ADVERTISEMENT

‘ಸಾಚಾರ್‌ ವರದಿ: ಇಚ್ಛಾಶಕ್ತಿ ಅಗತ್ಯ’

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2013, 8:28 IST
Last Updated 12 ಅಕ್ಟೋಬರ್ 2013, 8:28 IST

ಕುಷ್ಟಗಿ:‘ಮುಸ್ಲಿಮರಿಗೆ ಸಾಮಾಜಿಕ, ಶೈಕ್ಷಣಿಕ, ಉದ್ಯೋಗ ಮತ್ತು ರಾಜ­ಕೀಯ ಮೀಸಲಾತಿಯನ್ನು ಪ್ರತಿಪಾದಿ­ಸುವ ಹಾಗೂ ಅವರ ಅಭಿವೃದ್ಧಿಗೆ ಪೂರಕವಾಗುವ ನ್ಯಾ.ರಾಜೇಂದ್ರ ಸಾಚಾರ್‌ ವರದಿಯನ್ನು ಯಥಾವ­ತ್ತಾಗಿ ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ತನ್ನ ಇಚ್ಛಾಶಕ್ತಿ ಪ್ರದರ್ಶಿ­ಸಬೇಕು’ ಎಂದು ಮಾಜಿ ಶಾಸಕ ಹಸನ್‌­ಸಾಬ್‌ ದೋಟಿಹಾಳ ಹೇಳಿದರು.

ಸಾಚಾರ್‌ ವರದಿ, ದೇಶದ ಮುಸ್ಲಿಮರ ಸಿ್ಥತಿಗತಿ ಕುರಿತು ಜಾಗೃತಿ ಮೂಡಿಸಲು ತಾಲ್ಲೂಕು ಹೋರಾಟ ಸಮಿತಿ ಶುಕ್ರವಾರ ಇಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ‘2006ರಲ್ಲಿಯೇ ಅಧ್ಯಯನ ವರದಿ ನೀಡಿದ್ದರೂ ಅದನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿಲ್ಲ. ರಾಜ­ಕೀಯ ಮೀಸಲಾತಿ ಸೇರಿದಂತೆ ಅದ­ರಲ್ಲಿನ ನಾಲ್ಕು ಪ್ರಮುಖ ಅಂಶಗಳನ್ನು  ಸರ್ಕಾರ ಒಪ್ಪುತ್ತಿಲ್ಲ.

ಆಡಳಿತ ಮತ್ತು ವಿರೋಧ ಪಕ್ಷಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಲ್ಲಿರುವ ಮುಸ್ಲಿಂ ಸಮಾಜದ  ನಾಯಕರ ಗುಲಾಮಗಿರಿ ಸಂಸ್ಕೃತಿಯಿಂದಾಗಿ, ವರದಿ ಜಾರಿಗೊ­ಳಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸಾಧ್ಯವಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರವು ಮುಸ್ಲಿಮರನ್ನು ಕೇವಲ ಮತ ಬ್ಯಾಂಕನ್ನಾಗಿ ಮಾಡಿ­ಕೊಳ್ಳುವುದರಿಂದ ಸಮಾಜದ ಉದ್ಧಾರ ಸಾಧ್ಯವಿಲ್ಲ. ಅಲ್ಪ ಸಂಖ್ಯಾತರನ್ನು ಜೊತೆ­ಯಲ್ಲೇ ಕರೆದೊಯ್ಯಬೇಕೆನ್ನುವ ಕಳಕಳಿ ರಾಜಕೀಯ ನಾಯಕರಲ್ಲಿ ಉಳಿದಿಲ್ಲ. ಹಾಗಾಗಿ ಈ ವಿಷಯ ಕುರಿತ ಜಾಗೃತಿ ಸಮಾವೇಶಗಳು ತಳಹಂತದಿಂದ ರಾಜ್ಯ ರಾಷ್ಟ್ರಮಟ್ಟದವರೆಗೂ ನಡೆಯಬೇಕು’ ಎಂದರು.

ಕಾರ್ಮಿಕ ಮುಖಂಡ ಜೆ. ಭಾರದ್ವಾಜ, ಜಿಲ್ಲಾ ಸಂಚಾಲಕ ರಾಜಾ ಭಕ್ಷಿ, ತಾಲ್ಲೂಕು ಸಂಚಾಲಕ ನಬಿಸಾಬ್‌ ಕುಷ್ಟಗಿ ಮತ್ತಿತರರು ಮಾತನಾಡಿದರು. ಸಮಾಜದ ಮುಖಂಡರಾದ ರಹೀಂಸಾಬ್‌ ಮುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಇನಾಯತ್‌ ಸಾಬ್‌ ಸಿದ್ದಕಿ, ಶಾಹಮೀದ ದೋಟಿಹಾಳ, ಅಲ್ಲಾ ಗಿರಿರಾಜ, ಅಮೀನುದ್ದೀನ ಮುಲ್ಲಾ, ಜಾಕೀರ್‌ ಹುಸೇನ್‌, ಗ್ರಾ.ಪಂ ಸದಸ್ಯ ಸಲೀಂ ಸಾಬ್‌ ಇತರರು ಇದ್ದರು. ಆಲಂ ಪಾಷಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT