಬಂದ್‌ ಆಗಿವೆ. ಅದರಿಂದ ಅಂತರ್ಜಲ ಪೋಲಾಗುವುದರ ಜೊತೆಗೆ ವಿದ್ಯುತ್‌ ಕೂಡ ಪೋಲಾಗುತ್ತದೆ.  ಬೀದಿದೀಪಗಳು ಹಗಲಿನಲ್ಲಿಯೂ  ಉರಿಯುತ್ತವೆ. ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಸೌಲಭ್ಯ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.
 
**
ಗ್ರಾಮದಲ್ಲಿ ಅನೇಕ ಸಮಸ್ಯೆಗಳಿವೆ, ತಾಲ್ಲೂಕು ಕೇಂದ್ರದ ಪಕ್ಕದಲ್ಲಿದ್ದರೂ ಒಬ್ಬ ಅಧಿಕಾರಿ ಭೇಟಿ ನೀಡಿಲ್ಲ. ಸಂಬಂಧಪಟ್ಟವರು ಇನ್ನಾದರೂ ಕ್ರಮ ಕೈಗೊಳ್ಳಬೇಕು 
-ಹನುಮಪ್ಪ,
ಗ್ರಾಮಸ್ಥ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.