ADVERTISEMENT

ಸೌರಶಕ್ತಿ ಬಳಕೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 6:24 IST
Last Updated 12 ಜುಲೈ 2017, 6:24 IST

ಕೊಪ್ಪಳ: ‘ಜಲ ವಿದ್ಯುತ್‌ಗೆ ಪರ್ಯಾಯವಾಗಿ ಸೌರಶಕ್ತಿ ಬಳಸು ವುದು ಹೆಚ್ಚು ಪ್ರಸ್ತುತ’ ಎಂದು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಹನುಮಪ್ಪ ಉಪ್ಪಾರ ಹೇಳಿದರು.
ನಗರದ ಜಿಲ್ಲಾ ಸಹಕಾರ ಯೂನಿಯನ್‌ ಸಭಾಭವನದಲ್ಲಿ ಮಂಗಳವಾರ ಜಿಲ್ಲಾ ಸಹಕಾರ ಯೂನಿಯನ್‌, ಬೆಂಗಳೂರಿನ ಸೆಲ್ಕೋ ಫೌಂಡೇಷನ್‌, ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಹಾಗೂ ರಾಯಚೂರಿನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಆಶ್ರಯದಲ್ಲಿ ನಡೆದ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಹಕಾರ ಸಂಘಗಳು ರೈತರ ಒಡನಾಡಿ. ಅದಕ್ಕಾಗಿ ಈ ಸೌರಶಕ್ತಿಯ ಉತ್ಪಾದನೆಗೆ ಬೇಕಾಗುವ ಯಂತ್ರೋಪ ಕರಣಗಳನ್ನು ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆದು ಖರೀದಿಸಲು ಈ ಯೋಜನೆ ಸಹಕಾರಿ ಆಗುತ್ತದೆ. ಅದಕ್ಕಾಗಿ ಎಲ್ಲ ರೈತರು ಈ ಯೋಜನೆಯ ಸದುಪಯೋಗ ಪಡೆಯಬೇಕು’ ಎಂದರು.

ಭಾರತೀಯ ವಿಕಾಸ ಟ್ರಸ್ಟ್‌ನ ನಿರ್ದೇಶಕ ಪಿ.ಕೃಷ್ಣಾನಂದ ನಾಯಕ ಮಾತನಾಡಿ, ‘ಇಂದು ಎಲ್ಲರೂ ವಿದ್ಯುತ್‌ ಶಕ್ತಿ ಮೇಲೆ ಅವಲಂಬಿಸಿದ್ದೇವೆ. ಆದರೆ, ನಮಗೆ ಅವಶ್ಯವಿರುವಷ್ಟು ವಿದ್ಯುತ್‌ ಹಲವು ಕಾರಣಗಳಿಂದ ಉತ್ಪಾದನೆ ಆಗುತ್ತಿಲ್ಲ. ಜಲವಿದ್ಯುತ್‌ ಉತ್ಪಾದನೆಗೆ ಮಳೆ ಕೊರತೆ ಇದೆ. ಅದಕ್ಕಾಗಿ ಸೌರಶಕ್ತಿ ಬಳಕೆ ಅವಶ್ಯ.

ADVERTISEMENT

ಅಲ್ಲದೆ ಸಾಂಪ್ರದಾಯಕ ಇಂಧನ ಮೂಲಗಳು ಇನ್ನೂ 30 ವರ್ಷಗಳಲ್ಲಿ ಕಾಣೆಯಾಗಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಅದಕ್ಕಾಗಿ ಸೌರಶಕ್ತಿ ಬಳಸಬೇಕು’ ಎಂದರು.
ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷೆ ಶಕುಂತಲಾ ಹುಡೇಜಾಲಿ ಕಾರ್ಯಕ್ರಮ ಉದ್ಘಾಟಿಸಿದರು.

ಯೂನಿಯನ್‌ನ ನಿರ್ದೇಶಕರಾದ ಅಮರೇಶ ಉಪಲಾಪುರ, ನೀಲಕಂಠಪ್ಪ ಹಿರೇಮಠ, ಮುಖಂಡ ಸಂಗಮೇಶ ಡಂಬಳ, ಯೂನಿಯನ್‌ನ  ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜ್ಮಾ ಮುಲ್ಲಾ, ರಾಜಶೇಖರ ಹೊಸಮನಿ ಇದ್ದರು. ಯೂನಿಯನ್‌ನ ನಿರ್ದೇಶಕ ಗವಿಸಿದ್ದೇಶ ಹುಡೇಜಾಲಿ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.