ADVERTISEMENT

ರೈತರ ನೆರವಿಗೆ ಬಾರದ ಸರ್ಕಾರಗಳು: ಆಕ್ರೋಶ

ಸಾಲಮನ್ನಾ, ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಹೋರಾಟ ನಡೆಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 8:23 IST
Last Updated 6 ಮಾರ್ಚ್ 2017, 8:23 IST
ಕುಷ್ಟಗಿ:  ಬರಗಾಲದಿಂದ ರೈತರು ಕಂಗಾಲಾಗಿದ್ದು, ಕೃಷಿ ಮತ್ತು ತೋಟಗಾರಿಕೆ ಸಾಲವನ್ನು ಮನ್ನಾ ಮಾಡುವಂತೆ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಘಟಕವು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
 
 ಭಾನುವಾರ ಇಲ್ಲಿ ನಡೆದ ಸಂಘದ ಸಭೆಯಲ್ಲಿ ಮಾತನಾಡಿದ ಪ್ರಮುಖರು, ರೈತರ ನೆರವಿಗೆ ಬರುವಲ್ಲಿ ಎರಡೂ ಸರ್ಕಾರಗಳು ವಿಫಲವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಮಳೆ ಇಲ್ಲದೆ ಅಂತರ್ಜಲ ಬತ್ತಿ ಹೋಗಿದೆ, ತೋಟಗಳಲ್ಲಿನ ಗಿಡಗಳು ಒಣಗುತ್ತಿವೆ, ಹಿಂಗಾರಿನಲ್ಲಿ ಬೇಸಿಗೆ ಬೆಳೆಯಾಗಿ ಅಲ್ಪಸ್ವಲ್ಪ ಬಿತ್ತಿದರೂ ನೀರಿಲ್ಲದೆ ಹಾಳಾಗಿ ರೈತರು ಕೈಸುಟ್ಟುಕೊಳ್ಳುವಂತಾಗಿದೆ. ಪರ್ಯಾಯ ಬೆಳೆಗಳನ್ನು ಬೆಳೆಯುವುದಕ್ಕೆ ಯಾವುದೇ ಅವಕಾಶ ಇಲ್ಲದಂತಾಗಿದೆ. ಬ್ಯಾಂಕ್‌ಗಳಲ್ಲಿ ಸಾಲದ ಮೇಲಿನ ಬಡ್ಡಿ ಮೊತ್ತ ಬೆಳೆಯುತ್ತಿದ್ದರೆ ರೈತರಿಗೆ ಬೇರೆ ಮೂಲಗಳಿಂದ ಹಣ ದೊರಕದೆ ಅಸಹಾಯಕ ಸ್ಥಿತಿ ತಲುಪಿದ್ದಾರೆ ಎಂದು ಸಭೆಯಲ್ಲಿ ಆತಂಕ ವ್ಯಕ್ತವಾಯಿತು.
 
ಕೃಷ್ಣಾ ಬಿ ಸ್ಕೀಂನಲ್ಲಿ ಬರುವ ಕೊಪ್ಪಳ ಏತ ನೀರಾವರಿ ಯೋಜನೆ ಕಾರ್ಯಗತಗೊಂಡಿದ್ದರೆ ರೈತರ ಜಮೀನುಗಳಿಗೆ ನೀರು ಹರಿದು ಸ್ವಲ್ಪಮಟ್ಟಿಗಾದರೂ ಬರ ಪರಿಸ್ಥಿತಿ ನಿಭಾಯಿಸಲು ಅನುಕೂಲವಾಗುತ್ತಿತ್ತು. ಆದರೆ ಯೋಜನೆ ಇನ್ನೂ ಆಮೆಗತಿಯಲ್ಲಿ ಸಾಗುತ್ತಿದ್ದು ಶೀಘ್ರಗತಿಯಲ್ಲಿ ಅನುಷ್ಠಾನಗೊಳಿಸುವಲ್ಲಿ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ ಎಂದು ಜಿಲ್ಲಾ ಘಟಕದ ಅಧ್ಯಕ್ಷ ನಜೀರ್‌ಸಾಬ್‌ ಮೂಲಿಮನಿ ಆಕ್ರೋಶ ವ್ಯಕ್ತಪಡಿಸಿದರು. 
 
ಪ್ರಮಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿಯುವುದು ಅಗತ್ಯವಾಗಿದೆ, ಈ ವಿಷಯದಲ್ಲಿ ರೈತರನ್ನು ಸಂಘಟಿಸಲಾಗುತ್ತಿದ್ದು ಸಾಲ ಮನ್ನಾ, ನೀರಾವರಿ ಯೋಜನೆ ಅನುಷ್ಠಾನ ಮತ್ತು ಜಿಲ್ಲೆಯ ಪ್ರಮುಖ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಲು ಮಾ 11ರಂದು ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಲು ಸಭೆ ನಿರ್ಧರಿಸಿದ್ದನ್ನು ನಂತರ ನಜೀರ್‌ಸಾಬ್‌ ಮಾಹಿತಿ ನೀಡಿದರು. 
 
ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳಾದ ಶರಣಯ್ಯ ಮುಳ್ಳೂರುಮಠ, ನಿರುಪಾದೆಪ್ಪ, ಶಿವಣ್ಣ ಭೀಮನೂರು, ವೀರಪ್ಪ ಜೀಕೇರಿ, ಸಂಗಪ್ಪ ಬಳ್ಳೂಡಿ, ಕಾಂತೆಪ್ಪ ಮೆತಗಲ್‌, ಕನಕಪ್ಪ ಮಳಗಾವಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.