ADVERTISEMENT

2019ರಿಂದ ನಿತ್ಯ ಕುಡಿಯುವ ನೀರು ಪೂರೈಕೆ

ವಿವಿಧೆಡೆ ಟ್ಯಾಂಕ್‌ ನಿರ್ಮಾಣ ಕಾಮಗಾರಿ ಆರಂಭ; 54 ಕಿ.ಮೀ ಪೈಪ್‌ಲೈನ್‌ ಅಳವಡಿಕೆಗೆ ಯೋಜನೆ

​ಪ್ರಜಾವಾಣಿ ವಾರ್ತೆ
Published 15 ಮೇ 2017, 7:15 IST
Last Updated 15 ಮೇ 2017, 7:15 IST
2019ರಿಂದ ನಿತ್ಯ ಕುಡಿಯುವ ನೀರು ಪೂರೈಕೆ
2019ರಿಂದ ನಿತ್ಯ ಕುಡಿಯುವ ನೀರು ಪೂರೈಕೆ   
l ಎಂ.ಎನ್‌.ಯೋಗೇಶ್‌
ಮಂಡ್ಯ: ಎಲ್ಲವೂ ಯೋಜನೆಯಂತೆ ನಡೆದರೆ 2019 ಏಪ್ರಿಲ್‌ ತಿಂಗಳಿಂದ ನಗರಕ್ಕೆ ಪ್ರತಿದಿನ ಕುಡಿಯುವ ನೀರು ಪೂರೈಕೆಯಾಗಲಿದೆ.
 
ಸದ್ಯ ನಗರಕ್ಕೆ ದಿನ ಬಿಟ್ಟು ದಿನ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಆದರೆ ಅಟಲ್‌ ನಗರ ನವೀಕರಣ ಹಾಗೂ ಪುನರುಜ್ಜೀವನ ಯೋಜನೆ ಅಡಿ ಪ್ರತಿದಿನ ನೀರು ಪೂರೈಸುವ ಕಾಮಗಾರಿ ರೂಪಿಸಲಾಗಿದೆ.
 
ಈಗಾಗಲೇ ನಗರದಾದ್ಯಂತ 10 ಟ್ಯಾಂಕ್‌ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಅಮೃತ್‌ ಯೋಜನೆ ಅಡಿ ವಿವಿಧ ಕಾಮಗಾರಿಗಳಿಗೆ ₹ 123.84 ಕೋಟಿ ಹಣದ ಅನುಮೋದನೆ ಸಿಕ್ಕಿದ್ದು ಅದರಲ್ಲಿ ₹ 10 ಕೋಟಿ ಹಣವನ್ನು ಟ್ಯಾಂಕ್‌ ನಿರ್ಮಾಣಕ್ಕೆ ಮೀಸಲಿಡಲಾಗಿದೆ.
 
ನಗರದ ಕಲ್ಲಹಳ್ಳಿ, ಗಾಂಧಿನಗರ, ವಿದ್ಯಾನಗರ ಉದ್ಯಾನ, ಬಾಲಭವನ, ಶುಗರ್‌ ಟೌನ್‌, ಹಳೇ ತಾಲ್ಲೂಕು ಕಚೇರಿ ಆವರಣ, ಸ್ವರ್ಣಸಂದ್ರ, ತಾವರೆಗೆರೆ, ಚಾಮುಂಡೇಶ್ವರಿ ದೇವಾಲಯ ಸಮೀಪ, ಹಳೆಗುತ್ತಲು ಬಡಾವಣೆಗಳಲ್ಲಿ 10 ಟ್ಯಾಂಕ್‌ಗಳು ತಲೆ ಎತ್ತಲಿದ್ದು ಕೆಲ ಟ್ಯಾಂಕ್‌ಗಳ ಕಾಮಗಾರಿ ಪ್ರಗತಿಯಲ್ಲಿವೆ.

ಹಳೇ ತಾಲ್ಲೂಕು ಕಚೇರಿ ಆವರಣದಲ್ಲಿ ನಿರ್ಮಾಣಗೊಳ್ಳಲಿರುವ ಟ್ಯಾಂಕ್‌ 10 ಲಕ್ಷ ಲೀಟರ್‌ ನೀರಿನ ಸಾಮರ್ಥ್ಯ ಹೊಂದಿದ್ದು ಉಳಿದ ಟ್ಯಾಂಕ್‌ಗಳು 5 ಲಕ್ಷ ಲೀಟರ್‌ ಸಾಮರ್ಥ್ಯ ಹೊಂದಿದೆ.
 
‘ಅಮೃತ್‌ ಯೋಜನೆಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ಮೇ 11ಕ್ಕೆ ನಿಗದಿ ಆಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲು ಬರಬೇಕಾಗಿತ್ತು. ಕಾರಣಾಂತರಗಳಿಂದ ಕಾರ್ಯಕ್ರಮ ಮುಂದೂಡಲಾಗಿದೆ.
 
ಆದರೂ ಕೆಲ ಟ್ಯಾಂಕ್‌ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 2019 ಏಪ್ರಿಲ್‌ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ’ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಸಿ.ಎನ್‌.ಮಹಾದೇವು ಹೇಳಿದರು.
 
54 ಕಿ.ಮೀ. ಪೈಪ್‌ಲೈನ್‌: ನಗರದಲ್ಲಿ ಶಿಥಿಲಗೊಂಡಿರುವ ಪೈಪ್‌ಲೈನ್‌ಗೆ ಬದಲಾಗಿ ಹೊಸ ಮಾರ್ಗ ಗುರುತಿಸಲಾಗಿದ್ದು ಹೊಸದಾಗಿ 54 ಕಿ.ಮೀ. ಪೈಪ್‌ಲೈನ್‌ ಅಳವಡಿಸಲು ಉದ್ದೇಶಿಸಲಾಗಿದೆ.
 
ನಗರಕ್ಕೆ ನೀರು ಪೂರೈಸುವ ಕಾವೇರಿ ನದಿ ದಂಡೆಯಲ್ಲಿರುವ ಮೂಲ ಸ್ಥಾವರ ರಿಪೇರಿ ಕಾರ್ಯಕ್ಕೂ ಯೋಜನೆ ರೂಪಿಸಲಾಗಿದೆ. ಜೊತೆಗೆ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ 51 ಎಂಎಲ್‌ಡಿ ಸಾಮರ್ಥ್ಯದ ಜಲಶುದ್ಧೀಕರಣಾಗಾರ ನಿರ್ಮಿಸಿ ಅಲ್ಲಿಂದ ಶ್ರೀರಂಗಪಟ್ಟಣ ಮಾರ್ಗವಾಗಿ ನಗರಕ್ಕೆ ನೀರು ಪೂರೈಸಲು ಉದ್ದೇಶಿಸಲಾಗಿದೆ.
 
‘ಕಾಮಗಾರಿ ಜವಾಬ್ದಾರಿಯನ್ನು ಹೈದರಾಬಾದ್‌ ಮೂಲದ ಜಿ.ಕೆ.ಸಿ ಪ್ರಾಜೆಕ್ಟ್‌ ಲಿಮಿಟೆಡ್‌ಗೆ ವಹಿಸಲಾಗಿದೆ. ಕಾಮಗಾರಿ ಮುಗಿದ ನಂತರ ಐದು ವರ್ಷಗಳ ಕಾಲ ಕಂಪೆನಿಯೇ ನಿರ್ವಹಣೆ ಮಾಡಲಿದೆ’ ಎಂದು ಎಂಜಿನಿಯರ್‌ ಮಹಾದೇವು ತಿಳಿಸಿದರು.
 
ಚರಂಡಿಗೆ ಮರುಜೀವ: ಅಮೃತ್‌ ಯೋಜನೆ ಅಡಿಯಲ್ಲಿ ನಗರದ ಒಳ ಚರಂಡಿ ವ್ಯವಸ್ಥೆಗೂ ಮರುಜೀವ ನೀಡುವ ಉದ್ದೇಶ ಹೊಂದಲಾಗಿದೆ. ಅಲ್ಲಲ್ಲಿ ಅರ್ಧಕ್ಕೆ ನಿಂತಿರುವ ಒಳಚರಂಡಿಕಾಮಗಾರಿಯನ್ನು ಗುರುತಿಸಿ ಸಂಪೂರ್ಣ ಒಳಚರಂಡಿ ವ್ಯವಸ್ಥೆ ನಿರ್ಮಿಸಲು ₹ 6.99 ಕೋಟಿ ಹಣ ವೆಚ್ಚ ಮಾಡಲಾಗುತ್ತಿದೆ.
****
ಮೀಟರ್‌ ಅಳವಡಿಕೆ
ಪ್ರತಿದಿನ ಕುಡಿಯುವ ನೀರಿನ ಪೂರೈಕೆ ಜನರಿಗೆ ಖುಷಿಯ ವಿಷಯ. ಆದರೆ ಮಿತಿಮೀರಿದ ನೀರು ಬಳಕೆ ಮಾಡಿದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂಬುದೂ ಮಹತ್ವ ಪಡೆದಿದೆ.

ಬರಗಾಲ ತಾಂಡವವಾಡುತ್ತಿರುವ ಸನ್ನಿವೇಶದಲ್ಲಿ ನೀರಿನ ಸಂರಕ್ಷಣೆ ಮಾಡುವ ದೃಷ್ಟಿಯಿಂದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ ಪ್ರತಿ ನೀರಿನ ಸಂಪರ್ಕಕ್ಕೂ ಮೀಟರ್‌ ಅಳವಡಿಸಲು ನಿರ್ಧರಿಸಿದೆ. ಹೀಗಾಗಿ ಮಿತಿಮೀರಿದ ನೀರಿನ ಬಳಕೆಗೆ ಕಡಿವಾಣ ಬೀಳಲಿದೆ. ನಗರದಾದ್ಯಂತ 23 ಸಾವಿರ ಮೀಟರ್‌ ಅಳವಡಿಕೆಗೆ ಯೋಜನೆ ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.