ADVERTISEMENT

ವಿವಾದಿತ ಅಂಜನಾದ್ರಿ ಬೆಟ್ಟ ಮುಜರಾಯಿ ಇಲಾಖೆಗೆ 

ಎಂ.ಜೆ.ಶ್ರೀನಿವಾಸ
Published 20 ಜುಲೈ 2018, 17:22 IST
Last Updated 20 ಜುಲೈ 2018, 17:22 IST
ಅಂಜನಾದ್ರಿ ಬೆಟ್ಟ
ಅಂಜನಾದ್ರಿ ಬೆಟ್ಟ   

ಗಂಗಾವತಿ: ಪ್ರವಾಸಿಗರ, ಚಾರಣಿಗರ ನೆಚ್ಚಿನ ತಾಣ ಹಾಗೂ ಧಾರ್ಮಿಕ ಪುಣ್ಯ ಕ್ಷೇತ್ರವಾದ ತಾಲ್ಲೂಕಿನ ಆನೆಗೊಂದಿ ಸಮೀಪದ ಅಂಜನಾದ್ರಿ ಬೆಟ್ಟದ ವಿವಾದ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಬೆಟ್ಟವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆಯಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ರಾಮಾಯಣದ ಕಾಲದ ಚರಿತ್ರೆಯೊಂದಿಗೆ ಥಳಕು ಹಾಕಿಕೊಂಡಿರುವ ಹಾಗೂ ಪವನಸುತ ಆಂಜನೇಯನ ಜನ್ಮಸ್ಥಾನ ಎಂದು ನಂಬಲಾಗುತ್ತಿರುವ ಅಂಜನಾದ್ರಿ ಬೆಟ್ಟದಲ್ಲಿ ಪೂಜೆಯ ವಾರಸತ್ವಕ್ಕೆ ಸಂಬಂಧಿಸಿದಂತೆ ಕಳೆದ ಎರಡು ವರ್ಷದಿಂದ ವಿವಾದ ಕೇಂದ್ರ ಬಿಂದುವಾಗಿತ್ತು.

ರಾಜ್ಯದಿಂದ ಅಲ್ಲದೇ, ದೇಶ ವಿದೇಶಗಳಿಂದಲೂ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಕಳೆದ ದಶಕದಿಂದ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆದರೆ ಸ್ಥಳೀಯ ಆಡಳಿತ ಮಂಡಳಿ ಮತ್ತು ಪದಚ್ಯುತ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ ಅವರಿಂದಾಗಿ ವಿವಾದ ಮುನ್ನೆಲೆಗೆ ಬಂದಿದೆ.

ADVERTISEMENT

ವಿವಾದ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ದೇಗುಲಕ್ಕೆ ಬರುವ ಭಕ್ತರಿಗೆ ತೊಂದರೆಯಾಗುತ್ತಿರುವ ಕಾರಣ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲಾಡಳಿತ ವಶಕ್ಕೆ ಪಡೆಯುವುದು ಸೂಕ್ತ ಎಂದು ಪೊಲೀಸ್ ಇಲಾಖೆಯು ಜಿಲ್ಲಾಧಿಕಾರಿಗೆ 2017ರ ಅಕ್ಟೋಬರ್ 24ರಂದು ಮತ್ತು 2018ರ ಜೂನ್‌ 16ರಂದು ಎರಡು ಬಾರಿ ಬರೆದ ಪತ್ರ ‘ಪ್ರಜಾವಾಣಿ’ಗೆ ಲಭಿಸಿದೆ.

ವರದಿಯಲ್ಲೇನಿದೆ?: ಚಿಕ್ಕರಾಂಪುರ ಗ್ರಾಮದ ಅಂಜನಾದ್ರಿ ಬೆಟ್ಟದ ಆಂಜನೇಯ ದೇವಸ್ಥಾನವು ಸರ್ವೇ ನಂ.136 (ಪೋರಂಪೋಕು) ಕಾಯ್ದಿರಿಸಿದ ಅರಣ್ಯ ಪ್ರದೇಶದಲ್ಲಿ 134 ಎಕರೆ ಗುಡ್ಡ (ಅಂಜನಾದ್ರಿ ಬೆಟ್ಟ) ಗಂಗಾವತಿ ತಾಲ್ಲೂಕಿನ ಬುಕ್ ಆಫ್ ಎಂಡೋಮೆಂಟ್ ಕ್ರ.ಸಂ. 288ರಲ್ಲಿ ದಾಖಲಾಗಿದೆ.

ಈ ದೇವಸ್ಥಾನದ ಅರ್ಚಕ ಸ್ಥಾನಕ್ಕೆ ಖಾಸಗಿ ವ್ಯಕ್ತಿಗಳು ಹಾಗೂ ಅವರ ಬೆಂಬಲಿತರ ಮಧ್ಯೆ ನಡೆಯುತ್ತಿರುವ ವಾದ ವಿವಾದಗಳು ತೀವ್ರಗೊಂಡಿದೆ. ಗಲಾಟೆ, ಕೋಮು ಗಲಭೆ ಉಂಟಾಗಿ ಅಶಾಂತಿಯ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಿದೆ. ಈ ವಿದ್ಯಾಮಾನದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುತ್ತಿರುವುದರಿಂದ ಕಾನೂನು ಕಾಪಾಡುವ ಉದ್ದೇಶಕ್ಕೆ ದೇವಸ್ಥಾನವನ್ನು ಸರ್ಕಾರದ ಸ್ವಾಧೀನಕ್ಕೆ ಪಡೆದು ನಿರ್ವಹಣೆ ಮಾಡಬೇಕು ಎಂದು ಪೊಲೀಸ್ ಇಲಾಖೆ ಜಿಲ್ಲಾಧಿಕಾರಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.

ಜಿಲ್ಲಾಧಿಕಾರಿ ಆದೇಶ: ಈ ದೇವಸ್ಥಾನವು ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆ ಮತ್ತು ಧರ್ಮಾದಾಯ ದತ್ತಿ ಅಧಿನಿಯಮ 1997 ಕಲಂ 24ರ ಅನ್ವಯ ಗಂಗಾವತಿ ತಾಲ್ಲೂಕಿನ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಸಲು ಧಾರ್ಮಿಕ ದತ್ತಿ ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಲಾಗಿದೆ.

ಈ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಸರ್ಕಾರ ವಶಕ್ಕೆ ಪಡೆದು ನಿರ್ವಹಣೆ ನೋಡಿಕೊಳ್ಳಲು ಗಂಗಾವತಿ ತಹಶೀಲ್ದಾರ್ ಚಂದ್ರಕಾಂತ್ ಅವರನ್ನು ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಹುಲಗಿ ದೇವಸ್ಥಾನದ ಆಡಳಿತಾಧಿಕಾರಿ ಸಿ.ಎಚ್. ಚಂದ್ರಮೌಳಿ ಅವರನ್ನು ಅಂಜನಾದ್ರಿ ಬೆಟ್ಟದ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ನೇಮಿಸಿ ಜಿಲ್ಲಾಧಿಕಾರಿ ಕನಗವಲ್ಲಿ ಆದೇಶ ಹೊರಡಿಸಿದ್ದಾರೆ.

ಈ ಬಗ್ಗೆ ಜುಲೈ 23ರಂದು ತಹಶೀಲ್ದಾರ್ ಸ್ಥಳಕ್ಕೆ ತೆರಳಿ ಸ್ಥಳೀಯರೊಂದಿಗೆ ಚರ್ಚಿಸಿ, ದೇವಸ್ಥಾನಕ್ಕೆ ಸೇರಿದ ಆಸ್ತಿ, ವಸ್ತು, ಸ್ಮಾರಕಗಳ ಪಟ್ಟಿ ತಯಾರಿಸಲಿದ್ದಾರೆ. ಜಿಲ್ಲಾಧಿಕಾರಿ ಆದೇಶ ಅನುಷ್ಠಾನ ಮಾಡಲಿದ್ದಾರೆ ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ದೇಗುಲದ ಆವರಣದಲ್ಲಿ ಶಾಂತಿ ಕಾನೂನು ಪಾಲನೆ ಅವಶ್ಯ. ಪೂರಕ ಇಲಾಖೆಗಳ ವರದಿ ಹಿನ್ನೆಲೆ ತಕ್ಷಣದಿಂದ ಜಾರಿಗೆ ಬರುವಂತೆ ಆಡಳಿತಾಧಿಕಾರಿ ನೇಮಿಸಲಾಗಿದೆ.
ಕನಗವಲ್ಲಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.