ADVERTISEMENT

ದೌರ್ಜನ್ಯ ಎಸಗಿದರೆ ಜೈಲುಶಿಕ್ಷೆ

​ಪ್ರಜಾವಾಣಿ ವಾರ್ತೆ
Published 21 ಮೇ 2017, 9:36 IST
Last Updated 21 ಮೇ 2017, 9:36 IST

ಮಂಡ್ಯ: ‘ಪೌರ ಕಾರ್ಮಿಕರು ಹಾಗೂ ಸಫಾಯಿ ಕರ್ಮಚಾರಿಗಳಿಗೆ ಸರ್ಕಾರಿ ಸೌಲಭ್ಯ ನೀಡಲು ನಿರ್ಲಕ್ಷ್ಯ ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು’ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಆರ್‌.ವೆಂಕಟೇಶ್‌ ಎಚ್ಚರಿಕೆ ನೀಡಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಪೌರ ಕಾರ್ಮಿಕರ ಜೊತೆ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು.

ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಕಾಯಂ, ಗುತ್ತಿಗೆ ಪೌರ ಕಾರ್ಮಿಕರಿಗೆ ಸರ್ಕಾರದ ಎಲ್ಲಾ ಸೌಲಭ್ಯ ತಲುಪಿಸಬೇಕು. ನೀಡಲು ವಿಫಲರಾದರೆ ಅಂತಹ ಅಧಿಕಾರಿಗಳ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗುವುದು.

ಇದರ ಅಡಿ ಆರು ತಿಂಗಳು ಜೈಲು ಶಿಕ್ಷೆ ವಿಧಿಸುವ ಅವಕಾಶ ಇದೆ ಎಂದು ಎಚ್ಚರಿಸಿದರು. ದೂರುಗಳ ಸುರಿಮಳೆ: ಸಂವಾದದ ವೇಳೆ ವಿವಿಧ ತಾಲ್ಲೂಕುಗಳಿಂದ ಬಂದಿದ್ದ ಪೌರ ಕಾರ್ಮಿಕರು ಅಧಿಕಾರಿಗಳ ವಿರುದ್ಧ ದೂರುಗಳ ಸುರಿಮಳೆಗೈದರು.

ADVERTISEMENT

ನಗರದ ಸಾರಿಗೆ ಬಸ್‌ ನಿಲ್ದಾಣದಲ್ಲಿ ಕೆಲಸ ಮಾಡುವ ಮಂಜುಳಾ ಮಾತನಾಡಿ, ‘ಸಂಸ್ಥೆಯಲ್ಲಿ ಕನಿಷ್ಠ ವೇತನ ನೀಡುತ್ತಿಲ್ಲ. ಕೇಳಿದರೆ ಕೆಲಸದಿಂದ ತೆಗೆದು ಹಾಕುತ್ತಾರೆ. ಹಲವು ತಿಂಗಳ ಸಂಬಳ ಬಾಕಿ ಇದೆ. ಪಿಎಫ್‌, ಇಎಸ್‌ಐ ಸಂಬಳದಿಂದ ಹಿಡಿದುಕೊಳ್ಳಲಾಗುತ್ತಿದೆ. ಆದರೆ ಅದರ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ’ ಎಂದು ದೂರಿದರು.

ಇದಕ್ಕೆ ಉತ್ತರ ನೀಡಿದ ಕೆಎಸ್‌ಆರ್‌ಟಿಸಿ ಎಂಡಿ,  ‘ಪೌರಕಾರ್ಮಿಕರ ನೇಮಕಾತಿ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ಇದೆ. ಅದರ ವಿಚಾರಣೆ ಮೇ 21ರಂದು ಇದೆ. ಆದೇಶ ಬಂದ ಕೂಡಲೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಕೆ.ಆರ್.ಪೇಟೆಯ ಪೌರ ಕಾರ್ಮಿಕರು ಮಾತನಾಡಿ, ‘ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 18 ಜನ ಕಾರ್ಮಿಕರು ಕಳೆದ 30 ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಕಾಯಂಗೊಳಿಸಲು ಜಿಲ್ಲಾಧಿಕಾರಿ ನಿರ್ದೇಶನ ಇದ್ದರೂ ಕಾಯಂ ಮಾಡಿಲ್ಲ. ಸೌಲಭ್ಯ ತಪ್ಪಿಸಲು ಸೇವಾ ಭದ್ರತೆ ವಿಭಾಗಕ್ಕೆ ಸೇರಿಸಿದ್ದಾರೆ’ ಎಂದು ಆರೋಪಿಸಿದರು.

ಇದಕ್ಕೆ ಪಟ್ಟಣ ಪಂಚಾಯಿತಿ ಪ್ರಭಾರ ಅಧಿಕಾರಿ ಎಚ್‌.ಎಸ್‌.ಚಂದ್ರಶೇಖರ್‌ ವಿರುದ್ಧ ಕೆಂಡಾಮಂಡಲರಾದ ವೆಂಕಟೇಶ್‌, ‘ವಾರದೊಳಗೆ ಎಲ್ಲ ಕಾರ್ಮಿಕರ ಕಡತ ತಯಾರಿಸಿ ಜಿಲ್ಲಾಧಿಕಾರಿಗೆ ಕಳುಹಿಸಿಬೇಕು. ಇಲ್ಲದಿದ್ದರೆ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಕಾರ್ಮಿಕ ಹೋರಾಟಗಾರ ಸಿದ್ದರಾಜು ಮಾತನಾಡಿ, ‘ಕೆ.ಆರ್‌.ಪೇಟೆ ಪಟ್ಟಣದಲ್ಲಿ ಪೌರಕಾರ್ಮಿಕರು ಓಡಾಡುವ ಜಾಗದಲ್ಲಿ ದರ್ಗಾ ನಿರ್ಮಿಸಲಾಗಿದೆ. ಅಲ್ಲಿ ಪೌರ ಕಾರ್ಮಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಬಾಕಿ ಕೊಡಿಸಿ: ಶ್ರೀರಂಗಪಟ್ಟಣದ ಕಾರ್ಮಿಕ ರಮೇಶ್‌ ಮಾತನಾಡಿ ‘ಕಾರ್ಮಿಕರ ವೇತನ ಹೆಚ್ಚಳವಾದ ದಿನಾಂಕದಿಂದ ಬರಬೇಕಾಗಿದ್ದ ಬಾಕಿ ವೇತನ ಬಂದಿಲ್ಲ. ಈ ಕುರಿತು ಪ್ರಶ್ನಿಸಿದರೆ ಅಧಿಕಾರಿಗಳು ಉತ್ತರ ನಿಡುತ್ತಿಲ್ಲ’ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಪುರಸಭೆ ಮುಖ್ಯಾಧಿಕಾರಿ ಎಸ್‌.ಲೋಕೇಶ್‌ ‘ವಿಶೇಷ ಹಣಕಾಸು ಯೋಜನೆ ಅಡಿ ಬಾಕಿ ವೇತನ ನೀಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

ಮಂಡ್ಯದ ಕಾರ್ಮಿಕರಾದ ವಿಜಯಲಕ್ಷ್ಮಮ್ಮ ಮಾತನಾಡಿ, ‘ನನ್ನ ಮಗಳು ಎಂ.ಎ. ಓದಿದ್ದಾಳೆ. ಅವಳಿಗೆ ಒಂದು ಕಣ್ಣು ಕಾಣುವುದಿಲ್ಲ. ಅವಳಿಗೊಂದು ಕೆಲಸ ಕೊಡಿ’ ಎಂದು ಕಣ್ಣೀರು ಹಾಕಿದರು. ಇದಕ್ಕೆ ಅಧ್ಯಕ್ಷರು ಉತ್ತರಿಸಿ, ಮಾನವೀಯತೆ ದೃಷ್ಟಿಯಿಂದ ಕೆಲಸ ನೀಡಲು ಪ್ರಯತ್ನಿಸಲಾಗುವುದು ಎಂದರು.

ಆಯೋಗದ ಸದಸ್ಯ ಗೋಕುಲ ನಾರಾಯಣ ಸ್ವಾಮಿ, ಉಪ ನಿರ್ದೇಶಕ ಮಂಜುನಾಥ್‌, ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಡಿ.ಸಿ. ಎಸ್‌.ಜಿಯಾವುಲ್ಲಾ, ಜಿ.ಪಂ. ಸಿಇಒ ಬಿ.ಶರತ್‌, ಹೆಚ್ಚುವರಿ ಎಸ್ಪಿ ಎಸ್‌.ಸವಿತಾ ಇದ್ದರು.

ರೌಡಿ ಪಟ್ಟಿಗೆ ಪೌರಕಾರ್ಮಿಕರು
ಮಂಡ್ಯ: ಕಾರ್ಮಿಕ ಮುಖಂಡ ನಾಗಣ್ಣ ಮಾತನಾಡಿ ‘2009ರಲ್ಲಿ ಕಾರ್ಮಿಕ ಹೋರಾಟದಲ್ಲಿ ಪಾಲ್ಗೊಂಡಿದ್ದ 176 ಕಾರ್ಮಿಕರ ಮೇಲೆ ಪ್ರಕರಣ ದಾಖಲು ಮಾಡಲಾಗಿತ್ತು. ಅದನ್ನು 2015ರಲ್ಲಿ ಹಿಂದಕ್ಕೆ ಪಡೆಯಲಾಯಿತು. ಆದರೂ ಕೆಲವರನ್ನು ಪೊಲೀಸರು ರೌಡಿ ಪಟ್ಟಿಗೆ ಸೇರಿಸಿದ್ದಾರೆ. ತಕ್ಷಣ ಹೋರಾಟಗಾರರನ್ನು ಪಟ್ಟಿಯಿಂದ ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಅಂಬೇಡ್ಕರ್‌ ನಿಗಮದ ಎಂ.ಡಿ ವಿರುದ್ಧ ದೂರು
ಮಂಡ್ಯ: ಅರುಂಧತಿ ಸಮಾಜದ ಅಧ್ಯಕ್ಷ ಕೃಷ್ಣ ಮಾತನಾಡಿ ‘ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್‌ ಕಾರ್ಮಿಕರಿಗೆ ಸಾಲ ಸೌಲಭ್ಯ ನೀಡುತ್ತಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ನೋಟಿಸ್‌
ಮಂಡ್ಯ: ಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರುಹಾಜರಾಗಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಆಯೋಗದ ಅಧ್ಯಕ್ಷರು ‘ಗೈರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ಕೊಡಿ. ಸಕಾರಣ ನೀಡದಿದ್ದರೆ ಅವರ ವಿರುದ್ಧ ಕ್ರಮ ಜರುಗಿಸಿ’ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.